ಶಾಸನ ಸಾಹಿತ್ಯ

ಶಾಸನ ಸಾಹಿತ್ಯ

ಶಾಸನ ಪದದ ಮೂಲಪದ ಸಂಸ್ಕೃತದ ʼಶಾಸ್‌ʼ. ಶಾಸ್‌ ಎಂದರೆ ಆಜ್ಞೆ, ಶಿಕ್ಷೆ ಎಂಬರ್ಥಗಳಿವೆ.

ಕರ್ನಾಟಕದಲ್ಲಿ ದೊರೆತ ಶಾಸನಗಳಲ್ಲಿ ದಾನ ಶಾಸನಗಳೇ ಹೆಚ್ಚಿನವು.

ಶಾಸನಗಳನ್ನು ಕೊರೆಯುತ್ತಿದ್ದ ಶಿಲ್ಪಿಗಳನ್ನು ರೂವಾರಿಗಳು (ರೂಪಕಾರಿ) ಎನ್ನುತ್ತಿದ್ದರು. ಈ ಶಾಸನ ಬರಹಗಾರರು ತಮ್ಮನ್ನು ತಾವು ಸರಸ್ವತಿ ಗಣದಾಸಿಗಳೆಂದು ಕರೆದುಕೊಳ್ಳುತ್ತಿದ್ದರು.

ಸರ್‌ ವಿಲಿಯಂ ಜೋನ್ಸ್ ಅವರು ವಿಜಯನಗರ ಸಾಮ್ರಾಜ್ಯದ ಅರಸರು ಕಂಚಿಯ ದೇವಾಲಯಕ್ಕೆ ದಾನ ನೀಡಿದ ವಿವರವಿದ್ದ ಸಂಸ್ಕೃತ ಶಾಸನವೊಂದನ್ನು ಶೋಧಿಸಿ A Royal Grant of Land in Carnata ಎಂಬ ಲೇಖನದಡಿಯಲ್ಲಿ ಪ್ರಕಟಿಸಿದರು. ಎಂ ಎಂ ಕಲ್ಬುರ್ಗಿಯವರ ಪ್ರಕಾರ ಇದು ಕರ್ನಾಟಕದ ಶಾಸನಗಳನ್ನು ಕುರಿತು ಪ್ರಕಟಿಸಲಾದ ಮೊದಲ ಲೇಖನವಾಗಿದೆ.

ಡಾ ಪಿ ಬಿ ದೇಸಾಯಿ ಅವರು ಶಾಸನಗಳ ಅಧ್ಯಯನದ ಇತಿಹಾಸವನ್ನು ತಿಳಿವಿನ ಯುಗ, ಕತ್ತಲೆಯ ಯುಗ ಮತ್ತು ಸಂಶೋಧನೆಯ ಯುಗ ಎಂದು ವಿಂಗಡಿಸಿದ್ದಾರೆ.

ಡಾ ಎಂ ಎಂ ಕಲ್ಬುರ್ಗಿ ಅವರು ಶಾಸನಾಧ್ಯಯನದ ಕಾಲವನ್ನು 3 ಹಂತಗಳಲ್ಲಿ ವಿಂಗಡಿಸಿದ್ದಾರೆ.

1 ಕರ್ನಲ್‌ ಮೆಕೆಂಜಿ ಯುಗ (1791 – 1837)

ಕರ್ನಾಟಕದಲ್ಲಿ ಮೊದಲು ಶಾಸನಗಳ ಸಂಗ್ರಹಣೆಗೆ ತೊಡಗಿದವರು ಕರ್ನಲ್‌ ಮೆಕೆಂಜಿ. ಇವರು ಕರ್ನಾಟಕದಲ್ಲಿ ಸು 8026 ಶಾಸನಗಳನ್ನು ಶೋಧಿಸಿ ಸಂಗ್ರಹಿಸಿದ್ದಾರೆ

1807 ರಲ್ಲಿ ಏಷಿಯಾಟಿಕ್‌ ರಿಸರ್ಚ್‌ ಪತ್ರಿಕೆಯ 9ನೇ ಸಂಪುಟದಲ್ಲಿ ಬುಕ್ಕರಾಯನ ಶಾಸನವನ್ನು ಪ್ರಕಟಿಸಿದರು. ಇದು ಕನ್ನಡದ ಮೊದಲ ಪ್ರಕಟಿತ ಶಾಸನ

ಬೀದರ್, ಕಲ್ಬುರ್ಗಿ, ಕೊಪ್ಪಳ, ರಾಯಚೂರು ಪ್ರದೇಶದ ಶಾಸನಗಳನ್ನು ಸಂಗ್ರಹಿಸಿ 1821 ರಲ್ಲಿ ಹೈದ್ರಾಬಾದ್‌ ಕರ್ನಾಟಕದ ಶಾಸನಗಳು ಎಂಬ ಹಸ್ತಪ್ರತಿಯ ಸಂಪುಟವನ್ನು ರಚಿಸಿದರು. ಡಾ ಶಿವಾನಂದ ಅವರು ಈ ಹಸ್ತಪ್ರತಿಯ ಸಂಪುಟವನ್ನು ಸಂಶೋಧಿಸಿ, ಪರಿಶೀಲಿಸಿ ಹೈದ್ರಾಬಾದ್‌ ಕರ್ನಾಟಕದ ಶಾಸನಗಳು ಎಂದು ಪ್ರಕಟಿಸಿದರು

2 ಸರ್‌ ವಾಲ್ಟರ್‌ ಇಲಿಯಟ್‌ ಯುಗ (1837 – 1870)

1837 ರಲ್ಲಿ Hindu Inscriptions ಎಂಬ ಲೇಖನವನ್ನು ಬರೆದರು ಮತ್ತು Carnatika Inscriptions ಎಂಬ ಹೆಸರಿನಲ್ಲಿ 565 ಶಾಸನಗಳ 2 ಸಂಪುಟಗಳನ್ನು ಪ್ರಕಟಿಸಿದರು

3 ಡಾ ಫ್ಲೀಟ್‌ ಮತ್ತು ಬಿ ಎಲ್‌ ರೈಸ್‌ ಯುಗ (1870 ರಿಂದ ಈಚೆಗೆ)

ಡಾ ಫ್ಲೀಟ್‌ ಮತ್ತು ಬಿ ಎಲ್‌ ರೈಸ್‌ ರನ್ನು ಶಾಸನಾಧ್ಯಯನ ಕ್ಷೇತ್ರದ ಅಶ್ವಿನಿ ದೇವತೆಗಳೆಂದು ಕರೆಯಲಾಗಿದೆ.

ಬಿ ಎಲ್‌ ರೈಸ್‌ ಅವರು Sanskrit and old Kannda Inscriptions ಎಂಬ ಲೇಖನ ಬರೆದರು. Pali, Sanskrit and old Kannda Inscriptions from the Bombay Presidency, Madras Presidency and Mysore ಎಂಬ ಹೆಸರಿನಲ್ಲಿ 9 ಸಂಪುಟಗಳಲ್ಲಿ ತಾವು ಶೋಧಿಸಿದ ಶಾಸನಗಳನ್ನು ಪ್ರಕಟಿಸಿದರು. Some records of the Rashtrakuta Kings of Malakheda ಎಂಬ ಹೆಸರಿನಲ್ಲಿ 20 ಶಾಸನಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ Pali, Sanskrit and Old Kannada Inscriptions ಎಂಬ ಹೆಸರಿನಲ್ಲಿ ಸಹ ಅನೇಕ ಶಾಸನಗಳನ್ನು ರಚಿಸಿದ್ದಾರೆ.

ಡಾ ಬಿ ಎಲ್‌ ರೈಸ್‌ ರನ್ನು ಕರ್ನಾಟಕ ಶಾಸನಾಧ್ಯಯನ ಪಿತಾಮಹ ಎಂದು ಕರೆಯುತ್ತಾರೆ

ಡಾ ಬಿ ಎಲ್‌ ರೈಸ್‌ ರು ಎಪಿಗ್ರಾಫಿಯಾ ಕರ್ನಾಟಕದ 12 ಸಂಪುಟಗಳನ್ನು ಹೊರತಂದರು. ಜೊತೆಗೆ 1200 ಶಾಸನಗಳನ್ನು ಸಂಗ್ರಹಿಸಿದರು. 1879 ರಲ್ಲಿ Mysore Inscriptions ಎಂಬ 175 ಶಾಸನಗಳ ಸಂಪುಟವನ್ನು ಪ್ರಕಟಿಸಿದರು. 1886 ರಲ್ಲಿ Coorg Inscriptions ಎಂಬ ಶಾಸನ ಸಂಪುಟವನ್ನು ಮತ್ತು 1900 ರಲ್ಲಿ The Inscriptions ಎಂಬ ಪುಸ್ತಕವನ್ನು ಪ್ರಕಟಿಸಿದರು. ಎಪಿಗ್ರಾಫಿಯ ಕರ್ನಾಟಿಕ ಶಾಸನ ಸಂಪುಟಗಳಲ್ಲಿ 12 ಶಾಸನ ಸಂಪುಟಗಳನ್ನು ರೈಸ್‌ ಪ್ರಕಟಿಸಿದರು.

 

ಶಾನಸಗಳನ್ನು ಕುರಿತು ಸಂಶೋಧಕರ ಹೇಳಿಕೆಗಳು

ಫ್ಲೀಟ್‌: ಪ್ರಾಚ್ಯಯುಗದ ಸಂಶೋಧನಾ ಪಥದ ಐತಿಹಾಸಿಕ ಫಲಿತಾಂಶಗಳಿಗೆ ಶಾಸನಗಳೇ ಬುನಾದಿ”.

ಡಾ ಎಂ ಚಿದಾನಂದಮೂರ್ತಿ: “ಶಾಸನಗಳು ಕನ್ನಡ ಸಾಹಿತ್ಯದ ತಲಕಾವೇರಿ”.

ಡಾ ದೀಕ್ಷಿತ್‌: “ಶಾಸನಗಳು ನಮ್ಮ ನಾಡಿನ ಅಪೂರ್ವವಾದ ಸಂಪತ್ತು”

ಡಾ ಎಂ ಎಂ ಕಲ್ಬುರ್ಗಿ: “ಶಾಸನಗಳನ್ನು ಓದುತ್ತ ನಡೆದೆ, ಓದಿಸುತ್ತಾ ಸಾಗಿದೆ, ಅದರ ಆಳಕ್ಕೆ ಇಳಿದಂತೆ ಶಿಲೆಯ ಮರೆಯ ಸುವರ್ಣವನ್ನು ಕಂಡೆ”.

ಡಾ ವಿ ಶಿವಾನಂದ: “ಸಂಶೋಧಕರಿಗೆ ಶಾಸನಗಳು ಅತ್ಯಂತ ಪ್ರಾಮಾಣಿಕವಾದ, ಶುದ್ಧವಾದ, ನಿಶ್ಚಳವಾದ ಕಣ್ಣುಗಳಿದ್ದಂತೆ”.

ಡಾ ಆರ್‌ ಸಿ ಹಿರೇಮಠ: “ಶಾಸನಗಳು ಕರ್ನಾಟಕದ ಪ್ರಾಚೀನ ಇತಿಹಾಸದ ಮೂಕ ಸಾಕ್ಷಿಗಳು”.

