ಮಧ್ಯಯುಗದ ಕನ್ನಡ ಸಾಹಿತ್ಯ
ಮಧ್ಯಯುಗದ ಕನ್ನಡ ಸಾಹಿತ್ಯ
ಬ್ರಹ್ಮಶಿವ (ಕಾಲ ಸು. ೧೨ನೇ ಶ)
ನಿಜನಾಮ ಬ್ರಹ್ಮದೇವ. ಈತನು
ತ್ರೈಲೋಕ್ಯ ಚೂಡಾಮಣಿ (ಛತ್ತೀಸ ರತ್ನಮಾಲೆ) ಹಾಗೂ ಸಮಯಪರೀಕ್ಷೆ ಎಂಬ ಎರಡು ಗ್ರಂಥಗಳನ್ನು
ಬರೆದಿರುವನು.
ಸಮಯಪರೀಕ್ಷೆ ಕನ್ನಡದ ಮೊದಲ
ವಿಡಂಬನಾ ಕಾವ್ಯವೆಂದು ಹೆಸರಾಗಿದೆ. "ಲಿಂಗಕ್ಕೆ ಎರಗುವುದು, ಹಾರುವನಿಗೆ ಎಲೆಯೆರಡು
ಅಡಕೆಯೊಂದನು ಈವುದು ಇದೇ ಧರ್ಮ; ವ್ರತಗುಣಚಾರಿತ್ರಗಳು ಒಂದಿನಿಸು ಇಲ್ಲ ಶೈವರಿಗೆಲ್ಲ"
ಎಂದು ಹಂಗಿಸುತ್ತ ಸಮಕಾಲೀನ ಬೇರೆಬೇರೆ ಧರ್ಮಗಳನ್ನು ವಿಡಂಬನೆ ಮಾಡಿದ್ದಾನೆ.
ಆಂಡಯ್ಯ (ಕಾಲ ಸು. ೧೧೮೦ - ೧೨೧೮)
ಹಾನಗಲ್ಲು ಕದಂಬ ಶಾಖೆಯ ಅರಸ
ಕಾಮದೇವನ ಆಶ್ರಯದಲ್ಲಿದ್ದನು. ತವರುನೆಲ, ತಾಯ್ನುಡಿ, ಬಿಳಿಯದೈವ ಈ ಮೂರನ್ನು ಕುರಿತು
ಆಂಡಯ್ಯನಿಗೆ ಅಪಾರ ಒಲವು.
ಆಂಡಯ್ಯನ ಪ್ರಸಿದ್ಧ ಕೃತಿ
ಕಬ್ಬಿಗರ ಕಾವಂ. ತನ್ನ ಆಶ್ರಯಧಾತ ಅರಸ ಕಾಮದೇವನನ್ನು ಮನ್ಮಥನಿಗೆ ಹೋಲಿಸಿ ಈ ಕಾವ್ಯವನ್ನು
ಬರೆದಿದ್ದಾನೆ. ಇದೊಂದು ಶೃಂಗಾರ ರಸಾಧಾರಿತ ಖಂಡಕಾವ್ಯ ಮತ್ತು ಚಂಪೂ ಕಾವ್ಯ. ಸಂಸ್ಕೃತ ಪಂಡಿತರು
ಇದನ್ನು ಮದನ ವಿಜಯ ಎಂದು ಕರೆದಿದ್ದಾರೆ. ಕಾವನ ಗೆಲ್ಲಂ, ಸೊಬಗಿನ ಸುಗ್ಗಿ, ಮದನ ವಿಜಯ ಎಂಬುವು ಈ
ಕೃತಿಗೆ ಇರುವ ಇನ್ನಿತರ ಹೆಸರುಗಳು.
"ಸೊಗವಿಪ ಸಕ್ಕದಂ
ಬೆರಸಿದಲ್ಲದೆ ಕನ್ನಡದಲ್ಲಿ ಕಬ್ಬಮಂ ಬಗೆಗೊಳೆ ಪೇಳಿಲಾರರಿನಿತುಂ ಸಲೆ" ಎಂದು
ಅಚ್ಚಗನ್ನಡದಲ್ಲಿ ಕಾವ್ಯವನ್ನು ಬರೆಯಬೇಕೆಂಬುದು ಕವಿಯ ಆಶಯ.
"ಪಲವುಂನಾಲೆಗೆಯುಳ್ಳವಂಬಗೆವೊಂಡೆಂದುಬಣ್ಣಿಸಲ್ಕಾರನಾನೆಲನಂ
ಮತ್ತಿನ ಮಾನಿಸರ್ ಪೊಗಳಲ್ ಏನಂ ಬಲ್ಲರ್" ಹಲವು ನಾಲಗೆಗಳಿರುವ ಆದಿಶೇಷನಿಗೂ ಕನ್ನಡ
ನಾಡನ್ನು ಬಣ್ಣಿಸಲು ಸಾಧ್ಯವಿಲ್ಲ ಇನ್ನು ಸಾಮಾನ್ಯ ಮನುಷ್ಯರಿಂದ ಬಣ್ಣಿಸಲು ಸಾಧ್ಯವೇ? ಎಂದು
ತನ್ನ ನಾಡಿನ ಹಿರಿಮೆಯನ್ನು ಸಾರಿದ್ದಾನೆ.
ಪಾಲ್ಕುರಿಕೆ ಸೋಮನಾಥ (ಕಾಲ ಸು. ೧೧೯೫)
ಈತನ ಪ್ರಸಿದ್ಧ ತೆಲುಗು ಕೃತಿ
ಬಸವಪುರಾಣಂ. ಇದನ್ನು ಆಧರಿಸಿ ಭೀಮಕವಿಯು ಕನ್ನಡದಲ್ಲಿ ಬಸವಪುರಾಣವನ್ನು ಬರೆದನು.
ಸದ್ಗುರು ರಗಳೆ, ಚೆನ್ನಬಸವ
ರಗಳೆ, ಗಂಗೋತ್ಪತ್ತಿ ರಗಳೆ, ಶೀಲ ಸಂಪಾದನೆ, ಗಣ ಸಹಸ್ರನಾಮ, ಪಂಚರತ್ನ ಇವು ಈತನ ಕನ್ನಡ
ಗ್ರಂಥಗಳು
ತತ್ವಾವಿದ್ಯಾಕಲಾಪ,
ಕವಿತಾಸಾರ ಎಂಬುವು ಇವನ ಬಿರುದುಗಳು.
ನೇಮಿಚಂದ್ರ (ಕಾಲ ಸು. ೧೨೦೦)
ರಟ್ಟರಾಜ ಲಕ್ಷ್ಮಣ ದೇವನ
ಆಶ್ರಯದಲ್ಲಿದ್ದ ನೇಮಿಚಂದ್ರನು ಲೀಲಾವತಿ ಪ್ರಬಂಧ ಮತ್ತು ನೇಮಿನಾಥ ಪುರಾಣ ಎಂಬ ಎರಡು ಚಂಪೂ
ಕೃತಿಗಳನ್ನು ಬರೆದನು.
