ಮಧ್ಯಯುಗದ ಕನ್ನಡ ಸಾಹಿತ್ಯ
ಮಧ್ಯಯುಗದ ಕನ್ನಡ ಸಾಹಿತ್ಯ ಬ್ರಹ್ಮಶಿವ (ಕಾಲ ಸು. ೧೨ನೇ ಶ) ನಿಜನಾಮ ಬ್ರಹ್ಮದೇವ. ಈತನು ತ್ರೈಲೋಕ್ಯ ಚೂಡಾಮಣಿ (ಛತ್ತೀಸ ರತ್ನಮಾಲೆ) ಹಾಗೂ ಸಮಯಪರೀಕ್ಷೆ ಎಂಬ ಎರಡು ಗ್ರಂಥಗಳನ್ನು ಬರೆದಿರುವನು. ಸಮಯಪರೀಕ್ಷೆ ಕನ್ನಡದ ಮೊದಲ ವಿಡಂಬನಾ ಕಾವ್ಯವೆಂದು ಹೆಸರಾಗಿದೆ. "ಲಿಂಗಕ್ಕೆ ಎರಗುವುದು, ಹಾರುವನಿಗೆ ಎಲೆಯೆರಡು ಅಡಕೆಯೊಂದನು ಈವುದು ಇದೇ ಧರ್ಮ; ವ್ರತಗುಣಚಾರಿತ್ರಗಳು ಒಂದಿನಿಸು ಇಲ್ಲ ಶೈವರಿಗೆಲ್ಲ" ಎಂದು ಹಂಗಿಸುತ್ತ ಸಮಕಾಲೀನ ಬೇರೆಬೇರೆ ಧರ್ಮಗಳನ್ನು ವಿಡಂಬನೆ ಮಾಡಿದ್ದಾನೆ. ಆಂಡಯ್ಯ (ಕಾಲ ಸು. ೧೧೮೦ - ೧೨೧೮) ಹಾನಗಲ್ಲು ಕದಂಬ ಶಾಖೆಯ ಅರಸ ಕಾಮದೇವನ ಆಶ್ರಯದಲ್ಲಿದ್ದನು. ತವರುನೆಲ, ತಾಯ್ನುಡಿ, ಬಿಳಿಯದೈವ ಈ ಮೂರನ್ನು ಕುರಿತು ಆಂಡಯ್ಯನಿಗೆ ಅಪಾರ ಒಲವು. ಆಂಡಯ್ಯನ ಪ್ರಸಿದ್ಧ ಕೃತಿ ಕಬ್ಬಿಗರ ಕಾವಂ. ತನ್ನ ಆಶ್ರಯಧಾತ ಅರಸ ಕಾಮದೇವನನ್ನು ಮನ್ಮಥನಿಗೆ ಹೋಲಿಸಿ ಈ ಕಾವ್ಯವನ್ನು ಬರೆದಿದ್ದಾನೆ. ಇದೊಂದು ಶೃಂಗಾರ ರಸಾಧಾರಿತ ಖಂಡಕಾವ್ಯ ಮತ್ತು ಚಂಪೂ ಕಾವ್ಯ. ಸಂಸ್ಕೃತ ಪಂಡಿತರು ಇದನ್ನು ಮದನ ವಿಜಯ ಎಂದು ಕರೆದಿದ್ದಾರೆ. ಕಾವನ ಗೆಲ್ಲಂ, ಸೊಬಗಿನ ಸುಗ್ಗಿ, ಮದನ ವಿಜಯ ಎಂಬುವು ಈ ಕೃತಿಗೆ ಇರುವ ಇನ್ನಿತರ ಹೆಸರುಗಳು. "ಸೊಗವಿಪ ಸಕ್ಕದಂ ಬೆರಸಿದಲ್ಲದೆ ಕನ್ನಡದಲ್ಲಿ ಕಬ್ಬಮಂ ಬಗೆಗೊಳೆ ಪೇಳಿಲಾರರಿನಿತುಂ ಸಲೆ" ಎಂದು ಅಚ್ಚಗನ್ನಡದಲ್ಲಿ ಕಾವ್ಯವನ್ನು ಬರೆಯಬೇಕೆಂಬುದು ಕವಿಯ ಆಶಯ. "ಪಲವುಂನಾಲೆಗೆ...