 

ಶಾಸನಗಳ ಪ್ರಕಾರಗಳು

1 ದಾನಶಾಸನ : ರಾಜನು ವ್ಯಕ್ತಿಗೆ ಅಥವಾ ಸಂಸ್ಥೆಗೆ ದಾನಕೊಟ್ಟದ್ದನ್ನು ಹೇಳುವ ಶಾಸನ

2 ಪ್ರಶಸ್ತಿ ಶಾಸನ : ರಾಜನ ಕೀರ್ತಿ ಮತ್ತು ದಿಗ್ವಿಜಯವನ್ನು ಹೇಳುವ ಶಾಸನ

3 ವೀರಗಲ್ಲುಗಳು : ಯುದ್ಧದಲ್ಲಿ ಮಡಿದ ವೀರನ ನೆನಪಿಗಾಗಿ ಕಟ್ಟಿದ ಕಲ್ಲುಗಳು

4 ಮಾಸ್ತಿಗಲ್ಲು : ಗಂಡನ ಮರಣಾನಂತರ ಆತನ ಜೊತೆಗೆ ದೇಹತ್ಯಾಗ ಮಾಡಿದ ಹೆಣ್ಣಿನ ಸ್ಮರಣಾರ್ಥ ನಿರ್ಮಿಸಿದ ಕಲ್ಲುಗಳು. ಮಾಸ್ತಿಗಲ್ಲುಗಳನ್ನು ಸಹಾನುಭೂತಿ ಕಲ್ಲು, ಮದವಳಿಗೆ ಕಲ್ಲು, ತೋಳ್‌ ಕೈಗಲ್ಲು, ವ್ಯಾಸನ ತೋಳು ಎಂತಲು ಸಹ ಕರೆಯುತ್ತಾರೆ.

5 ನಿಷದಿ ಕಲ್ಲು : ನಿಷದಿ ಪದದ ಮೂಲಪದ ನಿಷತ್‌ (ಕುಳಿತಿರುವುದು). ಸಲ್ಲೇಖನವ್ರತದಿಂದ ದೇಹತ್ಯಾಗ ಮಾಡಿದ ಜೈನಮುನಿಗಳ ಕುರಿತಾದ ಕಲ್ಲುಗಳು

6 ಕೂಟಶಾಸನ : ಆಸ್ತಿಗಾಗಿ, ಅಧಿಕಾರಕ್ಕಾಗಿ, ಪ್ರತಿಷ್ಠೆಗಾಗಿ ಕೆತ್ತಿಸಿದ ನಕಲಿ ಶಾಸನಗಳು

7 ಯೂಪಶಾಸನ : ಯಜ್ಞಕ್ಕಾಗಿ ಪ್ರಾಣಿಬಲಿ ನೀಡಿದ ಮಾಹಿತಿ ಇರುವ ಶಾಸನ

 

ಪ್ರಮುಖ ಕನ್ನಡ ಶಾಸನಗಳು

ಬ್ರಹ್ಮಗಿರಿ ಶಾಸನ (ಸಾ.ಶ.ಪೂ 272-232)

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕಿನ ಸಿದ್ದಾಪುರ ಗ್ರಾಮದ ಬ್ರಹ್ಮಗಿರಿ ಬೆಟ್ಟದ ಮೇಲೆ ಈ ಶಾಸನವಿದೆ. 1891 ರಲ್ಲಿ ಬಿ ಎಲ್ ರೈಸ್ ಮೊದಲ ಬಾರಿಗೆ ಈ ಶಾಸನವನ್ನು ಪತ್ತೆಹಚ್ಚಿದರು.

ಈ ಶಾಸನವನ್ನು ಬರೆದವನು ಲಿಪಿಕಾರ ಚಪಡ. ಶಾಸನವು ಬ್ರಾಹ್ಮೀ ಲಿಪಿಯಲ್ಲಿದ್ದು ಕೊನೆಯ ಸಾಲು ಮಾತ್ರ ಖರೋಷ್ಠಿ ಲಿಪಿಯಲ್ಲಿದೆ. ಈ ಶಾಸನವು ಲಘುಪ್ರಸ್ಥರ ಶಾಸನಗಳ ಗುಂಪಿಗೆ ಸೇರುತ್ತದೆ

ಈ ಶಾಸನದಲ್ಲಿ ಕನ್ನಡದ ಮೊದಲ ಪದ ಎನ್ನಲಾದ ಇಸಿಲ ಎಂಬ ಪದವನ್ನು ಕಾಣುತ್ತೇವೆ. ಇಸಿಲ ಎಂದರೆ ಕೋಟೆಯೊಳಗಿನ ನಾಡು ಎಂದರ್ಥ. ಈ ಇಸಿಲ ಪದವು ಇದುವರೆಗೆ ದೊರೆತ ಕನ್ನಡ ಪದಗಳಲ್ಲಿಯೇ ಅತಿ ಪ್ರಾಚೀನವಾದುದು. ಡಿ ಎಲ್ ನರಸಿಂಹಾಚಾರ್ಯರು ಈ ಇಸಿಲ ಪದವನ್ನು ಮೊದಲ ಬಾರಿಗೆ ಗುರುತಿಸಿದರು. ಇಸಿಲ ಎಂಬ ಪದದ ಮೂಲರೂಪ ಎಯಿಲ್/ಎಯಿಲಂ ಆಗಿದ್ದು, ಈ ಎಯಿಲ್/ಎಯಿಲಂ ಪದವು ಮೂಲ ದ್ರಾವಿಡ ಭಾಷೆಯ ಶಬ್ದವಾಗಿರಬಹುದು ಎಂಬುದು ವಿದ್ವಾಂಸರ ಅಭಿಪ್ರಾಯ. ಕಾರಣ ತಮಿಳಿನಲ್ಲಿ ಎಯಿಲ್ ಎಂಬ ಪದಕ್ಕೆ ಕೋಟೆ ಎಂದು ಅರ್ಥ.

 

ಚಂದ್ರವಳ್ಳಿ ಶಾಸನ (ಸಾ ಶ ಸು 400)

ಚಿತ್ರದುರ್ಗದ ಚಂದ್ರವಳ್ಳಿ ಕೆರೆಯ ಬಳಿ ದೊರೆತ ಬಂಡೆಯ ಮೇಲೆ ಈ ಶಾಸನವನ್ನು ಕೆತ್ತಲಾಗಿದೆ. ಈ ಶಾಸನವನ್ನು ಡಾ. ಎಂ ಎಚ್ ಕೃಷ್ಣ ಎಂಬುವವರು ಶೋಧಿಸಿದರು. ಪ್ರಾಕೃತ ಭಾಷೆಯಲ್ಲಿರುವ ಈ ಶಾಸನವನ್ನು ಬ್ರಾಹ್ಮಿ ಲಿಪಿಯಲ್ಲಿ ಕೆತ್ತಲಾಗಿದೆ. ಈ ಶಾಸನವನ್ನು ಮಯೂರವರ್ಮನು ಕೆತ್ತಿಸಿದನು. ಇದೊಂದು ಪ್ರಶಸ್ತಿ ಶಾಸನವಾಗಿದೆ.

 

ಸಿಂಹಕಟಾಂಜನ ಶಾಸನ (ಸಾ ಶ ಸು 430?)

ಈ ಶಾಸನದ ಕಾಲವು ಇನ್ನು ಖಚಿತವಾಗಿಲ್ಲ. ಈ ಶಾಸನವು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತಾಳಗುಂದದ ಪ್ರಣವೇಶ್ವರ ದೇವಸ್ಥಾನದಲ್ಲಿದೆ. ಟಿ ಎಂ ಕೇಶವ ಎಂಬುವವರು ಇದನ್ನು 2014 ರಲ್ಲಿ ಶೋಧಿಸಿದರು. ಭಾರತೀಯ ಪುರಾತತ್ವ ಇಲಾಖೆಯು 2013 ರಲ್ಲಿ ಈ ಶಾಸನವನ್ನು ಕನ್ನಡದ ಅತ್ಯಂತ ಪ್ರಾಚೀನ ಶಾಸನವೆಂದು ಅಧಿಕೃತವಾಗಿ ಪ್ರಕಟಿಸಿತು.

ಈ ಶಾಸನವು ಸಂಸ್ಕೃತದ ಮಾತ್ರಾಸಮಕ ಎಂಬ ಛಂದಸ್ಸಿನಲ್ಲಿದೆ. ಶಾಸನವು 7 ಸಾಲುಗಳನ್ನು ಹೊಂದಿದ್ದು ಅದರಲ್ಲಿ ಕೊಟ್ಟಾರ್, ನಾಲ್ಕು, ಬೊಯ್ಗರಾ, ನಾಗಣ, ಪುಲಿಂದಿಗೆ, ನಾವಿದ ಮತ್ತು ಕೊಳ್ಗೆ ಎಂಬ ಕನ್ನಡ ಪದಗಳಿವೆ. ಕದಂಬ ದೊರೆಯೊಬ್ಬ (ರಘುಪತಿವರ್ಮ?) ವಜಿನಾಗಯ್ಯ ಎಂಬ ಅಂಬಿಗನಿಗೆ ದಾನ ನೀಡಿದುದೆ ಈ ಶಾಸನದ ಸಾರ.

 

ಹಲ್ಮಿಡಿ ಶಾಸನ (ಸಾ ಶ ಸು 450)

1936 ರಲ್ಲಿ ಡಾ. ಎಂ.ಎಚ್ ಕೃಷ್ಣ ಎಂಬುವವರು ಹಾಸನ ಜಿಲ್ಲೆಯ ಹಲ್ಮಿಡಿ ಎಂಬಲ್ಲಿ ಈ ಶಾಸನವನ್ನು ಶೋಧಿಸಿದರು. ಈ ಶಾಸನದ ಲಿಪಿಯು ದಾಕ್ಷಿಣಾತ್ಯ ಬ್ರಾಹ್ಮಿಯಾಗಿದ್ದು ಪಲ್ಲವ ಗ್ರಾಂಥಿಕ ರಚನೆಯಾಗಿದೆ ಮತ್ತು ಭಾಷೆ ಪೂರ್ವದ ಹಳೆಗನ್ನಡ ಎಂದು ಬಿ ಎಲ್ ರೈಸ್, ಡಿ ಎಲ್ ನರಸಿಂಹಾಚಾರ್ ಮತ್ತು ಆರ್ ನರಸಿಂಹಾಚಾರ್ ಗುರುತಿಸಿದ್ದಾರೆ.

ಈ ಶಾಸನವನ್ನು ದಾನ ಶಾಸನ, ಪ್ರಶಸ್ತಿ ಶಾಸನ ಮತ್ತು ವೀರಗಲ್ಲು ಎಂದು ಸಹ ಹೇಳಲಾಗುತ್ತದೆ. ಈ ಶಾಸನದಲ್ಲಿ 16 ಸಾಲುಗಳಿವೆ. ಇದರಲ್ಲಿ 20 ರಿಂದ 27 ಕನ್ನಡ ಪದಗಳಿವೆ. ಶಾಸನವು ಅನುಷ್ಟುಪ್ ಛಂದಸ್ಸಿನ ಸಂಸ್ಕೃತ ಶ್ಲೋಕದಿಂದ ಆರಂಭವಾಗುತ್ತದೆ.

ಈ ಶಾಸನವನ್ನು ಕೆತ್ತಿಸಿದವನು ಕದಂಬ ಅರಸ ಕಾಕುಸ್ತವರ್ಮ. ಇಲ್ಲಿ ಕಾಕುಸ್ತವರ್ಮನ ಶತ್ರುವಾದ ಕಲಭೋರ ಎಂಬ ಅರಸನ ಪ್ರಸ್ತಾಪವಿದೆ. ನರಿದಾವಿಳೆ ನಾಡನ್ನು ಳುತ್ತಿದ್ದ ಮೃಗೇಶ ಮತ್ತು ನಾಗೇಂದ್ರ ಎಂಬ ಅರಸರು, ಕೇಕೆಯ ಮತ್ತು ಪಲ್ಲವರೊಡನೆ ಹೋರಾಡಿ ಜಯಗಳಿಸಿದ ಎಲ್ಲಭಟಾರಿಯ ಮಗನಾದ ವಿಜಅರಸನಿಗೆ ಪಲ್ಮಿಡಿ ಮತ್ತು ಮೂಳವಳ್ಳಿಗಳನ್ನು ಬಾಳ್ಗಚ್ಚಾಗಿ (ಯುದ್ಧದಲ್ಲಿ ಜಯಿಸಿದ್ದಕ್ಕಾಗಿ ನೀಡುವ ಪ್ರಶಸ್ತಿ) ಕೊಟ್ಟದ್ದನ್ನು ಈ ಶಾಸನ ತಿಳಿಸುತ್ತದೆ.