ಇವನಿಗೆ ಭಾರತೀ ಚಿತ್ತಚೋರ,
ಕವಿರಾಜ ಕುಂಜರ, ಚತುರ್ಭಾಷ ಚಕ್ರವರ್ತಿ, ಕವಿಧವಳ, ಕವಿರಾಜಮಲ್ಲ, ಸುಕರಕವಿಶೇಖರ ಎಂಬ
ಬಿರುದುಗಳಿದ್ದವು.
"ಶೃಂಗಾರಮಂ
ಕಾವ್ಯಬಂಧನದೊಳ್ ತಾಂ ಸೆರೆಗೆಯ್ದ ಮೆಯ್ಮೆಯೊಳಿವಂ ಶೃಂಗಾರಾಕಾರಾಗೃಹಮ್" ಎಂದು ತನ್ನನ್ನು
ಹೊಗಳಿಕೊಂಡಿದ್ದಾನೆ.
"ನೇಮಿಜನ್ನರಿರ್ವರೆ
ಕರ್ಣಾಟ ಕೃತಿ ಸೀಮಾ ಪುರುಷರ್” ಎಂದು ಮಧುರ ಕವಿಯು ಜನ್ನ ನೇಮಿಚಂದ್ರ ಕವಿಗಳನ್ನು
ಕೊಂಡಾಡಿದ್ದಾನೆ.
ಲೀಲಾವತಿ ಪ್ರಬಂಧ
ಇವನ ಲೀಲಾವತಿ ಪ್ರಬಂಧ ಕೃತಿಯ
ಮೇಲೆ ಸುಬಂಧುವಿನ ವಾಸವಾದತ್ತಾ, ಬಾಣ ಕವಿಯ ಸ್ವಪ್ನವಾಸವಾದತ್ತಾ ಕೃತಿಗಳ ಪ್ರೇರಣೆಯಾಗಿದೆ.
ರಟ್ಟವಂಶದ ೧ನೆಯ ಲಕ್ಷ್ಮಣರಾಜ
ಮತ್ತು ಚಂದಲದೇವಿಯರನ್ನು ಈ ಕೃತಿಯಲ್ಲಿ ಉಲ್ಲೇಖಿಸಿದ್ದಾನೆ.
ಶೃಂಗಾರವನ್ನೇ ಪ್ರಧಾನವಾಗಿರಿಸಿಕೊಂಡ
ಇದೊಂದು ೧೪ ಆಶ್ವಾಸಗಳುಳ್ಳ ಪ್ರೌಢ ಚಂಪೂ ಕಾವ್ಯ. ಕಂದರ್ಪದೇವ ಮತ್ತು ಲೀಲಾವತಿ ಕನಸಿನಲ್ಲಿ
ಒಬ್ಬರನ್ನೊಬ್ಬರು ಕಂಡು ಪ್ರೀತಿಸಿ ಕೂಡಿ ನಂತರ ಮತ್ತೇ ಬೇರೆಯಾಗಿ ಕೊನೆಗೆ ಮತ್ತೇ ಕೂಡುವ ಕಥೆ
ಲೀಲಾವತಿ ಪ್ರಬಂಧದ ವಸ್ತು. ಕಂದರ್ಪದೇವ ಮತ್ತು ಮಕರಂದನ ಗಾಢಮೈತ್ರಿ ಮಾದರಿಯಾದುದು.
ಒಂದೇ ವರ್ಷದಲ್ಲಿ ಇದನ್ನು
ಬರೆದು ಮುಗಿಸಿ ಶೃಂಗಾರ ಕಾರಾಗೃಹನೆಂಬ ಬಿರುದು ಪಡೆದನು.
"ಸ್ತ್ರೀ ರೂಪಮೇ
ರೂಪಮ್, ಶೃಂಗಾರಮೇ ರಸಂ" ಎಂಬ ಸಾಲು ಲೀಲಾವತಿ ಪ್ರಬಂಧದ ಪ್ರಧಾನ ರಸ ಶೃಂಗಾರವನ್ನು ಕುರಿತು
ಹೇಳಿದ ಮಾತು.
ನೇಮಿನಾಥ ಪುರಾಣ
೨೨ನೇ ತೀರ್ಥಂಕರನ ಕುರಿತು
ಬರೆದ ಈ ಕಾವ್ಯದಲ್ಲಿ “ಜಿನಕಥೆಯೊಳ್ ಸಂಧಿಸಿ ವಸುದೇವಾಚ್ಯುತ ಕಂದರ್ಪರ ಕಥೆಗಳನಿತುಮಂ
ವಿರಚಿಸುವೆಂ” ಎಂದಿದ್ದಾನೆ.
ತನ್ನ ಈ ಕೃತಿಯನ್ನು ಕುರಿತು
"ಬೆಲೆಯಿಂದಕ್ಕುಮೆ ಕೃತಿಗಾವಿಲ ಭುವನದ ಭಾಗ್ಯದಿಂದಮಕ್ಕುನೋಳ್ಪಂ ಬೆಲೆಗೊತ್ತು ತಾರ ಮಧುವಂ
ಮಲಯಾನಿಲನಂ ಮನೋಜನಮ್ ಕೌಮುದಿಯಂ" ಎಂದಿದ್ದಾನೆ.
ಕೃಷ್ಣನು ಕಂಸನನ್ನು ಕೊಂದ
ಸಂದರ್ಭಕ್ಕೆ ಈ ಕತೆಯು ನಿಂತು ಹೋಗಿದೆ. ಈ ಕಾರಣದಿಂದ ಇದನ್ನು ಅರ್ಧನೇಮಿ ಪುರಾಣ ಎಂತಲೂ
ಕರೆಯುವರು.
ಈ ಕೃತಿಯಲ್ಲಿ ಹೊಯ್ಸಳ
ವೀರಬಲ್ಲಾಳನ ಮಂತ್ರಿ ಪದ್ಮನಾಭನನ್ನು ತನ್ನ ಆಶ್ರಯಧಾತನಾಗಿ ಹೇಳಿಕೊಂಡಿದ್ದಾನೆ.
ರುದ್ರಭಟ್ಟ (ಕಾಲ ಸು ೧೨೦೦)
ಕನ್ನಡದ ಮೊದಲ ವೈಷ್ಣವ ಕವಿ
ಎನಿಸಿದ ರುದ್ರಭಟ್ಟನು ಹೊಯ್ಸಳ ವೀರಬಲ್ಲಾಳನ ಆಶ್ರಯದಲ್ಲಿದ್ದನು.