ಶಾಸನದಲ್ಲಿ ಕುರುಮ್ಬಿಡಿ ಎಂಬ ಪದವಿದೆ. ಕುರುಮ್ಬು ಎಂದರೆ ಕೋಟೆ. ಇದು ಕೋಟೆಯನ್ನು ಕಾಯುತ್ತಿದ್ದವನಿಗೆ ಗೌರವಸೂಚಕವಾಗಿ ಬಳಸುತ್ತಿದ್ದ ಪದವಾಗಿದೆ. ಎಂದು ಡಾ ಜಿ ಮಂಜುನಾಥ ಎಂಬುವವರು ತಿಳಿಸಿದ್ದಾರೆ.

ಶಾಸನದಲ್ಲಿ ಪತ್ತೊನ್ದಿ ಎಂಬ ಪದವಿದ್ದು ಇದು ಹತ್ತನೇ ಒಂದು ಭಾಗವಾಗಿ ಧಾನ್ಯರೂಪದಲ್ಲಿ ನೀಡುತ್ತಿದ್ದ ತೆರಿಗೆಯಾಗಿತ್ತು.

ಈ ಶಾಸನದ ಪ್ರಮುಖ ಲಕ್ಷಣಗಳು:

ಸಂಸ್ಕೃತ ದೀರ್ಘ ಸಮಾಸಗಳು, ಪೆತ್ತಜಯನ್ ಎಂಬ ಅರಿಸಮಾಸ ಮತ್ತು ಪೊಗಳೆಪೊಟ್ಟಣ ಎಂಬ ಕರ್ಮಣಿ ರೂಪ ಪದಗಳು ಈ ಶಾಸನದಲ್ಲಿ ಕಂಡುಬಂದಿವೆ.

ಅನ್ ಎಂಬ ದ್ವಿತೀಯ ವಿಭಕ್ತಿ ಆನ್ ಆಗಿರುವುದು, ಉದಾ: ಅದಾನ್.

ಅ ಎಂಬ ಷಷ್ಠಿ ವಿಭಕ್ತಿ ಆ ಆಗಿರುವುದು,‌ ಉದಾ: ಕಲಭೋರನಾ, ದೇಶದಾ.

ಸಪ್ತಮಿ ವಿಭಕ್ತಿಗೆ ʼಎʼಕಾರ ಮತ್ತು ಉಳ್ ಪ್ರತ್ಯಯದ ಬಳಕೆ, ಉದಾ: ಸಮಕ್ಷದೆ, ಆಹವದುಳ್‌, ನಾಡುಳ್.‌

ಭೂತಕಾಲದ ಪ್ರಥಮ ಪುರುಷ ಬಹುವಚನದ ಆಖ್ಯಾತ ಪ್ರತ್ಯಯ (ಅರ್>ಆರ್) ದೀರ್ಘವಾಗಿರುವುದು ಉದಾ: ಒಟ್ಟಾರ್, ಬಿಟ್ಟಾರ್, ಕೊಟ್ಟಾರ್.

ʼಇʼಕಾರಕ್ಕೆ ಬದಲಾಗಿ ʼಎʼಕಾರದ ಬಳಕೆ ಉದಾ: ಎರಿದು.

ಸರೇಪ ವ್ಯಂಜನಗಳು ದ್ವಿತ್ವವಾಗಿರುವುದು,

 

ಗುಡ್ನಾಪುರ ಶಿಲಾಶಾಸನ (ಸಾ ಶ ಸು 500)

ಕದಂಬ ಅರಸ ರವಿವರ್ಮ ಈ ಶಾಸನವನ್ನು ಕೆತ್ತಿಸಿದನು. 27 ಸಾಲುಗಳುಳ್ಳ ಈ ಶಾಸನವು ಸಂಸ್ಕೃತ ಭಾಷೆಯಲ್ಲಿದ್ದು ಬ್ರಾಹ್ಮಿ ಲಿಪಿಯಲ್ಲಿ ಕೆತ್ತಲಾಗಿದೆ. ಈ ಶಾಸನದಲ್ಲಿ ಹೇಳಿರುವಂತೆ ಮಯೂರವರ್ಮನ ತಂದೆ ಬಂಧುಶರ್ಮ ಮತ್ತು ತಾತ ವೀರಶರ್ಮ. ರವಿವರ್ಮನು ಮನ್ಮಥನಿಗೆ ಕಾಮಜಿನಾಲಯವನ್ನು ನಿರ್ಮಿಸಿದ್ದರ ವಿವರಣೆ ಶಾಸನದಲ್ಲಿದೆ.

 

ಕವಡಿ ಶಾಸನ (ಸಾ ಶ ಸು 6ನೇ ಶ)

ಶಿವಮೊಗ್ಗ ಜಿಲ್ಲೆಯ ಸೊರಬ ಎಂಬಲ್ಲಿ ಈ ಶಾಸನವಿದೆ. ಕದಂಬ ಅರಸ ರವಿವರ್ಮ ಮಡಿದ ನಂತರ ಅವನ ಪತ್ನಿಯು ಅವನೊಡನೆ ಸಹಗಮನ ಮಾಡಿದಳು ಎಂಬುದು ಈ ಶಾಸನದ ಸಾರ. ಇದು ಕನ್ನಡ ಮೊದಲ ಮಾಸ್ತಿಗಲ್ಲು ಶಾಸನ.

 

ತಮ್ಮಟಕಲ್ಲು ಶಾಸನ (ಸಾ ಶ ಸು 500)

ಚಿತ್ರದುರ್ಗದ ತಮ್ಮಟಕಲ್ಲು ಎಂಬಲ್ಲಿ ಬಿ ಎಲ್ ರೈಸ್ ಈ ಶಾಸನವನ್ನು ಶೋಧಿಸಿದರು. ಇದು ಕನ್ನಡ ಸಾಹಿತ್ಯದ ಮೊದಲ ಪದ್ಯವೆಂದು ವಿದ್ವಾಂಸರ ಅಭಿಪ್ರಾಯ. 4 ಸಾಲುಗಳುಳ್ಳ ಈ ಶಾಸನದ ಭಾಷೆಯು ಪೂರ್ವದ ಹಳೆಗನ್ನಡ. ಇದು ಕರ್ನಾಟಕದ ಮೊದಲ ವೀರಗಲ್ಲು ಶಾಸನವೂ ಸಹ ಆಗಿದೆ.

ಗುಣಮಧುರಾಂಕ ಎಂಬ ಇತಿಹಾಸ ಪುರುಷನ ಬಗ್ಗೆ ಶ್ಲೇಷಾಲಂಕಾರದಲ್ಲಿ ವರ್ಣಿಸಲಾಗಿದೆ. ಬಿಣಮಣಿ ಅನ್ತು ಭೋಗಿ ಬಿಣದುಳ್ಮಳಿಲ್ಮನದೋನ್ ಎಂಬ ಸಾಲಿನಿಂದ ಈ ಶಾಸನ ಆರಂಭವಾಗುತ್ತದೆ.

ಈ ಶಾಸನವು ಅತ್ಯಷ್ಠಿ ಛಂದಸ್ಸಿನ 17 ಅಕ್ಷರಗಳ ಕನಕಾಬ್ಜಿನಿ ವೃತ್ತದಲ್ಲಿದೆ ಎಂದು ಕೆಲವು ವಿದ್ವಾಂಸರು, ಅವಿತತ (ಕರ್ನಾಟಕ) ಎಂಬ ವೃತ್ತದಲ್ಲಿದೆ ಎಂದು ಕೆಲವು ವಿದ್ವಾಂಸರು ಹೇಳಿದ್ದಾರೆ.

 

ಬಾದಾಮಿ ಬಂಡೆ ಶಾಸನ (ಸಾ ಶ ಸು 543)

ಚಾಲುಕ್ಯ ಅರಸ ಒಂದನೇ ಪುಲಿಕೇಶಿಯ ಅಶ್ವಮೇಧಯಾಗವನ್ನು ಕುರಿತು ಈ ಶಾಸನ ತಿಳಿಸುತ್ತದೆ. ಕರ್ನಾಟಕದಲ್ಲಿ ಮೊದಲಬಾರಿಗೆ ಶಕಕಾಲವನ್ನು ಕುರಿತು ಉಲ್ಲೇಖಿಸಿದ ಶಾಸನವಿದು.

 

ಬಾದಾಮಿ ಮಹಾಕೂಟ ಶಾಸನ (ಸಾ ಶ ಸು 578)

ಬಾದಾಮಿಯ ಮಹಾಕೂಟ ಎಂಬಲ್ಲಿ ಈ ಶಾಸನವನ್ನು ಕೆತ್ತಲಾಗಿದೆ. 16 ಸಾಲುಗಳ ಈ ಶಾಸನವು ಸಂಸ್ಕೃತದಲ್ಲಿದ್ದು ಇದನ್ನು ಕನ್ನಡ ಲಿಪಿಯಲ್ಲಿ ಕೆತ್ತಲಾಗಿದೆ. ಶಾಸನದ ಪ್ರಕಾರ ಮಹಾಕೂಟ ಹಿಂದಿನ ಹೆಸರು ಮಕುಟ / ಮಗದ ಎಂದಿತ್ತು. ಈ ಶಾಸನವು ಚಾಲುಕ್ಯ ಅರಸ ಮಂಗಳೇಶನ ದಾನಗುಣ ಹಾಗೂ ಧಾರ್ಮಿಕ ಕೊಡುಗೆಗಳನ್ನು ತಿಳಿಸುತ್ತದೆ. ಮಕುಟನಾಥೇಶ್ವರನ ಉಲ್ಲೇಖವಿರುವುದರಿಂದ ಡಾ ಫ್ಲೀಟ್ ಇದನ್ನು ಶೈವಶಾಸನ ಎಂದು ಕರೆದಿದ್ದಾರೆ.

 

ಚಾಲುಕ್ಯ ಮಂಗಳೇಶನ ಗದ್ಯಶಾಸನ (ಸಾ ಶ ಸು 597 - 609)

ಈ ಶಾಸನವು ಪೂರ್ವದ ಹಳೆಗನ್ನಡದಲ್ಲಿದೆ. ಮಂಗಳೇಶನು ಕಲ್ಮನಗೆ (ಶ್ರೀವಿಷ್ಣುವಿಗೆ) ಲಂಜಿಗೇಸರ ಎಂಬ ಗ್ರಾಮವನ್ನು ಸೇವಾರ್ಥವಾಗಿ ನೀಡಿದ್ದನ್ನು, ಹಾಗೂ ದೇವತಾರ್ಚನೆಗೆ ಹೂವು ನೀಡುತ್ತಿದ್ದ ಮಾಲೆಗಾರನಿಗೆ ಅರ್ಧವಿಸ (ತೆರಿಗೆಯಲ್ಲಿ ವಿನಾಯಿತಿ) ನೀಡಿದ್ದನ್ನು ಈ ಶಾಸನ ತಿಳಿಸುತ್ತದೆ.

 

ಐಹೊಳೆ ಶಾಸನ (ಸಾ.ಶ ಸು 634)

ಶಾಸನವು 19 ಸಾಲುಗಳಿಂದ ಕೂಡಿದ್ದು ಜಿನಸ್ತುತಿಯಿಂದ ಆರಂಭವಾಗುತ್ತದೆ. ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಐಹೊಳೆ ಗ್ರಾಮದ ಮೇಗುತಿ ದೇವಾಲಯದಲ್ಲಿ ಈ ಶಾಸನವಿದೆ. ಶಾಸನದ ಭಾಷೆ ಸಂಸ್ಕೃತ ಲಿಪಿ ಹಳೆಗನ್ನಡ. ಶಾಸನದ ಕರ್ತೃ ರವಿಕೀರ್ತಿ.

ಶಾಸನಕಾರ ತನ್ನನ್ನು ಕಾಳಿದಾಸ ಮತ್ತು ಭಾರವಿಯೊಂದಿಗೆ ಹೋಲಿಸಿಕೊಂಡಿದ್ದಾನೆ. ಕಾಳಿದಾಸನ ರಘುವಂಶ ಮತ್ತು ಭಾರವಿಯ ಕಿರಾತಾರ್ಜುನೀಯ ಕಾವ್ಯಗಳ ಕೆಲವು ಪದ್ಯಗಳು ಈ ಶಾಸನದಲ್ಲಿವೆ.

ಈ ಶಾಸನದಲ್ಲಿ ಸಾ.634 ರಲ್ಲಿ ನಡೆದ ನರ್ಮದಾನದಿ ಕಾಳಗದಲ್ಲಿ ಇಮ್ಮಡಿ ಪುಲಿಕೇಶಿಯು ಹರ್ಷವರ್ಧನನನ್ನು ಸೋಲಿಸಿದ ವಿವರವಿದೆ ಅಲ್ಲದೇ ಪುರಿ ಬಂದರನ್ನು ಪಶ್ಚಿಮ ಕರಾವಳಿಯ ಲಕ್ಷ್ಮಿ ಎಂದು ವರ್ಣಿಸಲಾಗಿದೆ.

 

ಬಳ್ಳಿಗಾವೆ ಶಾಸನ (ಸಾ.ಶ ಸು 690)

ಚಾಲುಕ್ಯ ಅರಸ ವಿನಯಾದಿತ್ಯನ ಕಾಲದಲ್ಲಿ ನಾಗರಖಂಡವನ್ನು ಆಳುತ್ತಿದ್ದ ಸೇಂದ್ರರ ಪೊಗಿಲ್ಲಿ ಎಂಬ ಸಾಮಂತನ ನಾಡಿನಲ್ಲಿ ಕಾಂದರ್ಬ ಮತ್ತು ದಾಸಡಿ ಎಂಬುವವರು ತಮ್ಮ ಧನಕನಕಾದಿಗಳನ್ನು ದಾನ ಮಾಡಿದರೆಂಬುದು ಶಾಸನದ ಸಾರ

 

ಮಹಾಕೂಟ ಶಾಸನ (ಸಾ.ಶ ಸು 700)

ಚಾಲುಕ್ಯ ವಿಜಯಾದಿತ್ಯನ ಪ್ರಿಯತಮೆಯಾದ ಸೂಳೆ ವಿನಾಪೊಟಿ ಎಂಬಾಕೆ ಹಿರಣ್ಯಗರ್ಭವೆಂಬ ಮಹಾದಾನವನ್ನು ಮಾಡಿದಳು ಮತ್ತು ಮಂಗಲವೆಂಬ ಗ್ರಾಮದಲ್ಲಿ ಭೂದಾನ ಮಾಡಿದಳೆಂಬುದನ್ನು ಶಾಸನದಲ್ಲಿ ಬರೆಯಲಾಗಿದೆ.

 

ಶ್ರವಣಬೆಳಗೊಳ ಶಾಸನ (ಸಾ.ಶ ಸು 700)

ಶ್ರವಣ (ಶ್ರಮಣ) ಎಂದರೆ ಜೈನಸನ್ಯಾಸಿ. ಬೆಳಗೊಳ ಎಂದರೆ ಬಿಳಿಯ ಕೊಳ.

ನಂದಿಸೇನಮುನಿಯು ಸದ್ಗತಿ ಹೊಂದಿದ ವಿವರವಿರುವ ಈ ಶಾಸನವು ಹಾಸನ ಜಿಲ್ಲೆಯ ಶ್ರವಣಬೆಳಗೊಳದ ಚಂದ್ರಗಿರಿ ಬೆಟ್ಟದ ಮೇಲಿದೆ. ಜೈನ ಧರ್ಮದ ಶ್ರೇಷ್ಠತೆಯನ್ನು ಸಾರಲು ಕೆತ್ತಲಾದ ಈ ಶಾಸನ ಒಂದು ನಿಷದಿಗಲ್ಲು. ಶಾಸನದ ಭಾಷೆ ಹಳೆಗನ್ನಡವಾದರೂ ಪೂರ್ವದ ಹಳೆಗನ್ನಡದ ಕೆಲವು ಪದಗಳು ಸಹ ಬಳಕೆಯಾಗಿವೆ. ಈ ಶಾಸನವನ್ನು ಮಹಾಸ್ರಗ್ಧರಾ ವೃತ್ತದಲ್ಲಿ ಕೆತ್ತಲಾಗಿದೆ.

ಈ ಶಾಸನವನ್ನು ಮೊದಲು ಓದಿದವರು ಬಿ ಎಲ್ ರೈಸ್. ಆದರೆ ಇದನ್ನು 1818 ರಲ್ಲಿ ಜೆ ಎಫ್‌ ಫ್ಲೀಟ್‌ ಇಂಡಿಯನ್‌ ಆಂಟಿಕ್ವೆರಿ ಎಂಬ ಪತ್ರಿಕೆಯಲ್ಲಿ ಮೊದಲಬಾರಿಗೆ ಪ್ರಕಟಿಸಿದರು. ಶಾಸನದಲ್ಲಿ ಕನ್ನಡಕ್ಕಿಂತ ಹೆಚ್ಚಾಗಿ ಸಂಸ್ಕೃತ ಪದಗಳು ಮತ್ತು ಉದ್ದನೆಯ ಸಮಾಸ ಪದಗಳಿವೆ.

ರ ಕಾರ ಪ್ರಾಸ, ಉಪಮಾಲಂಕಾರದ ಬಳಕೆ, ಅನುಸ್ವಾರದ ಬದಲಾಗಿ ನ ಕಾರದ ಬಳಕೆ, ಸಪ್ತಮೀ ವಿಭಕ್ತಿ ಪ್ರತ್ಯಯ ಉಳ್‌ ಎಂದಿರುವುದು, ಅಖ್ಯಾತ ಪ್ರತ್ಯಯದ ದೀರ್ಘ ಪ್ರಯೋಗ ಈ ಶಾಸನದ ವಿಶೇಷತೆಗಳು.

ಕೊಳತ್ತೂರು ಸಂಘದ ಮುನಿ, ವೇಗೂರಿನ ಸರ್ವಜ್ಞ ಭಟ್ಟಾರಕ, ಕಳಂತೂರಯತಿ, ಮಹಾಸೇನಮುನಿ, ಚಂದ್ರಾದೇವಾಚಾರ್ಯ, ಅನಂತಮತಿಗಂತಿ ಮತ್ತು ಇತ್ಯಾದಿ ಜೈನ ಮುನಿಗಳು ತಪಸ್ಸು ಮಾಡಿ ಸದ್ಗತಿ ಪಡೆದ ಇನ್ನಿತರ ಶಾಸನಗಳು ಸಹ ಇಲ್ಲಿವೆ.

 

ಕಪ್ಪೆ ಅರಭಟ್ಟನ ಶಾಸನ (ಸಾ.ಶ ಸು 700)

10 ಸಾಲುಗಳ ಈ ವೀರಗಲ್ಲು ಶಾಸನ (ಬಂಡೆಗಲ್ಲು ಶಾಸನ) ಬಾಗಲಕೋಟೆ ಜಿಲ್ಲೆಯ ಬಾದಾಮಿ ಸಮೀಪದ ತಟ್ಟುಕೋಟೆ ಎಂಬ ಸ್ಥಳದಲ್ಲಿ ದೊರೆತಿದೆ. ಶಾಸನದ ಭಾಷೆ ಹಳೆಗನ್ನಡ. ಆದರೆ ಭಾಷೆಯು ಪೂರ್ವದ ಹಳೆಗನ್ನಡದಿಂದ ಹಳೆಗನ್ನಡದ ಕಡೆಗೆ ಬದಲಾಗುತ್ತಿರುವುದನ್ನು ಕಾಣತ್ತೇವೆ. 1881 ರಲ್ಲಿ ಜೆ ಎಫ್ ಫ್ಲೀಟ್ ಈ ಶಾಸನವನ್ನು ಇಂಡಿಯನ್‌ ಆಂಟಿಕ್ವೆರಿಯ 10ನೇ ಸಂಪುಟದಲ್ಲಿ ಪ್ರಕಟಿಸಿದರು.

1 ಮತ್ತು 2ನೇ ಸಾಲುಗಳು ಗದ್ಯದಲ್ಲಿವೆ. 3 ಮತ್ತು 4 ನೇ ಸಾಲುಗಳು ಅನುಷ್ಟುಪ್ ಛಂದಸ್ಸಿನಲ್ಲಿವೆ. 5 ರಿಂದ 10ನೇ ಸಾಲಿನ ಪದ್ಯಗಳು ನೋಡಲು 2 ಸಾಲಿನ ಗದ್ಯದಂತಿದ್ದರೂ ವಾಸ್ತವದಲ್ಲಿ ಅವು ತ್ರಿಪದಿಯ ಪದ್ಯಗಳಾಗಿವೆ.

ಲ್ಲಿ ಕಪ್ಪೆ ಅರೆಭಟ್ಟ ಎಂಬ ಚಾಲುಕ್ಯ ಇತಿಹಾಸ ಪುರುಷನ ಉಲ್ಲೇಖವಿದೆ. ಕಪ್ಪೆ ಅರಭಟ್ಟ ಎಂಬುದು ಕಪ್ಪೆಯರ ಭಟ್ಟ ಆಗಿರಬಹುದು ಎಂದು ತೀ.ನಂ.ಶ್ರೀ, ಕಪ್ಪೆಯರಸ ಭಟ್ಟ ಆಗಿರಬಹುದು ಎಂದು ಎಂ ಚಿದಾನಂದಮೂರ್ತಿ ಮತ್ತು ಕಪ್ಪಡಿಯರ ಭಟ್ಟ ಎಂದಿರಬಹುದು ಎಂದು ಎಂ ಎಂ ಕಲಬುರ್ಗಿ ಅಭಿಪ್ರಾಯಪಟ್ಟಿದ್ದಾರೆ.

ಶಾಸನದ ಪ್ರಾರಂಭದ ಗದ್ಯ ಮತ್ತು ಸಂಸ್ಕೃತ ಶ್ಲೋಕವನ್ನು ಬಿಟ್ಟರೆ ಉಳಿದುದು ತ್ರಿಪದಿಯಲ್ಲಿದೆ. 3 ತ್ರಿಪದಿಗಳಿರುವ ಇದು ತ್ರಿಪದಿಯ ಉಲ್ಲೇಖಗೊಂಡಿರುವ ಮೊದಲ ಶಾಸನವಾಗಿದೆ.

 

ಪಟ್ಟದಕಲ್ಲು ಶಾಸನ (ಸಾ.ಶ ಸು 740)

ಚಾಲುಕ್ಯರ ಇಮ್ಮಡಿ ವಿಜಯಾದಿತ್ಯನು ಕಂಚಿಯನ್ನು 3 ಬಾರಿ ಗೆದ್ದ ವಿಜಯದ ಸಂಕೇತವಾಗಿ ಮಹಾರಾಣಿ ಲೋಕಮಹಾದೇವಿಯು ಲೋಕೇಶ್ವರ ದೇವಾಲಯವನ್ನು ಕಟ್ಟಿಸಿದಳು. ದೇವಾಲಯದ ಶಿಲ್ಪಿ ಸರ್ವಸಿದ್ಧಿ ಆಚಾರಿಯ ಶಿಲ್ಪಕ್ಕೆ ಮೆಚ್ಚಿ ಲೋಕಮಹಾದೇವಿಯು ಆತನಿಗೆ ಪೆರ್ಜೆರಿಪು ಗೆಯ್ದ ವಿಷಯ ಈ ಶಾಸನದ ಸಾರ.