ಇವನ ಕೃತಿಗಳು ಜಗನ್ನಾಥ ವಿಜಯ
(ಚಂಪೂ) ಮತ್ತು ರಸಕಲಿಕೆ. ಜಗನ್ನಾಥ ವಿಜಯ ಕನ್ನಡದ ವಿಷ್ಣುಪುರಾಣ ಎಂದೇ ಖ್ಯಾತಿಯಾಗಿದೆ.
ಮೊದಲಬಾರಿಗೆ ವೈದಿಕ ಪುರಾಣವೊಂದನ್ನು ಕಾವ್ಯರೂಪದಲ್ಲಿ ಕನ್ನಡಕ್ಕೆ ತಂದುಕೊಟ್ಟನು.
"ಕಾವ್ಯಸಮಾಧಿಯಿಂ
ಪರಂಜ್ಯೋತಿ ಮುಕುಂದನೆನ್ನ ಬಗೆಯೊಳ್ ನಿಲೆ ನಿರ್ಮಲ ತತ್ವಬೋಧಂ ಉದ್ಯೋತಿಪುದು ಎಂಬುದಂ ಬಯಸಿ
ಪೇಳಲೊಡರ್ಚಿದೇನೀ ಪ್ರಬಂಧಂ", "ಧ್ವಯಭಾವಂ ನಮಗಿಲ್ಲ ಬಲ್ಲವರೇ ನಾನುಮ್ ನೀನುಂ….
ಏಕಮೂರ್ತಿಯೇ ಮೂರ್ತಿತ್ರಯವಾಯ್ತು" ಎಂದು ತನ್ನ ಕೃತಿಯ ಬಗ್ಗೆ ಹೇಳಿದ್ದಾನೆ.
ರಸಕಲಿಕೆ ಎಂಬುದು ಅಲಂಕಾರ
ಗ್ರಂಥವಾಗಿದೆ. ಈತನಿಗೆ ಕವಿರಾಜ, ಕೃತಿ ಶಾರದಾಭ್ರ, ಚಂದ್ರಾತಪ ಎಂಬ ಬಿರುದುಗಳಿದ್ದವು.
ಕೆರೆಯ ಪದ್ಮರಸ (ಕಾಲ ಸು ೧೨೦೦)
ಸಕಲೇಶ ಮಾದರಸನ
ಮೊಮ್ಮಗನಾಗಿದ್ದ ಈತನು ಹೊಯ್ಸಳ ನರಸಿಂಹ ಬಲ್ಲಾಳನಲ್ಲಿ ಮಂತ್ರಿಯೂ, ದಂಡಾಧೀಶನೂ ಆಗಿದ್ದನು.
ಸಂಸ್ಕೃತದಲ್ಲಿ ಶಿವಾದ್ವೈತ
ಸಾನಂದ ಚರಿತ್ರೆಯನ್ನೂ ಕನ್ನಡದಲ್ಲಿ ದೀಕ್ಷಾಬೋಧೆ ಎಂಬ ರಘಟ ನಿಘಂಟನ್ನೂ ರಚಿಸಿದನು
ಹರಿಹರ (ಕಾಲ ಸು. ೧೩ನೇ ಶ)
ಹೊಯ್ಸಳ ಅರಸ ಎರಡನೇ ನರಸಿಂಹ
ಬಲ್ಲಾಳನಲ್ಲಿ ಕರಣಿಕನಾಗಿದ್ದನು. ಇವನ ಗುರುಗಳು ಮಾಯಿದೇವ.
ಗಿರಿಜಾ ಕಲ್ಯಾಣ ಎಂಬ ಚಂಪೂ
ಕೃತಿಯನ್ನು, ಪಂಪಾಶತಕ, ರಕ್ಷಾಶತಕ ಎಂಬ ಎರಡು ಶತಕಗಳನ್ನು, ಮುಡಿಗೆಯ ಅಷ್ಟಕ ಎಂಬ ಅಷ್ಟಕವನ್ನು ರಚಿಸಿರುವನು.
ಶಿವಶರಣರ ಕುರಿತು ೧೦೬
ರಗಳೆಗಳನ್ನು ಬರೆದ ಕಾರಣ ರಗಳೆಯ ಕವಿ ಎಂದು ಖ್ಯಾತನಾಗಿದ್ದಾನೆ.
"ಪೋಗೆನೆ ಪೋಪ
ಬಾರೆಲೆವೋ ಬಾರೆನೇ ಜೀಯ ಹಸಾದವೆಂದು ಬೆಳ್ಳಾಗುತ್ತೆ ಬರ್ಪ ಮಾಣೆಲೆವೊ" ಎಂದು
ರಾಜಾಶ್ರಯವನ್ನು ಜೋಳವಾಳಿಯನ್ನು ತೊರೆದು ವೇಳವಾಳಿಯನ್ನು ಆಶ್ರಯಿಸಿದನು.
ಹಳಗನ್ನಡದಲ್ಲಿ
ಬಳಕೆಯಲ್ಲಿದ್ದ ೩ ಬಗೆಯ ಳ ಕಾರಗಳಿಗೆ ಬದಲಾಗಿ ಒಂದೇ ಬಗೆಯ ಳ ಕಾರವನ್ನು ಬಳಕೆಗೆ ತಂದನು.
ತನ್ನ ೧೦ ಆಶ್ವಾಸಗಳ ಕೃತಿಯಾದ
ಗಿರಿಜಾ ಕಲ್ಯಾಣವನ್ನು ಕುರಿತು "ಕಾವ್ಯ ನವರಸ ಸೇವ್ಯಂ, ಹೊಸತಿದು ಪಾವನಮಿದು" ಎಂದು
ಹೇಳಿಕೊಂಡಿದ್ದಾನೆ. ಕಾಳಿದಾಸನ ಕುಮಾರ ಸಂಭವ ಈ ಕೃತಿಗೆ ಆಕರ ಗ್ರಂಥ.
"ಮದೀಶ ನಿಜಭಕ್ತಿ
ತರಂಗಿಣಿ ಮೀರುತುಬ್ಬರಂಬರಿವುತುಮೆನ್ನಮೇಲೆ ಮಡುಗಟ್ಟುವುದೆಂದಲೆ ಹಂಪೆಯಾಳ್ದನೆ",
"ಪೊಗಳಿ ಮಿಕ್ಕಿನ ಚಕ್ರಪಾಣಿ ಸರಸಿಜೋದ್ಭೂತ ಸಂಕ್ರಂದದನಾದಿಗಳಂ… ಈಶ್ವರಂಗೆಯ್ದೆ ನಾಲಗೆಯಂ
ಮಾರಿದೆಮ್", "ಮನುಜರ ಮೇಲೆ ಸಾವವರ ಮೇಲೆ ಕನಿಷ್ಠರ ಮೇಲೆ … ಅನವರತಂ ಪೊಗಳ್ದು
ಕೆಡಬೇಡಲೇ ಮಾನವ ನೀನಹರ್ನಿಶಂ ನೆನೆ ಪೊಗಳರ್ಚಿಸೆಮ್ಮ ಕಡುಸೊಂಪಿನ ಪೆಂಪಿನ ಹಂಪೆಯಾಳ್ದನಂ"
ಇವು ಹರಿಹರನ ಪಂಪಾಶತಕದಲ್ಲಿ ಬರುವ ಶಿವನ ಮೇಲಿನ ಭಕ್ತಿಯ ಸಾಲುಗಳು.
"ಅಂಜದಿರು ಅಂಜದಿರು
ಮಗನೇ, ಭವದ ಮಾಲೆಯನ್ನು ಹೊದ್ದಲೀಯದೆ ನಿನ್ನ ಸಲಹುತ್ತೇನೆ, ನೆಲವು ಮೆಚ್ಚುವಂತೆ
ಮೆರೆಯುತ್ತೇನೆ", "ಎಲೆ ಮರುಳೆ ವಿಪ್ರ, ಎಲೆ ಕರ್ಮದ ಕಡುಜಡನೆ, ಕೇಳು. ಭಕ್ತರು
ಕೊಟ್ಟರೆ ದೇವರು ಕೈಕೊಳ್ಳುವನು" ಇವು ಬಸವದೇವರಾಜರಗಳೆಯಲ್ಲಿ ಬಸವಣ್ಣನಿಗೆ ಶಿವನು ಹೇಳಿದ
ಮಾತುಗಳು
ತನ್ನ ಪ್ರಭುದೇವರ ರಗಳೆಯಲ್ಲಿ
ಅಲ್ಲಮಪ್ರಭುವನ್ನು ಕುರಿತು ಮೊದಲಬಾರಿಗೆ ಬರೆದನು.
ರಗಳೆಯ ನಂತರ ಕಂದವನ್ನು
ಹೆಚ್ಚಾಗಿ ಪ್ರೀತಿಸಿದ ಹರಿಹರ ಕಂದವನ್ನು "ಅಮೃತಾಲತಿಕಾ ಕಂದಂಗಳ್" ಎಂದಿದ್ದಾನೆ.
ರಾಘವಾಂಕ (ಕಾಲ ಸು. ೧೩ನೇ ಶ)
ಈತನ ತಂದೆ ಮಹಾದೇವ ಭಟ್ಟ,
ತಾಯಿ ರುದ್ರಾಣಿ.
ಹರಿಹರನ ಶಿಷ್ಯನೂ ಅಳಿಯನೂ
ಆಗಿದ್ದ ರಾಘವಾಂಕನು ಷಟ್ಪದಿ ಬ್ರಹ್ಮ ಎಂದೇ ಖ್ಯಾತನಾಗಿದ್ದವನು. ಉಭಯಕವಿಕಮಲರವಿ, ಕವಿ ಶರಭ
ಭೇರುಂಡ ಎಂಬುವು ಅವನ ಬಿರುದುಗಳು.
ಹರಿಶ್ಚಂದ್ರ ಚಾರಿತ್ರ್ಯ,
ಸೋಮನಾಥ ಚಾರಿತ್ರ್ಯ, ಸಿದ್ದರಾಮ ಚಾರಿತ್ರ್ಯ, ವೀರೇಶ ಚರಿತೆ ಈತನ ಪ್ರಮುಖ ಕೃತಿಗಳು.
"ಹಂಪೆಯರಸನ ಪೊಗಳ್ವ
ನಾಲಗೆಯೊಳ್ ಅನ್ಯದೈವವ ಭವಿಗಳ ಕೀರ್ತಿಸಿದೆನಾದೊಡೆ ಮನಸಿಜಾರಿಯ ಭಕ್ತನಲ್ಲ" ಎಂದು ತನ್ನ
ಶೈವಭಕ್ತಿಯ ಕುರಿತು ಹೇಳಿಕೊಂಡಿದ್ದಾನೆ.
ವಾರ್ಧಕ ಷಟ್ಪದಿಯಲ್ಲಿ
ರಚಿತವಾದ ಹರಿಶ್ಚಂದ್ರ ಚಾರಿತ್ರ್ಯ ಕಾವ್ಯಕ್ಕೆ ಸಂಸ್ಕೃತದ ಚಂಡಕೌಶಿಕ ನಾಟಕ ಪ್ರೇರಣೆಯಾಗಿದೆ.
"ಪರರೊಡವೆಯಂ ಕೊಂಡು ಕೃತಿಯ ಪೇಳದ ಭಾಷೆ, ಪೊಸಕಾವ್ಯ ಕನ್ನಿಕೆ" ಎಂದೆಲ್ಲಾ ತನ್ನ ಈ
ಕಾವ್ಯದ ಕುರಿತು ಹೇಳಿಕೊಂಡಿದ್ದಾನೆ.
ವೀರೇಶ ಚರಿತೆ ಕಾವ್ಯವನ್ನು
ಉದ್ಧಂಡ ಷಟ್ಪದಿಯಲ್ಲಿ ಬರೆದಿದ್ದು ಅದನ್ನು ಮೀಸಲುಗವಿತೆ ಎಂದು ಕರೆದಿದ್ದಾನೆ.
"ಜಗದ ಗುರು
ಸಿದ್ದರಾಮನಾಥಮ್ ಮನುಜನಲ್ಲ, ಕಾರಣರುದ್ರ", "ಎವೆಯಿಕ್ಕದ ಉಸಿರಿಕ್ಕದ ಉಣ್ಣದ
ಜಿತೇಂದ್ರಿಯತ್ವವ ತಳೆದ ನಿರ್ಮಾಯನೆನಿಸುವ ಶಿವಜ್ಞಾನಿ", "ಬಯಲು ಬಲಿದಾಕಾರವಾದಂತಿಹ ಮಹಾತ್ಮ",
"ಸಾವಿರ ನಿಷ್ಠೆ ಎಂದೆಲ್ಲಾ ಸಿದ್ದರಾಮನನ್ನು ತನ್ನ ಸಿದ್ದರಾಮ ಚಾರಿತ್ರ್ಯ ಕೃತಿಯಲ್ಲಿ
ಹಾಡಿ ಹೊಗಳಿದ್ದಾನೆ.
ಕವಿಕಾಮ (ಕಾಲ ಸು. ೧೩ನೇ ಶ)
ಇವನ ಕೃತಿ ಶೃಂಗಾರ ರತ್ನಾಕರ,
“ಕನ್ನಡದಲ್ಲಿ ರಸಶಾಸ್ತ್ರವನ್ನು ಕುರಿತು ಪ್ರತ್ಯೇಕವಾಗಿ ಬರೆಯಲಾದ ಮೊದಲ ಗ್ರಂಥ” ಎನಿಸಿದೆ. ಇದರ
ಮತ್ತೊಂದು ಹೆಸರು ರಸವಿವೇಕ.