 

ಹೆಬ್ಬಾಳ ಶಾಸನ (ಸಾ.ಶ ಸು 750)

ಈ ಶಾಸನದಲ್ಲಿ ಹೆಬ್ಬಾಳವನ್ನು ಪೆರ್ಬೊಳಲನಾಡು ಎಂದು ಕರೆಯಲಾಗಿದೆ. ಗಂಗರ ಕಾಲದಲ್ಲಿ ಕಿತ್ತಯ್ಯ ಎಂಬಾತನು ರಾಷ್ಟ್ರಕೂಟರ ವಿರುದ್ಧ ಹೋರಾಡುತ್ತಾ ಮರಣಿಸಿದ ವಿವರವಿದೆ

 

ಸುರಗೂರು ಶಾಸನ (ಸಾ.ಶ ಸು 750)

ಗಂಗರ ಅರಸ ಶ್ರೀಪುರುಷನು ಧಣ್ಣಗವಾಡಿ ಎಂಬ ಗ್ರಾಮವನ್ನು ಮತ್ತು ಅವನ ಸಾಮಂತ ಮುದುಕೊಂಗುಣಿ ಎಂಬಾತನು ಪೆರ್ವಟ್ಟಿಯೂರು ಮತ್ತು ಮುರ್ದೂರುಗಳನ್ನು ಕೆಸುಗೊಳ ಗ್ರಾಮದ ಜನರಿಗೆ ಬ್ರಹ್ಮಾದೇಯವಚಾಗಿ ನೀಡಿದ್ದು ಈ ಶಾಸನದ ಸಾರ.

 

ಕುಲಮುದ್ದನ ಮಾವಳಿ ಶಾಸನ (ಸಾ.ಶ ಸು 800)

ಈ ಶಾಸನ ವೀರಗಲ್ಲು ಹಾಗೂ ದಾನಶಾಸನವೂ ಆಗಿದೆ. ಇದರಲ್ಲಿ ಹಳೆಗನ್ನಡ ಮತ್ತು ಪೂರ್ವದ ಹಳೆಗನ್ನಡ ಎರಡೂ ಬಳಕೆಯಾಗಿವೆ.

ರಾಷ್ಟ್ರಕೂಟರ ಮೂರನೇ ಗೋವಿಂದನ ಕಾಲದಲ್ಲಿ ಬನವಾಸಿ ಮಂಡಲವನ್ನು ಆಳುತ್ತಿದ್ದ ರಾಜಾದಿತ್ಯ ಮತ್ತು ಅಳುವಖೇಡ ಆರುಸಾವಿರದ ಮಂಡಲವನ್ನು ಆಳುತ್ತಿದ್ದ ಚಿತ್ರವಾಹನರು ನಡೆಸಿದ ಕಾಳಗದ ಕುರಿತು ಈ ಶಾಸನವು  ಹೇಳುತ್ತದೆ. ಯುದ್ಧದಲ್ಲಿ ಮರಣಿಸಿದ ರಾಜಾದಿತ್ಯನ ಅಂಗರಕ್ಷಕ ವೀರ ಕುಲಮುದ್ದನಿಗೆ ರಾಜಾದಿತ್ಯನು ಮರಣೋತ್ತರವಾಗಿ ಗದ್ದೆಯೊಂದನ್ನು ದಾನ ನೀಡಿದ ವಿವರ ಇದರಲ್ಲಿದೆ.

 

ಮೇವುಂಡಿ ಶಾಸನ (ಸಾ.ಶ ಸು 865)

ರೆಟ್ಟಿಯಣ್ಣ ಎಂಬ ವೇಳವಾಳಿಯ ಸ್ವಾಮಿನಿಷ್ಠತೆಯ ಬಗ್ಗೆ ಈ ಶಾಸನ ತಿಳಿಸುತ್ತದೆ

 

ಶಿರೂರ ಶಾಸನ (ಸಾ.ಶ ಸು 866)

ಅಮೋಘವರ್ಷನ ಮಾಂಡಲಿಕನಾಗಿದ್ದ ಅಣ್ಣಿಗೆರೆಯ ದೇವಣಯ್ಯನು ಶ್ರೀಪುರದ ರವಿಕಯ್ಯ ಮತ್ತು ಇನ್ನೂ ಮುಂತಾದ ಇನ್ನೂರು ಮಹಾಜನರಿಗೆ ʼತುಪ್ಪದೆರ್‌ʼ ಬಿಟ್ಟುದು ಈ ಶಾಸನದ ಸಾರ

 

ಬೇಗೂರು ಶಾಸನ (ಸಾ.ಶ ಸು 890)

ಬೆಂಗಳೂರಿನ ಬೇಗೂರು ಎಂಬಲ್ಲಿ ಈ ಶಾಸನವಿದೆ. ಇದೊಂದು ವೀರಗಲ್ಲು ಶಾಸನ. ಯುದ್ಧರಂಗದ ಚಿತ್ರಣವನ್ನು ವಿವರವಾಗಿ ಚಿತ್ರಿಸಿರುವುದು ಈ ಶಾಸನದ ವಿಶೇಷತೆ.

ಗಂಗರ ಎರೆಯಪ್ಪನ ಕಾಲದಲ್ಲಿ ನಾಗತ್ತರನೆಂಬ ವೀರನು ಪಲ್ಲವರ ವೀರಮಹೇಂದ್ರವರ್ಮನ ವಿರುದ್ದ ತುಂಬೆ ಎಂಬ ಸ್ಥಳದಲ್ಲಿ ನಡೆದ ಯುದ್ಧದಲ್ಲಿ ಆನೆಯೊಂದಿಗೆ ಸೆಣಸುತ್ತಾ ಮರಣಿಸಿದನು. ಆಗ ಎರೆಯಪ್ಪ ದೊರೆಯು ನಾಗತ್ತರನ ವಂಶಸ್ಥರಿಗೆ ಬೆಂವೂರು, ತುವನೂರು, ಅಂಗಲಕೋಟೆ, ನಲ್ಲೂರು ಮುಂತಾದ ಗ್ರಾಮಗಳನ್ನು ದಾನ ನೀಡಿದನು ಎಂಬುದು ಈ ಶಾಸನದ ಸಾರ.

 

ಕಳಸ ಶಾಸನ (ಸಾ.ಶ ಸು 930)

ದೀರ್ಘವಾಗಿರುವ ಈ ಶಾಸನವು ಚಂಪೂ ಶೈಲಿಯಲ್ಲಿರುವ ಕನ್ನಡದ ಮೊದಲ ಶಾಸನವಾಗಿದೆ. ಈ ಶಾಸನದ ರಚನೆಕಾರ ಕವಿರಾಜರಾಜ. ಶಾಸನದಲ್ಲಿ ಚಂಪಕಮಾಲಾ, ಮತ್ತೇಭವಿಕ್ರೀಡಿತ, ಮಹಾಸ್ರಗ್ಧರಾ ವೃತ್ತಗಳ ಜೊತೆಗೆ ಕಂದಪದ್ಯವನ್ನು ಬಳಸಲಾಗಿದೆ.

ರಾಷ್ಟ್ರಕೂಟ 4ನೇ ಗೋವಿಂದನು ತಳಾಪುರುಷನಾಗಿದ್ದಾಗ ತನ್ನ ದಂಡನಾಯಕರಾದ ರೇವದಾಸ ಮತ್ತು ವೀಸೋತ್ತರ ದೀಕ್ಷಿತರಿಗೆ ಕಾಡಿಯೂರು (ಕಳಸ) ಗ್ರಾಮವನ್ನು ದಾನ ಕೊಟ್ಟಿದ್ದನ್ನು ಶಾಸನದಲ್ಲಿ ಉಲ್ಲೇಖಿಸಲಾಗಿದೆ.

 

ಜಿನವಲ್ಲಭನ ಶಾಸನ (ಸಾ.ಶ ಸು 10ನೇ ಶ)

ತೆಲಂಗಾಣದ ಕರೀಂನಗರ ಜಿಲ್ಲೆಯ ಕುರ್ಕ್ಯಾ (ಕುರಿಕ್ಯಾಲ) ಗ್ರಾಮದ ಬಳಿಯಿರುವ ಬೊಮ್ಮಲಗುಟ್ಟ (ಗೊಂಬೆಗಳ ಬೆಟ್ಟ) ಎಂಬಲ್ಲಿ ಈ ಶಾಸನ ದೊರೆತಿದೆ. ಇದನ್ನು ಮೊದಲ ಬಾರಿಗೆ ಓದಿದವರು ಡಾ ಎನ್ ವೆಂಕಟರಮಯ್ಯನವರು (1966). ಈ ಶಾಸನವನ್ನು ಜಿ ಎಸ್ ಶಿವರುದ್ರಪ್ಪ ಅವರು ಕುರಿಕ್ಯಾಲ ಶಾಸನ ಎಂದು ಕರೆದಿದ್ದಾರೆ. ಈ ಶಾಸನಕ್ಕೆ ಗಂಗಾಧರಂ ಶಾಸನವೆಂಬ ಮತ್ತೊಂದು ಹೆಸರಿದೆ.

ಶಾಸನ ಬರೆಸಿದವನು ಪಂಪನ ತಮ್ಮ ಜಿನವಲ್ಲಭ. ಜಿನವಲ್ಲಭನಿಗೆ ವಾಗ್ವಧೂವರವಲ್ಲಭ ಎಂಬ ಬಿರುದಿತ್ತು. ಶಾಸನ ರಚನೆಕಾರ ಎರೆಯಮ್ಮ. ಈ ಶಾಸನದಿಂದ ಪಂಪನ ತಂದೆಯ ಹೆಸರು ಭೀಮಪ್ಪಯ್ಯ, ತಾಯಿ ಅಬ್ಬಣಬ್ಬೆ ಎಂದು ತಿಳಿದುಬಂದಿದೆ. ಪಂಪನ ಗುರುಗಳು ಜಯಣಂದಿ ಸಿದ್ಧಾಂತ ಭಟಾರರೆಂದು ಮತ್ತು ಪಂಪನ ತಾಯಿ ಅಬ್ಬಣಬ್ಬೆಯು ಜೋಯಿಸಸಿಂಘನ ಮೊಮ್ಮಗಳೆಂದು ಜಿ ಎಸ್ ಗಾಯಿ ಅವರು ನಿರ್ಣಯಿಸಿದ್ದಾರೆ.

ತೆಲುಗು, ಕನ್ನಡ ಮತ್ತು ಸಂಸ್ಕೃತ ಮೂರೂ ಭಾಷೆಗಳಲ್ಲಿ ಈ ಶಾಸನವನ್ನು ಬರೆಯಲಾಗಿದ್ದು ಲಿಪಿ ಕನ್ನಡದಲ್ಲಿದೆ. 11 ಸಾಲುಗಳಿವೆ. ಸಂಸ್ಕೃತ ಪದ್ಯಗಳನ್ನು ಶಾರ್ದೂಲವಿಕ್ರೀಡಿತ ವೃತ್ತ ಮತ್ತು ಪ್ರಥ್ವೀವೃತ್ತಗಳಲ್ಲಿ ಕೆತ್ತಲಾಗಿದೆ. ಕನ್ನಡ ಪದ್ಯಗಳನ್ನು ಚಂಪಕಮಾಲಾ ವೃತ್ತ, ಮ್ತತೇಭವಿಕ್ರೀಡಿತ ವೃತ್ತ ಮತ್ತು ತರಳ ವೃತ್ತಗಳಲ್ಲಿ ಕೆತ್ತಲಾಗಿದೆ ಹಾಗೂ ಕೊನೆಯಲ್ಲಿ 3 ತೆಲುಗು ಕಂದಪದ್ಯಗಳಿವೆ. ಅಲ್ಲದೇ ಗದ್ಯ ಪದ್ಯಾತ್ಮಕವಾದ ಶಾಸನ ಸಹ ಇದೊಂದೇ ಆಗಿದೆ. ತೆಲುಗು ಸಾಹಿತ್ಯದ ಮೊದಲ ಕಂದಪದ್ಯಗಳು ದೊರೆತಿರುವುದು ಸಹ ಇದೇ ಶಾಸನದಲ್ಲಿ.