ಧನಾಗಮ ಸೂತ್ರಧಾರಿ,
ವಾಗ್ದೇವಿಲಬ್ಧ ವರಪ್ರಸಾದವಿಭಮ್ ಎಂದು ಮುಂತಾಗಿ ತನ್ನನ್ನು ತಾನು ಹೊಗಳಿಕೊಂಡಿದ್ದಾನೆ.
ಜನ್ನ (ಕಾಲ ಸು. ೧೨೨೫)
ಕವಿಚಕ್ರವರ್ತಿ ಎನಿಸಿದ್ದ
ಜನ್ನ ಹೊಯ್ಸಳ ಅರಸ ವೀರಬಲ್ಲಾಳನ ಆಸ್ಥಾನದಲ್ಲಿ "ನಿಂದಿರೆ ದಂಡಾದೀಶಂ ಕುಳ್ಳಿರೆ ಮಂತ್ರಿ,
ತೊಡಂಕೆ ಕವಿ'' ಎಂದು ಹೆಸರಾಗಿದ್ದವನು.
ತಂದೆ ಶಂಕರ (ಶಂಕರನ ಬಿರುದು
ಸುಮನೋಬಾಣ), ತಾಯಿ ಗಂಗಾದೇವಿ. ೩ನೇ ನಾಗವರ್ಮ ಮತ್ತು ರಾಮಚಂದ್ರ ದೇವಮುನಿ ಇವನ
ಗುರುಗಳಾಗಿದ್ದರು.
"ನಾಳ್ಪ್ರಭು ಜನಾರ್ಧನ
ದೇವ", "ನವ ವೈಯ್ಯಾಕರಣಂ ತರ್ಕ ವಿನೋದಮ್ ಭರತಸುರತಶಾಸ್ತ್ರ ವಿಳಾಸಮ್",
"ಚದುರನಿಧಿ ಚಲದ ನೆಲೆ ಜಾಗದ ಸಾಗರಂ ಅಣ್ಮಿನಾಗರಂ", "ತಾನಿಟ್ಟ ಕೈಯಲ್ಲದೆ
ಒಡ್ಡಿದ ಕೈಯಲ್ಲದ ಪೆಂಪು" ಎಂದೆಲ್ಲಾ ತನ್ನ ಬಗ್ಗೆ ಹೊಗಳಿಕೊಂಡಿದ್ದಾನೆ.
ಯಶೋಧರ ಚರಿತೆ
ಯಶೋಧರ ಚರಿತೆ ಪೂರ್ಣವಾಗಿ
ಕಂದಪದ್ಯದಲ್ಲಿ ಬರೆದ ಮೊದಲ ಕಾವ್ಯ, ಕೊನೆಯ ಕೆಲವು ಪದ್ಯಗಳು ಮಾತ್ರ ವೃತ್ತದಲ್ಲಿವೆ. ವಾದಿರಾಜನ
ಸಂಸ್ಕೃತ ಯಶೋಧರ ಚರಿತೆಯೇ ಇದಕ್ಕೆ ಆಕರ.
ಯಶೋಧರ ಚರಿತೆಯಲ್ಲಿ ಬರುವ
ಮುಖ್ಯ ಸಾಲುಗಳು
"ಮರುಳೇ ಪೊಲ್ಲಮೆಯೇ
ಲೇಸು ನಲ್ಲರ ಮೈಯೊಳ್", "ಇಂದೆನಗಾತನೆ ಕುಲದೈವಂ ಕಾಮದೇವನಿಂದ್ರಮ್ ಚಂದ್ರಂ",
"ಒಲಿದವನೆ ಚೆಲುವನು, ಚೆಲುವಿಕೆಯಿಲ್ಲದಿರುವುದೇ ಒಲಿದವನಿಗೆ ಲೇಸು",
"ನಿನ್ನುಳಿದೊಡೆ ಸಾವವಳೆನಗೆ ಮಿಕ್ಕ ಗಂಡರ್ ಸಮಸೋದರರೆಂದು ತಿಳಿಪಿದಳ್ ನಂಬುಗೆಯಿಮ್"
ಎಂಬ ಸಾಲುಗಳು ಅಷ್ಟಾವಕ್ರನ ಮೇಲಿನ ಅಮೃತಮತಿಯ ಕಾಮದ ಪ್ರೀತಿಯ ಆಳವನ್ನು ತಿಳಿಸುತ್ತವೆ.
"ಆಗಳ್ ಬಾಳ್
ನಿಮಿರ್ದುದು ತೋಳ್ ತೂಗಿದುದು ಮನಂ ಕನಲ್ದುದು ಎರಳ್ ಭಾಗಂ ಮಾಡಲ್, ಧೃತಿ ಬಂದಾಗಳೇ ಮಾಣೆಂಬ
ತೆರದೆ ಪೇಸಿದನರಸಮ್" ಎಂಬ ಸಾಲು ಯಶೋಧರನ ಮೂಲಕ ಹೊರಟ ಜನ್ನನ ಜೈನ ಧರ್ಮಸಾರದ ನುಡಿಯಾಗಿದೆ.
"ಮನಸಿಜನ ಮಾಯೆ
ವಿಧಿವಿಲಸನದ ನೆರಂಬಡೆಯೇ ಕೊಂದು ಕೂಗದೆ ನರರಂ" ಅಮೃತಮತಿಯ ಮೋಹಕ್ಕೆ ಜನ್ನನು ನೀಡಿದ
ಕಾರಣವಿದು.
"ನುಣ್ದನಿ ನಿದ್ರೆಗೆ
ಜಾರಿದ ಕೃತಕ ಬೀಜಮಾಯ್ತೆನೆ ಮೃಗಲೋಚನೆ ತಿಳಿಸಿದಾಲಿಸಿ ಮುಟ್ಟಿದ ಮನಮಂ ತೊಟ್ಟನೇ ಪಸಾಯ
ದಾನಂಗೊಟ್ಟಳ್" ಎಂಬುದು ಯಶೋಧರ ಚರಿತೆಯಲ್ಲಿನ ಮತ್ತೊಂದು ಮನಮೋಹಕ ಸಾಲು.
ಅನಂತನಾಥ ಪುರಾಣ
೧೪ ನೇ ತೀರ್ಥಂಕರನಾದ
ಅನಂತನಾಥನ ಕುರಿತಾದ ೧೪ ಆಶ್ವಾಸಗಳುಳ್ಳ ಕಾವ್ಯ. ಇದಕ್ಕೆ ಆಕರ ಗುಣಭದ್ರಾಚಾರ್ಯನ ಉತ್ತರಪುರಾಣ.