ಪಂಪನ ತಮ್ಮನಾದ ಜಿನವಲ್ಲಭನು ಕವಿತಾ ಗುಣಾರ್ಣವ ಎಂಬ ಕೆರೆಯನ್ನು, ಮದನವಿಳಾಸವೆಂಬ ವನವನ್ನು ಮತ್ತು ತ್ರಿಭುವನತಿಲಕವೆಂಬ ಬಸದಿಯನ್ನು ನಿರ್ಮಿಸಿದನೆಂದು ಈ ಶಾಸನದಲ್ಲಿ ಹೇಳಲಾಗಿದೆ. ಅರಿಕೇಸರಿಯು ಪಂಪನಿಗೆ ಧರ್ಮಪುರಿಯನ್ನು ದಾನ ನೀಡಿದ ಶಾಸನ ದೊರೆತಿಲ್ಲ ಆದರೆ ಜಿನವಲ್ಲಭನ ಶಾಸನದಲ್ಲಿರುವ “ಪೋಗಿ ನೋಡು ಸುಂದರ ವೃಷಭಾಚಳೋನ್ನತ ಶಿಳಾತಳದೊಳ್‌ ಬರೆದಕ್ಕರಂಗಳಂ” ಎಂಬ ಸಾಲುಗಳು ಅರಿಕೇಸರಿಯು ಪಂಪನಿಗೆ ದಾನ ನೀಡಿದ ಶಾಸನವೊಂದು ಇದ್ದುದರ ಬಗ್ಗೆ ಮಾಹಿತಿ ನೀಡುತ್ತವೆ.

ಈ ಶಾಸನದಲ್ಲಿ ಪಂಪನನ್ನು ಕವಿತಾ ಗುಣಾರ್ಣವ ಎಂದು ಕರೆಯಲಾಗಿದೆ. ಅರಿಕೇಸರಿಗೆ ಗುಣಾರ್ಣವ ಎಂಬ ಬಿರುದು ಇದ್ದ ಕಾರಣ ಪಂಪನಿಗೆ ಕವಿತಾ ಗುಣಾರ್ಣವ ಎಂಬ ಬಿರುದಿತ್ತು.

 

ಜೂರಾ ಶಾಸನ (ಕಾಲ ಕ್ರಿ.ಶ ಸು 947)

ಮಧ್ಯಪ್ರದೇಶದ ಜಬ್ಬಲ್ ಪುರ ಗ್ರಾಮದ ಸಮೀಪದ ಜೂರಾ ಎಂಬಲ್ಲಿದೆ. ಶಾಸನವನ್ನು 1921 ರಲ್ಲಿ ಆರ್ ಡಿ ಬ್ಯಾನರ್ಜಿ ಶೋಧಿಸಿದರು ಮತ್ತು ಎನ್ ಲಕ್ಷ್ಮೀನಾರಾಯಣ ಎಂಬುವವರು ಪ್ರಕಟಿಸಿದರು.

ದು ರಾಷ್ಟ್ರಕೂಟರ 3ನೇ ಕೃಷ್ಣನ ಪರಾಂಗನ ಪುತ್ರತ್ವ (ಪರಸ್ತ್ರೀಯನ್ನು ತಾಯಿಯಂತೆ ಗೌರವಿಸುವ ಗುಣ) ಮತ್ತು ಶೌರ್ಯವನ್ನು ಕೊಂಡಾಡಿದ ಪ್ರಶಸ್ತಿ ಶಿಲಾಶಾಸನ. ಉಬ್ಬಿಕಾಮಯ್ಯ ಸೆಟ್ಟಿಯ ತಮ್ಮ ತುಯ್ಯಲ ಚಂದಯ್ಯನು ಈ ಶಾಸನವನ್ನು ಬರೆಸಿದನೆಂದು, ಏಚಿಮಯ್ಯ ಎಂಬುವವನು ಕೆತ್ತಿದ್ದಾನೆಂದು ತಿಳಿದುಬರುತ್ತದೆ.

 

ಆತಕೂರು ಶಾಸನ (ಸಾ.ಶ ಸು 950)

ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಆತಕೂರಿನ ಚಲ್ಲೇಶ್ವರ ದೇಗುಲದಲ್ಲಿ ಈ ಶಾಸನವಿದೆ. ಶೋಧಿಸಿದವರು ಜೆ ಎಫ್ ಫ್ಲೀಟ್. ಇದು ಕಾಳಿ ಎಂಬ ನಾಯಿಗಾಗಿ ಕಟ್ಟಿದ ವೀರಸ್ಮಾರಕವಾಗಿದ್ದು, ಕಾದಾಡುತ್ತಿರುವ ನಾಯಿ ಮತ್ತು ಕಾಡುಹಂದಿಯ ಚಿತ್ರವಿದೆ. ಇದನ್ನು ಕರುಗಲ್ಲು ಎಂತಲೂ ಕರೆಯುವರು.

ರಾಷ್ಟ್ರಕೂಟರ ಮೂರನೇ ಕೃಷ್ಣನ ಸಾಮಂತನಾದ ಇಮ್ಮಡಿ ಬೂತುಗ ಮತ್ತು ಅವನ ಸೇವಕ ಮಣಲರತರು (ಮನಾಲ) ತಕ್ಕೋಲಂ ಕದನದಲ್ಲಿ ಚೋಳ ರಾಜಾದಿತ್ಯನನ್ನು ಕೊಂದ ವಿಷಯವಿದೆ. ಣಲರತನ ಕುದುರೆಯು ವೀರಲಕ್ಷ್ಮಿ ಎಂದು ಮತ್ತು ರಾಜಾದಿತ್ಯನ ಆನೆಯ ಹೆಸರು ʼಚೋಳನ ಕೋಟೆʼ ಎಂದು ಉಲ್ಲೇಖವಾಗಿದೆ

ಯುದ್ಧದಲ್ಲಿ ಗೆದ್ದುದಕ್ಕಾಗಿ ಕೃಷ್ಣನು ಬೂತುಗನಿಗೆ ಬನವಸೆ 12000, ಬೆಳ್ವೊಲ 300, ಪುರಿಗೆರೆ 300, ಕಿಸುಕಾಡು 70 ಮತ್ತು ಬಾಗೆನಾಡು 70 ಪ್ರದೇಶಗಳನ್ನು ಬಾಳ್ಗಚ್ಚಾಗಿ ಕೊಟ್ಟನೆಂದು, ನಂತರ ಬೂತುಗನು ಣಲರತನಿಗೆ ಆತಕೂರ 12 ಮತ್ತು ಬೆಳ್ವೊಲದ ಕೋಟೆಯೂರುಗಳನ್ನು ಬಾಳ್ಗಚ್ಚಾಗಿ ಹಾಗೂ ಕಾಳಿ ಎಂಬ ತನ್ನ ಸಾಕು ನಾಯಿಯನ್ನು ಕೊಟ್ಟನೆಂಬ ವಿವರವಿದೆ.

 

ಲಕ್ಕುಂಡಿ ಶಾಸನ (ಕಾಲ ಸಾ. 1007)

ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದ ಜೈನಬಸದಿಯಲ್ಲಿ ಈ ಶಾಸನ ದೊರೆತಿದೆ. ಶಾಸನದ ಭಾಷೆ ಕನ್ನಡ ಮತ್ತು ಸಂಸ್ಕೃತ. ಶಾಸನ ಶೋಧಕರು ಲಕ್ಷ್ಮೀ ನಾರಾಯಣರಾವ್, ಆರ್ ಎಸ್ ಪಂಚಮುಖಿ ಮತ್ತು ಸಿ ಆರ್ ಕೃಷ್ಣಮಾಚಾರ್ಲು. ಇದು ಪ್ರಶಸ್ತಿ ಮತ್ತು ದಾನಶಾಸನವಾಗಿದೆ.

ಈ ಶಾಸನವನ್ನು ಕಲ್ಯಾಣ ಚಾಲುಕ್ಯ ಚಕ್ರವರ್ತಿ ಅಹವಮಲ್ಲ ಇಮ್ಮಡಿ ತೈಲಪ ಕಾಲದಲ್ಲಿ ಕೆತ್ತಲಾಗಿದೆ. ಶಾಸನವನ್ನು ಕೆತ್ತಿದವನು ಬಾಹುಬಲಿ.

ತೈಲಪನ ಮಂತ್ರಿ ಧಲ್ಲ. ಈತನ ಹಿರಿಯ ಮಗ ನಾಗದೇವನ ಪತ್ನಿ ಗುಣದಂಕಕಾರ್ತಿ ಅತ್ತಿಮಬ್ಬೆ. ಪೊನ್ನ ಕವಿಯ ಶಾಂತಿ ಪುರಾಣದ ಸಹಸ್ರ ಪ್ರತಿಗಳನ್ನು ಅತ್ತಿಮಬ್ಬೆ ದಾನ ಮಾಡಿದಳೆಂದು, ರನ್ನನಿಂದ ಅಜಿತನಾಥ ಪುರಾಣವನ್ನು ಬರೆಸಿದಳೆಂದೂ, ಆದಿನಾಥ ಜೈನಬಸದಿ ಕಟ್ಟಿಸಿದಳೆಂದೂ ಈ ಶಾಸನದಿಂದ ತಿಳಿದುಬರುತ್ತದೆ. ಶಾಸನದಲ್ಲಿ ಅತ್ತಿಮಬ್ಬೆಯನ್ನು ದಾನಚಿಂತಾಮಣಿ, ಕಲಿಕಾಲಪಾರ್ವತಿ ಮತ್ತು ಅಭಿನವ ಸರಸ್ವತಿ ಎಂದು ವರ್ಣಿಸಲಾಗಿದೆ. ಶಾಸನದಲ್ಲಿ ಲಕ್ಕುಂಡಿಯನ್ನು ಸ್ವರ್ಗದ ಅಮರಾವತಿಗೆ ಹೋಲಿಸಲಾಗಿದೆ.

ರನ್ನನ ಅಜಿತಪುರಾಣದಲ್ಲಿರುವ “ಉನ್ನತ ಕುಕ್ಕುಟೇಶ್ವರ” ಎಂಬ ಸಾಲಿನಿಂದ ಪ್ರಾರಂಭವಾಗುವ ಪದ್ಯ ಹಾಗೂ “ಜಿನಪದ ಪಂಕಜಭ್ರಮರ್‌” ಎಂಬ ಸಾಲಿನಿಂದ ಪ್ರಾರಂಭವಾಗುವ ಪದ್ಯಗಳು ಈ ಶಾಸನದಲ್ಲಿವೆ. ಹಾಗಾಗಿ ರನ್ನನೇ ಈ ಶಾಸನದ ಕರ್ತೃವಾಗಿರಬಹುದೆಂದು ತೀ ನಂ ಶ್ರೀ ಅಭಿಪ್ರಾಯಪಟ್ಟಿದ್ದಾರೆ

 

ದಾನವುಲಪಾಡು ಶಾಸನ (ಸಾ.ಶ ಸು 10 -11ನೇ ಶ)

ರಾಷ್ಟ್ರಕೂಟ 3ನೇ ಇಂದ್ರನ ಸೇನಾಪತಿಯಾದ ಶ್ರೀವಿಜಯನ ಸ್ವಾಮಿನಿಷ್ಠೆ, ಶೌರ್ಯ, ಐಹಿಕ - ಪಾರಮಾರ್ಥಿಕ ವ್ಯಕ್ತಿತ್ವವನ್ನು ಕುರಿತು ಹೇಳುವ ಈ ಶಾಸನವು ಪ್ರಶಸ್ತಿ ಶಾಸನವಾಗಿದೆ. ಶಾಸನದಲ್ಲಿ ಶ್ರೀವಿಜಯನಿಗೆ ಅರಿವಿಂಗೋಜ ಮತ್ತು ಅನುಪಮಕವಿ ಎಂಬ ಬಿರುದುಗಳಿದ್ದುದಾಗಿ ತಿಳಿದುಬಂದಿದೆ.