"ಕಟ್ಟಿಯುಮೇನೋ
ಮಾಲೆಗಾರನು ಪೊಸಬಾಸಿಗಮ್ ಮುಡಿವ ಬೋಗಿರ್ಗಲ್ಲದೆ ಬಾಡಿಪೋಗದೆ"
ಅನಂತನಾಥಪುರಾಣದಲ್ಲಿ
ಚಂಡಶಾಸನನ ಕೈಗೆ ಸಿಕ್ಕ ಸುನಂದೆಯ ಸ್ಥಿತಿಯನ್ನು "ಬೂತೆ ಪಾಳ್ಮನೆಯೊಳ್ ನಾಯ್ ಘೃತಬಾಂಡಮಮ್
ತೆಗೆವವೋಲ್ ಕಳ್ದೊಯ್ವುದು ಆಳ್ದಾಳಿಯೇ" ಎಂದು ವರ್ಣಿಸುತ್ತಾನೆ.
ಮನಸಿಜನ ಮಾಯೆಯಿಂದ ಉಂಟಾದ
ಪರಿಣಾಮವನ್ನು "ಸ್ಮರನೊಳ್ ದಾಯಿಗನಾಗಿ ಬೆಂದ ವಿಧಿಯೊಂದಮ್ ಮಾಡಿದಂ" ಎಂಬ ಸಾಲಿನಲ್ಲಿ
ಹೇಳಿದ್ದಾನೆ.
ಸುನಂದೆಯ ಜೀವನದಲ್ಲಾದ ವಿಧಿ
ವಿಲಾಸವನ್ನು "ಬಿದಿಯೆಂಬ ಮದಗಜಮ್ ನೃಪಸದನ ಸರೋವರದೊಳು ಇಳಿದು ಸೆಳೆತಂದು ವನಾಂತದೊಳಿಕ್ಕಿದ
ಬಾಳಮೃಣಾಳದವೋಲ್" ಎನ್ನುವಲ್ಲಿ ಮನದಟ್ಟುವಂತೆ ಹೇಳಿದ್ದಾನೆ.
ಸುನಂದೆಯ ಮರಣ ಸಂದರ್ಭದಲ್ಲಿ
"ಹೃದಯದೊಳಿರ್ದ ವಲ್ಲಭನನಾಕ್ಷಣ ಭೀತಿವನೀಕ್ಷಿಪನಂತೆ ಮುಚ್ಚಿದುವು ಅಲರ್ಗಣ್" ಎಂದು
ಹೃದಯ ವಿದ್ರಾವಕವಾಗಿ ವರ್ಣಿಸಿದ್ದಾನೆ.
ಅನುಭವ ಮುಕುರ ಎಂಬುದು
ಕಾಮಶಾಸ್ತ್ರದ ಕುರಿತ ಕಾವ್ಯ.
ಮಲ್ಲಿಕಾರ್ಜುನ (ಕಾಲ ಸು. ೧೨೪೦)
ಮಲ್ಲಿಕಾರ್ಜುನನಿಗೆ ಚಿದಾನಂದ
ಎಂಬ ಮತ್ತೊಂದು ಹೆಸರು ಹಾಗೂ ಯೋಗಿಪ್ರವರನೆಂಬ ಬಿರುದಿತ್ತು. ಇವನು ವೀರಸೋಮೇಶ್ವರ ಎಂಬಾತನ
ಆಶ್ರಯದಲ್ಲಿದ್ದನು.
ಈತನ ಪ್ರಸಿದ್ಧ ಕೃತಿ ಕನ್ನಡ
ಮೊದಲ ಸಂಕಲನ ಕೃತಿ ಎನಿಸಿದ ಸೂಕ್ತಿಸುಧಾರ್ಣವ. ಈ ಕೃತಿಯ ಮತ್ತೊಂದು ಹೆಸರು ಕಾವ್ಯಸಾರ. ಈ
ಕೃತಿಯಲ್ಲಿ ಹೊಯ್ಸಳ ವಂಶದ ವರ್ಣನೆಯನ್ನು ಮಾಡಿದ್ದಾನೆ.
"ಚದುರರ ಮೆಚ್ಚು,
ಭಾವುಕರ ಕೈಪಿಡಿ ಅಕ್ಕರಿಗರಾಭರಣಂ" ಎಂದು ತನ್ನ ಕೃತಿಯನ್ನು ಮೆಚ್ಚಿ ಹೇಳಿದ್ದಾನೆ.
ಈತ ಬಸರಾಳು ಶಾಸನದ ಕರ್ತೃ ಎಂಬ ಊಹೆ ಇದೆ
ಕೇಶಿರಾಜ (ಕಾಲ ಸು. ೧೨೬೦)
ತಂದೆ ಸೂಕ್ತಿಸುಧಾರ್ಣವ
ಕೃತಿಯ ಕರ್ತೃ ಮಲ್ಲಿಕಾರ್ಜುನ, ಸೋದರಮಾವ ಜನ್ನ.
ಈತನ ಪ್ರಸಿದ್ಧ ಕೃತಿ
ಶಬ್ದಮಣಿದರ್ಪಣ. ಕನ್ನಡದಲ್ಲಿ ಸ್ವತಂತ್ರವಾಗಿ ಹುಟ್ಟಿಕೊಂಡ ವ್ಯಾಕರಣ ಗ್ರಂಥಗಳಲ್ಲಿ ಮೊದಲನೆಯದು.
“ಸಿರಿಗೀಕ್ಷಿಪ ರಸಚಿತ್ರಂ
ಸರಸತಿಗೆ ಎರಡನೆಯ ಬೀಣೆ” ಎಂದು ಪಂಡಿತರು ಶಬ್ದಮಣಿದರ್ಪಣವನ್ನು ಹೊಗಳಿದ್ದಾರೆ.
ಸಂಧಿ, ಸಮಾಸ, ನಾಮ, ಅವ್ಯಯ,
ತದ್ಧಿತ, ಧಾತು, ಆಖ್ಯಾತ, ಅಪಭ್ರಂಶ ಎಂದು ತನ್ನ ಕೃತಿಯನ್ನು ಎಂಟು ಭಾಗಗಳಾಗಿ ಮಾಡಿದ್ದಾನೆ.
ಕೇಶಿರಾಜನು ಕನ್ನಡದ ಅಸಾಧಾರಣ
ಲಕ್ಷಣಗಳನ್ನು ಕುರಿತು ಹೇಳಿದ್ದಾನೆ. ಅವು ಗಮಕ ಸಮಾಸ, ರಳಕುಳಕ್ಷಳ, ಶ್ರುತಿಸಹ್ಯ ಸಂಧಿ,
ಸತಿಸಪ್ತಮಿ, ಸಮಸಂಸ್ಕೃತೋಕ್ತಿ, ವಮಹಪಭೇದ, ಅವ್ಯಯಲಿಂಗ, ಶಿಥಿಲದಿತ್ವ, ಯತಿವಿಲಂಘನ
ಈಶ್ವರ ಕವಿಯು ಈತನನ್ನು
ಕರ್ನಾಟಕ ಲಕ್ಷಣ ಶಿಕ್ಷಾಚಾರ್ಯ, ಸುಲಕ್ಷಣಾ ಕೇಶವ ಎಂದಿದ್ದಾನೆ. ಸುಕವಿ ಎಂಬುದು ಇವನಿಗಿದ್ದ
ಮತ್ತೊಂದು ಬಿರುದು.
ಚೌಂಡರಸ (ಕಾಲ ಸು. ೧೩೦೦)
ದಂಡಿಯ ದಶಕುಮಾರ ಚರಿತೆಯನ್ನು
ಕನ್ನಡಕ್ಕೆ ಅಭಿನವದಶಕುಮಾರ ಚರಿತೆ ಎಂದು ಅನುವಾದಿಸಿದ್ದಾನೆ. ಅವನ ಮತ್ತೊಂದು ಕೃತಿ ನಳಚರಿತ್ರೆ
"ಲೌಕಿಕ ಧಾರ್ಮಿಕ
ಅಂಶಗಳೆರಡನ್ನು ಮಿಶ್ರಣ ಮಾಡಿ ಬರೆದವರಲ್ಲಿ ಚೌಂಡರಸನೇ ಮೊದಲಿಗ"
ಭೀಮಕವಿ (ಕಾಲ ಸು. ೧೩೭೦)
ಭೀಮಕವಿಯ ಪ್ರಮುಖ ಕೃತಿಗಳು
ಬಸವಪುರಾಣ, ಭೀಮಕವೀಶ್ವರ ರಗಳೆ, ಭೃಂಗೀ ದಂಡಕ.
ತನ್ನನು ತಾನು ಉಭಯ ಕವಿ
ಸಮರ್ಥನೆಂದು ಹೇಳಿಕೊಂಡಿದ್ದಾನೆ.
ಕವಿ ಸೋಮನಾಥಮ್ ರಸಮೊಸರ
ಮುನ್ನುಸಿರ್ದುದೆನೆ ಕನ್ನಡಿಸಿ ಪೇಳೈಮ್" ಎಂದು ಹೇಳುವಲ್ಲಿ ಬಸವಪುರಾಣವು ತೆಲುಗಿನ ಪಾಲ್ಕುರಿಕೆ ಸೋಮನಾಥನ
ಬಸವಪುರಾಣಂ ಕೃತಿಯ ಅನುವಾದ ಎಂದು ತಿಳಿಯುತ್ತದೆ.
ಭಾಮಿನಿ ಷಟ್ಪದಿಯಲ್ಲೇ
ರಚಿತವಾದ ಕನ್ನಡದ ಮೊದಲ ಕಾವ್ಯ ಬಸವಪುರಾಣ. ಹರಿಹರನ ಬಸವರಾಜದೇವ ರಗಳೆಯ ನಂತರ ಬಸವಣ್ಣನನ್ನು
ಕುರಿತು ರಚಿತವಾದ ಕಾವ್ಯವಿದು.
“ವಸ್ತುಕದ ಮುಂದೆ ವಿಳಾಸಮೇ
ಸಾಮಾನ್ಯವರ್ಣಕಮೀ ಕವಿತೆಯಿದೆಂದು ಓಸರಿಸದಿರಿ” ಎಂದು ತನ್ನ ಕೃತಿಯ ಕುರಿತು ಓದುಗರಲ್ಲಿ
ಭಿನ್ನವಿಸಿಕೊಂಡಿದ್ದಾನೆ.
ಕುಮುದೇಂದು (ಕಾಲ ಸು. ೧೩೭೦)
ವಾದಿಕುಮುದ ಚಂದ್ರ ಎಂಬುದು
ಈತನಿಗಿದ್ದ ಇನ್ನೊಂದು ಹೆಸರು
ಕುಮುದೇಂದು ರಾಮಾಯಣ ಮತ್ತು
ಪ್ರತಿಷ್ಠಾಕಲ್ಪಟಿಪ್ಪಣಿ ಎಂಬುವು ಈತನ ಕೃತಿಗಳು
ಕವಿರಾಜ ಶಿಖಾಮಣಿ ಎಂದು
ತನ್ನನ್ನು ತಾನು ಕರೆದುಕೊಂಡಿದ್ದಾನೆ
ದೇಪರಾಜ/ದೇವರಾಜ (ಕಾಲ ಸು. ೧೪೧೦)
ದೇಪರಾಜನ ಸೊಬಗಿನ ಸೋನೆ
ಕನ್ನಡದ ಮೊದಲ ಸಾಂಗತ್ಯ ಕೃತಿ. ಇಲ್ಲಿಯ ಭಾಷೆ ಹಳಗನ್ನಡ.
ತನ್ನ ಕೃತಿಯ ಕುರಿತು ದೇಪರಾಜ
ಜಾಣರ ಮೆಚ್ಚು, ರಸಿಕರ ರಸಾಯನ, ವಾಣಿಯ ಸಿರಿ, ಭಾವಕರಿಗೆ ಮಾಣಿಕಗನ್ನಡಿ, ಕೇಳ್ವ ಕೋವಿದರಿಗೆ
ಪ್ರಾಣ ಎಂದು ಮುಂತಾಗಿ ಹೊಗಳಿಕೊಂಡಿದ್ದಾನೆ.
ಪರಿವರ್ಧಿನಿ ಷಟ್ಪದಿಯಲ್ಲಿ
ಅಮರ ಶತಕ ಎಂಬ ಅಖಂಡ ಕಾವ್ಯವನ್ನು ಮೊದಲ ಬಾರಿಗೆ ಬರೆದವನು ದೇಪರಾಜ.
ಲಕ್ಕಣ್ಣ ದಂಡೇಶ (ಕಾಲ ಸು.೧೪೧೦ - ೧೪೬೩)
ವಿಜಯನಗರದ ಪ್ರೌಢದೇವರಾಯನ
ಆಸ್ಥಾನದಲ್ಲಿ ದಂಡನಾಯಕನಾಗಿದ್ದನು. ಹೊಸಪಟ್ಟಣ ಇವನ ಜನ್ಮಸ್ಥಳ.
ಇವನು ವಾರ್ಧಕ ಷಟ್ಪದಿಯಲ್ಲಿ
ಶಿವತತ್ವ ಚಿಂತಾಮಣಿ ಎಂಬ ಕೃತಿಯನ್ನು
ಬರೆದಿರುವನು
"ನೂತನ ಗಣಗಳ
ಚರಿತ್ರೆಯನ್ನು ಕುರಿತು ಬರೆದವರಲ್ಲಿ ಲಕ್ಕಣ್ಣ ದಂಡೇಶನೇ ಮೊದಲಿಗ".