 

ಮುಳಗುಂದ ಶಾಸನ (ಸಾ.ಶ ಸು 1053)

ಪಶ್ಚಿಮ ಚಾಲುಕ್ಯರ 1ನೇ ಸೋಮೇಶ್ವರನ ಸಂಧಿವಿಗ್ರಹಿಯಾಗಿದ್ದ ಅಗ್ಗಳದೇವನ ಮಗನಾದ ಬೆಳಋದೇವನು ತನ್ನ ತಾಯಿಯ ಇಚ್ಛೆಯಂತೆ ನಯಸೇನ ಪಂಡಿತರ ಪಾದ ತೊಳೆದು ತೀರ್ಥಂಕರರ ಬಸದಿಗೆ ಭೂದಾನ ಮಾಡಿದನೆಂಬುದು ಶಾಸನದ ಸಾರ.

 

ಕೋಗಳಿ ಶಾಸನ (ಸಾ.ಶ ಸು 1055)

ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯ ಕೋಗಳಿ ಎಂಬಲ್ಲಿ ಈ ಶಾಸನವಿದೆ. ಇದರಲ್ಲಿ ತೋಮರ ರಗಳೆಯನ್ನು ಬಳಸಲಾಗಿದೆ. ಲಲಿತ ರಗಳೆಯೇ ಈ ತೋಮರ ರಗಳೆ ಎಂದು ಸಂಶೋಧಕರು ನಿರ್ಣಯಿಸಿದ್ದಾರೆ.

ಶಾಸನದಲ್ಲಿ ತ್ರೈಲೋಕ್ಯಮಲ್ಲ ಎಂಬ ಬಿರುದು ಹೊಂದಿದ್ದ ಪಶ್ಚಿಮ ಚಾಲುಕ್ಯರ 1ನೇ ಸೋಮೇಶ್ವರನ ಕಾಲದಲ್ಲಿ ಇಂದ್ರಕೀರ್ತಿ ಎಂಬ ಜೈನಮುನಿಯು ಗಂಗರ ಅರಸ ದುರ್ವಿನೀತನಿಂದ ನಿರ್ಮಾಣವಾದ ಜೈನಬಸದಿಯೊಂದನ್ನು ಜೀರ್ಣೋದ್ಧಾರಗೊಳಿಸಿದ್ದರ ಉಲ್ಲೇಖವಿದೆ.

 

ಬೆಳತೂರಿನ ದೇಕಬ್ಬೆ ಶಾಸನ (ಸಾ.ಶ ಸು 1057)

ಹೆಗ್ಗಡದೇವನಕೋಟೆ ತಾಲ್ಲೂಕಿನ ಬೆಳತೂರಿನ ಗ್ರಾಮದ ಈ ದಾನಶಾಸನವು ಮಾಸ್ತಿಕಲ್ಲು ಸಹ ಆಗಿದೆ. ಈ ಶಾಸನವನ್ನು 1898 ರಲ್ಲಿ ಬಿ ಎಲ್ ರೈಸ್ ಎಪಿಗ್ರಾಫಿಕಾ ಕರ್ನಾಟಿಕಾದಲ್ಲಿ ಪ್ರಕಟಿಸಿದರು. ಶಾಸನದ ಭಾಷೆ ಹಳೆಗನ್ನಡವಾಗಿದ್ದು ಇದರಲ್ಲಿ 23 ಪದ್ಯಗಳಿವೆ. ದೇವತಾರಾಧನೆಯಿಂದ ರಂಭವಾಗದೇ ಇರುವುದು ಈ ಶಾಸನದ ವಿಶೇಷ.

ದೇಕಬ್ಬೆಯ ತಂದೆ ರವಿಗ, ತಾಯಿ ಪೊನ್ನಕ್ಕ. ಈಕೆಯ ಪತಿ ನವಿಲೆನಾಡಿನ ಏಚ. ಯುದ್ಧದಲ್ಲಿ ಸೆರೆಸಿಕ್ಕ ಏಚನನ್ನು ದಾಯಾದಿಗಳು ಎಳೆದೊಯ್ದು ಕೊಂದಾಗ ದೇಕಬ್ಬೆಯು ತಾನು ಅನುಗಮನ ರೀತಿಯಲ್ಲಿ ಮಡಿದು ಪತಿಯನ್ನು ಹಿಂಬಾಲಿಸಿದಳು ಎಂಬುದು ಶಾಸನದ ಸಾರ. ಶಾಸನದಲ್ಲಿ ಚೋಳದೊರೆ ರಾಜೇಂದ್ರನ ಉಲ್ಲೇಖವಿದೆ. ಶಾಸನವನ್ನು ಬರೆಸಿದವನು ದೇಕಬ್ಬೆಯ ತಂದೆ ರವಿಗ. ಬರೆದವನು ಮಲ್ಲಕವಿ. ಈ ಮಲ್ಲಕವಿಬಿರುದು ಕವಿರಾಜಬಾಂಧವ.

 

ನಾಗಾವಿ ಶಾಸನ (ಸಾ ಶ ಸು 1058)

ಕಲ್ಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿರುವ ಈ ಶಾಸನವನ್ನು ಪಶ್ಚಿಮ ಚಾಲುಕ್ಯರ 1ನೇ ಸೋಮೇಶ್ವರನ ಕಾಲದಲ್ಲಿ ಕೆತ್ತಲಾಗಿದೆ. ಇದು ದಾನ ಶಾಸನವಾಗಿದೆ. ಇದನ್ನು ಕೆತ್ತಿಸಿದವನು ಸೋಮೇಶ್ವರನ ದಂಡನಾಯಕ ಮಧುವರಸ. ಚಾಲುಕ್ಯರ ಕಾಲದ ಪ್ರಮುಖ ಘಟಿಕಾಸ್ಥಾನ (ವಿದ್ಯಾಕೇಂದ್ರ) ಆಗಿದ್ದ ನಾಗಾವಿಯ ಬಗ್ಗೆ ಈ ಶಾಸನದಲ್ಲಿ ಹೇಳಲಾಗಿದೆ.

 

ಬಳ್ಳಿಗಾವೆ ಶಾಸನ ((ಸಾ ಶ ಸು1075)

ಅದ್ವೈತ ಸಿದ್ಧಾಂತ ಪ್ರತಿಪಾದಕನಾದ ಗುಣಗಳ್ಳದೇವನ ಕುರಿತು ಕೆತ್ತಲಾದ ಶಾಸನವಿದು. ಈತನ ಪೂರ್ಣ ಹೆಸರು ಗುಣಗಳ್ಳ ನಾಗವರ್ಮಾಚಾರ್ಯ.

 

ಲಕ್ಷ್ಮೇಶ್ವರ ಶಾಸನ (ಸಾ ಶ ಸು 1107)

ಪುಲಿಗೆರೆಯ ದಕ್ಷಿಣ ಸೋಮನಾಥ ದೇವಾಲಯದ ಆಚಾರ್ಯರು ಹಾನಗಲ್ಲು ಕದಂಬರ 3ನೇ ತೈಲಪನಿಂದ ದೇವಾಲಯಕ್ಕಾಗಿ ಭೂದಾನ ಪಡೆದ ವಿವರ ಶಾಸನದಲ್ಲಿದೆ.

 

ಬೇಲೂರು ಶಾಸನ (ಸಾ ಶ ಸು 1117)

ಹೊಯ್ಸಳ ವಂಶವನ್ನು ಹಾಗೂ ವಿಷ್ಣುವರ್ಧನನ ವ್ಯಕ್ತಿತ್ವವನ್ನು ಅವನ ಪಟ್ಟದರಾಣಿ ಶಾಂತಲೆ ಗುಣಗಾನ ಮಾಡಿರುವ ಶಾಸನವಿದು. ಇದನ್ನು ಸಂಸ್ಕೃತ ಮತ್ತು ಕನ್ನಡದಲ್ಲಿ ಕೆತ್ತಲಾಗಿದೆ. ಶಾಸನದಲ್ಲಿ ಚೋಳರ ಅಧೀನವಾಗಿದ್ದ ಗಂಗರ ತಲಕಾಡನ್ನು ವಿಷ್ಣುವರ್ಧನನು ಗೆದ್ದು ವಿಜಯನಾರಾಯಣ (ಚನ್ನಕೇಶವ) ದೇವಾಲಯವನ್ನು ಕಟ್ಟಿಸಿದ ಉಲ್ಲೇಖವಿದೆ.

 

ಶಾಂತಲಾದೇವಿಯ ಶ್ರವಣಬೆಳಗೊಳ ಶಾಸನ (ಸಾ ಶ ಸು 1131)

ಹೊಯ್ಸಳ ವಿಷ್ಣುವರ್ಧನನ ರಾಣಿ ಶಾಂತಲೆಯು ಬೆಳ್ಗೊಳತೀರ್ಥದಲ್ಲಿ ಸವತಿ ಗಂಧಾವರಣ ಜಿನಾಲಯವನ್ನು ನಿರ್ಮಿಸಿ ಅದಕ್ಕೆ ಅರಸನಿಂದ ಭೂದಾನ ಕೊಡಿಸಿದ್ದು ಈ ಶಾಸನದ ಸಾರ.

 

ಲಕ್ಷ್ಮೇಶ್ವರ ಶಾಸನ (ಸಾ ಶ ಸು 1152)

ಮನ್ನೆಯನ್ನು ಆಳುತ್ತಿದ್ದ ಮಹಾಮಂಡಲೇಶ್ವರ ಮಾವುಲಿ ತೈಲನು ಪುಲಿಗೆರೆಗೆ ಬಂದು ದಕ್ಷಿಣ ಸೋಮನಾಥ ದೇವಾಲಯಕ್ಕೆ ಭೂದಾನ ನೀಡಿದ್ದಾಗಿ ಶಾಸನದಲ್ಲಿದೆ.

 

ಲಕ್ಷ್ಮೇಶ್ವರ ಶಾಸನ (ಸಾ ಶ ಸು 1153)

ಹಾನಗಲ್ಲು 500 ರ ದಂಡನಾಯಕ ಡಾಕರಸನು ದಕ್ಷಿಣ ಸೋಮನಾಥ ದೇವಾಲಯಕ್ಕೆ ನಂದಾದೀವಿಗೆಗೆ ದಾನ ನೀಡಿದ ವಿವರ ಶಾಸನದಲ್ಲಿದೆ.

ಲಕ್ಷ್ಮೇಶ್ವರದಲ್ಲಿರುವ ಸೋಮನಾಥ ದೇವಾಲಯದ ಆಚಾರ್ಯರು ಮಹಾವ್ರತಿ ಪಂಥದವರೆಂದು ಲಕ್ಷ್ಮೇಶ್ವರ ಶಾಸನಗಳಿಂದ ತಿಳಿದುಬರುತ್ತದೆ. ಈ ಪಂಥದ ಮತ್ತೊಂದು ಹೆಸರು ಸೋಮಸಿದ್ಧಾಂತ.

 

ಬಳ್ಳಿಗಾವಿ ಕೋಡಿಮಠ ಶಾಸನ (ಸಾ ಶ ಸು 1168)

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಬಳಿ ದೊರೆತಿರುವ ಇದು ದಾನಶಾಸನವಾಗಿದೆ. 1902 ರಲ್ಲಿ ಬಿ ಎಲ್ ರೈಸ್ ಇದನ್ನು ಎಪಿಗ್ರಾಫಿಯಾ ಕರ್ನಾಟಕದಲ್ಲಿ ಪ್ರಕಟಿಸಿದರು. ಕಲಚೂರಿಯ ಬಿಜ್ಜಳನು ಕೋಡಿಮಠಕ್ಕೆ ಕಿರುಗೇರಿ ಗ್ರಾಮವನ್ನು ದಾನ ನೀಡಿದ್ದು ಶಾಸನದ ಸಾರವಾಗಿದೆ.

 

ಗೊಮ್ಮಟಸ್ತುತಿ ಶಾಸನ (ಸಾ ಶ ಸು 1180)

ಶ್ರವಣಬೆಳಗೊಳದ ವಿಂಧ್ಯಬೆಟ್ಟದ ಮೇಲಿರುವ ಈ ಶಾಸನವನ್ನು ಕೆತ್ತಿದವನು ಬೊಪ್ಪಣ್ಣ ಪಂಡಿತ. ಕೆತ್ತಿಸಿದವನು ಕವಡಮಯ್ಯನ ದೇವಣ. ಇದರಲ್ಲಿ ಬೊಪ್ಪಣ್ಣನನ್ನು ಶಾಸನವಿ ಎಂದು ಕರೆಯಲಾಗಿದೆ. ಶಾಸನವು ಹಳೆಗನ್ನಡದಲ್ಲಿದೆ. ಭರತನ ವಿರುದ್ಧ ಬಾಹುಬಲಿಯ ವಿಜಯ ಸಾಧನೆಯೇ ಈ ಶಾಸನದ ಸಾರ.

 

ಅಮೃತಾಪುರ ಶಾಸನ (ಸಾ.ಶ ಸು 1198)

ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ಅಮೃತಾಪುರ ಎಂಬಲ್ಲಿ ಈ ಶಾಸನವಿದೆ. ಶಾಸನದ ಕವಿ ಜನ್ನ. ಈ ಶಾಸನವು ಚಂಪೂಶೈಲಿಯಲ್ಲಿದೆ. ಶಾಸನದ ಲಿಪಿಕಾರ ಮಲ್ಲೋಜ. ಹೊಯ್ಸಳ ಅರಸ ವೀರಬಲ್ಲಾಳನ ದಂಡನಾಯಕ ಅಮೃತೇಶ್ವರನು ಅಮೃತೇಶ್ವರ ದೇವಾಲಯವನ್ನು ಕಟ್ಟಿಸಿ ದಾನ ನೀಡಿದ್ದು ಈ ಶಾಸನದ ಸಾರ.

 

ಅಬ್ಬಲೂರು ಶಾಸನ (ಸಾ ಶ ಸು 1200)

ಶಿವಭಕ್ತನಾದ ಏಕಾಂತ ರಾಮಯ್ಯನು ಜಿನದೇವಾಲಯವನ್ನು ಒಡೆದು ವೀರಮಾಹೇಶ್ವರನ ದೇವಾಲಯವನ್ನು ಸ್ಥಾಪಿಸಿದನು. ಇವನ ಶಿವಭಕ್ತಿಯನ್ನು ಮೆಚ್ಚಿ ಬಿಜ್ಜಳನು ಗೋಗವೆಯೆಂಬ ಗ್ರಾಮವನ್ನು ದಾನವನ್ನಾಗಿ ನೀಡಿದ ವಿವರ ಮತ್ತು ಕಲ್ಯಾಣ ಚಾಲುಕ್ಯರ ತ್ರಿಭುವನಮಲ್ಲ ಸೋಮೇಶ್ವರನು ಅಬ್ಬಲೂರು ಗ್ರಾಮವನ್ನು, ಕದಂಬರ ಕಾಮದೇವನು ಮಲ್ಲವಳ್ಳಿ ಗ್ರಾಮವನ್ನು ವೀರಸೋಮನಾಥ ದೇವಸ್ಥಾನಕ್ಕೆ ದತ್ತಿ ನೀಡಿದ ವಿವರ ಈ ಶಾಸನದಲ್ಲಿದೆ

 

ಕುವರಲಕ್ಷ್ಮನ ಶಾಸನ (ಸಾ.ಶ ಸು 1220)

ಳೇಬೀಡಿನ ಹೊಯ್ಸಳೇಶ್ವರ ದೇವಾಲಯದ ಮುಂದಿರುವ ಇದು ಸ್ಥಂಭಶಾಸನ ಮತ್ತು ವೀರಶಾಸನವಾಗಿದೆ. 1902 ರಲ್ಲಿ ಬಿ ಎಲ್ ರೈಸ್ ಈ ಶಾಸನವನ್ನು ಶೋಧಿಸಿದರು. ಶಾಸನವು ಹಳೆಗನ್ನಡದ ಚಂಪೂ ಶೈಲಿಯಲ್ಲಿದೆ

ಹೊಯ್ಸಳ ಇಮ್ಮಡಿ ವೀರಬಲ್ಲಾಳನು ಮೃತನಾದಾಗ ಅವನ ಸೇನಾಧಿಪತಿ ಕುವರಲಕ್ಷ್ಮ ಚಮೂಪನು ತನ್ನ ಪತ್ನಿ ಸುಗ್ಗಲೆ ಹಾಗೂ ತನ್ನ ಒಂದು ಸಾವಿರ ಭಟರೊಡನೆ ಪ್ರಾಣತ್ಯಾಗ ಮಾಡುತ್ತಾನೆ.

ಈ ಶಾಸನ ಹೊಯ್ಸಳರ  ಕಾಲದ  ಗರುಡ ಪದ್ದತಿ (ಗರುಡರು - ಅರಸನ ಅಂಗರಕ್ಷಕ ಪಡೆಯಾಗಿದ್ದು ರಾಜನು ಮಡಿದರೆ ಅವನ ಜೊತೆಗೆ ಪ್ರಾಣತ್ಯಾಗ ಮಾಡುತ್ತಾರೆ) ಬಗ್ಗೆ ತಿಳಿಸುತ್ತದೆ. ಇದರಲ್ಲಿನ ಕೀಳ್ಗುಂಟೆ ಎಂಬ ಪದವು ವೇಳವಾಳಿತನದ ಪ್ರತೀಕವಾಗಿದೆ. ವೇಳವಾಳಿತನ ಅಂದರೆ ರಾಜನು ಮರಣಿಸಿದರೆ ಅವನೊಡನೆ ತಾನೂ ಸಾಯುತ್ತೇನೆ ಎಂದು ಸೇವಕನು ಮಾಡುವ ಪ್ರತಿಜ್ಞೆ.

 

ಅರ್ಜುನವಾಡ ಶಾಸನ (ಸಾ ಶ ಸು 1260)

ಈ ಶಾಸನವು ಬಸವಣ್ಣನವರ ವಂಶಾವಳಿಯ ಬಗ್ಗೆ ಮಾಹಿತಿ ನೀಡುತ್ತದೆ. ಜೊತೆಗೆ ಯಾದವ ಮಹಾಪ್ರಧಾನರಾದ ಚವುಡಿಸೆಟ್ಟಿ ಮತ್ತು ನಾಗರಸರು ಕವಿಳಾಸಪುರದ ಮಲ್ಲಿಕಾರ್ಜುನ ದೇವಾಲಯ ಮತ್ತು ಸಂಗಮೇಶ್ವರ ದೇವಾಲಯಗಳ ಸೇವೆಗಾಗಿ ಯತಿಗಳಾದ ಹಾಲಬಸವಿದೇವರಿಗೆ ದತ್ತಿ ನೀಡಿದ್ದನ್ನು ಶಾಸನದಲ್ಲಿ ಬರೆಯಲಾಗಿದೆ

 

ಬುಕ್ಕರಾಯನ ಶ್ರವಣಬೆಳಗೊಳ ಶಾಸನ (ಸಾ ಶ ಸು 1368)

ಬಿ ಎಲ್ ರೈಸ್ ಈ ಶಾಸನವನ್ನು ಶೋಧಿಸಿ ಪ್ರಕಟಿಸಿದರು. ಇದು ಕನ್ನಡದ ಮೊದಲ ಪ್ರಕಟಿತ ಶಾಸನ. ಇದನ್ನು ಸರ್ವಧರ್ಮ ಸಮನ್ವಯದ ಶಾಸನ ಎಂತಲೂ ಕರೆಯುವರು. ವಿಜಯನಗರದ ಅರಸ 1ನೇ ಬುಕ್ಕರಾಯ, ಜೈನರಿಗೂ ವೈಷ್ಣವರಿಗೂ ನಡೆದ ಕಲಹವನ್ನು ಇತ್ಯರ್ಥಗೊಳಿಸಿ ಧಾರ್ಮಿಕ ಸ್ನೇಹ ಮಾಡಿಸಿದ್ದು ಈ ಶಾಸನದ ಸಾರ.

ಶಾಸನದಲ್ಲಿ ಜೈನ ಧಾರ್ಮಿಕ ಕೇಂದ್ರಗಳಾಗಿದ್ದ ಆನೆಗೊಂದಿ (ಕೊಪ್ಪಳ), ಹೊಸಪಟ್ಟಣ (ಹೊಸಪೇಟೆ), ಪೆನುಗೊಂಡ ಮತ್ತು ಕಲ್ಯಾ/ಕಲ್ಲೆಹ ಪ್ರದೇಶಗಳ ಪ್ರಸ್ತಾಪವಿದೆ. ಈ ಶಾಸನದ ಮತ್ತೊಂದು ಪ್ರತಿ ಮಾಗಡಿ ತಾಲೂಕಿನ ಕಲ್ಲೆಹ ಎಂಬಲ್ಲಿ ದೊರೆತಿದ್ದು ಅದನ್ನು ಕೆತ್ತಿಸಿದವನು ಬುಸುವಿಸೆಟ್ಟಿ.

 

ಲಕ್ಷ್ಮೀಧರಾಮಾತ್ಯ ಶಾಸನ (ಸಾ.ಶ ಸು 1368)

ಈ ಶಾಸನದ ಕರ್ತೃ ಧರ್ಮನಾಥ ಪುರಾಣದ ಕವಿಯಾದ ಮಧುರಕವಿ. ವಿಜಯನಗರದ ಅರಸ ಪ್ರೌಢಪ್ರತಾಪ ದೇವರಾಯನ ಕಾಲದಲ್ಲಿ ಹಂಪಿಯಲ್ಲಿ ಕೆತ್ತಿಸಲಾದ ಶಾಸನವಿದು. ಪ್ರತಾಪ ದೇವರಾಯನ ಮಂತ್ರಿ ಲಕ್ಷ್ಮೀಧರಾಮಾತ್ಯನು ಗಣಪತಿ ದೇವಸ್ಥಾನವನ್ನು ನಿರ್ಮಿಸಿ ಅದಕ್ಕೆ ದಾನ ನೀಡಿ ಈ ಶಾಸನವನ್ನು ಹಾಕಿಸಿದನು.

ಈ ಶಾಸನವು ತಾಯಿಯು ತನ್ನ ಮಗುವಿಗೆ ಹಾಲುಣಿಸುವಾಗ “ಕೆರೆಯಂ ಕಟ್ಟಿಸು ಬಾವಿಯಂ ಸವೆಸು” ಎಂಬ ಸಾಲುಗಳಿಂದ ಆರಂಭವಾಗುತ್ತದೆ.

ಕಾಮೆಂಟ್‌ಗಳು