"ವಿತತವೇದಾಗಮ
ಪುರಾತನೋಕ್ತಿಗಳ ಸಂಮತದ ಸಾರಾಯ ಶಿವತತ್ವ ಚಿಂತಾಮಣಿಯ ಕೃತಿಯಂ ವಿಸ್ತರಿಸುವೆಂ" ಎಂದು ತನ್ನ
ಕೃತಿಯನ್ನು ಪ್ರಶಂಸಿಕೊಂಡಿದ್ದಾನೆ
ಕುಮಾರವ್ಯಾಸ (ಕಾಲ ಸು. ೧೪೩೦)
೧೮ ಆಶ್ವಾಸಗಳ ಕರ್ನಾಟಕ ಭಾರತ
ಕಥಾಮಂಜರಿ ಅಥವಾ ಗದುಗಿನ ಭಾರತ ಕುಮಾರವ್ಯಾಸನ ಪ್ರಸಿದ್ಧ ಕೃತಿಯಾಗಿದ್ದು ಇದನ್ನು ಭಾಮಿನಿ
ಷಟ್ಪದಿಯಲ್ಲಿ ಬರೆದಿದ್ದಾನೆ. ಐರಾವತ ಎಂಬುದು ಇವನ ಮತ್ತೊಂದು ಕೃತಿ
ಇವನ ಮೂಲ ಹೆಸರು ಗದುಗಿನ
ನಾರಾಣಪ್ಪ. ಊರು ಗದುಗಿನ ಕೋಳಿವಾಡ.
ತನ್ನ ಕಲ್ಪನಾಶಕ್ತಿಯ ಚಾತುರ್ಯದಿಂದಲೇ
ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂಬ ಬಿರುದನ್ನು ಪಡೆದವನು ಕುಮಾರವ್ಯಾಸ.
ಕುಮಾರವ್ಯಾಸನು ಮಹಾಭಾರತದ
ಮೊದಲ ಹತ್ತು ಪರ್ವಗಳನ್ನು ಮಾತ್ರ ಅನುವಾದಿಸಿದನು. ನಂತರದ ಎಂಟು ಪರ್ವಗಳನ್ನು ಕೃಷ್ಣದೇವರಾಯನ
ಆಸ್ಥಾನದಲ್ಲಿದ್ದ ತಿಮ್ಮಣ್ಣ ಕವಿಯು ಪೂರ್ಣಗೊಳಿಸಿ ಅದಕ್ಕೆ ಕೃಷ್ಣರಾಜ ಭಾರತವೆಂಬ ಹೆಸರಿಟ್ಟನು.
"ಅರಸುಗಳಿಗಿದು ವೀರ,
ದ್ವಿಜರಿಗೆ ಪರಮವೇದದ ಸಾರ, ಯೋಗೀಶ್ವರರ ತತ್ವವಿಚಾರ, ಮಂತ್ರೀಜನಕೆ ಬುದ್ದಿಗುಣ, ವಿರಹಿಗಳ
ಶೃಂಗಾರ, ವಿದ್ಯಾಪರಿಣಿತರ ಅಲಂಕಾರ", "ಕೃತಿಯು ಸತ್ಕರ್ಣಾಟಕದ ಭಾರತಕೆ ಮಂಜುಳ
ಮಂಜರಿಯು, ಮಹಾಕೃತಿಗೆ ನಾಯಕನಾದ ಗದುಗಿನ ವೀರನಾರಾಯಣ", "ತಿಳಿಯ ಹೇಳುವೆ ಕೃಷ್ಣ
ಕಥೆಯನು" ಎಂದೆಲ್ಲಾ ತನ್ನ ಕೃತಿಯ ಶ್ರೇಷ್ಠತೆಯನ್ನು ಸಾರಿ ಹೇಳಿದ್ದಾನೆ.
ದ್ರೌಪದಿಯನ್ನು ಸಭೆಗೆ
ಸೆಳೆದು ತರುವಾಗಿನ ದುಶ್ಯಾಸನನ ದುರುಳತನದ ಮಾತು "ನೀ ಪುಷ್ಪವತಿಯಾಗಲ್ಲಿ ಫಲವತಿಯಾಗು ನಡೆ
ಕುರುರಾಜ ಭವನದಲ್ಲಿ", ಮತ್ತು "ಮುಡಿಯ ಕಟ್ಟುವ ಕಾಲವು ಈ ದುಶ್ಶಾಸನನ ಶಿರವ ಕೆಡಹಿ
ಶಾಕಿಣಿಯರಿಗೆ ರಕುತವ ಕುಡಿಸಿ ತಣಿಯಲು ಕರುಳ ದಂಡೆಯಮುಡಿವ ವ್ರತವೆನಗಿಹುದು" ಎಂಬ ದ್ರೌಪದಿಯ
ಶಪಥದ ಮಾತುಗಳು ಅಭೂತಪೂರ್ವ.
ಕುಮಾರವ್ಯಾಸ ಹಾಡಿದನೆಂದರೆ
ಕಲಿಯುಗ ದ್ವಾರವಾಗುವುದು, ಭಾರತ ಕಣ್ಣಲ್ಲಿ ಕುಣಿಯುವುದು, ಮೈಯಲಿ, ಮಿಂಚಿನ ಹೊಳೆ
ತುಳುಕಾಡುವುದು ಎಂದು ಕುವೆಂಪು ಹೇಳಿದ್ದಾರೆ.
ಗುರುಬಸವ (ಕಾಲ ಸು. ೧೪೩೦)
ಶಿವಯೋಗಾಂಗ ಭೂಷಣ ಮತ್ತು
ಕಲ್ಯಾಣೇಶ್ವರ ಕೃತಿಗಳನ್ನು ಪರಿವರ್ಧಿನಿ ಷಟ್ಪದಿಯಲ್ಲಿ ಬರೆದಿದ್ದಾನೆ.
ಸ್ವರೂಪಾಮೃತ, ಸದ್ಗುರು ರಹಸ್ಯ
ಕೃತಿಗಳು ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿವೆ.
ವೃಷಭ ಗೀತೆಯು ಭೋಗ
ಷಟ್ಪದಿಯಲ್ಲಿ ರಚನೆಯಾಗಿದ್ದು, ಮನೋವಿಜಯ ಕಾವ್ಯವನ್ನು ಕುಸುಮ ಷಟ್ಪದಿಯಲ್ಲಿ ಬರೆಯಲಾಗಿದೆ.
ಇನ್ನು ಅವಧೂತ ಗೀತೆ ಹಾಡುಗಳ
ಸಂಗ್ರಹವಾಗಿದೆ.
ಚಾಮರಸ (ಕಾಲ ಸು. ೧೪೩೦)
ಭಾಮಿನಿ ಷಟ್ಪದಿಯಲ್ಲಿ
ಪ್ರಭುಲಿಂಗಲೀಲೆ ಎಂಬ ಕಾವ್ಯವನ್ನು ಬರೆದನು. ಈ ಕಾವ್ಯವು ತೆಲುಗು, ತಮಿಳು, ಮರಾಠಿ ಮತ್ತು
ಸಂಸ್ಕೃತ ಗ್ರಂಥಗಳಿಗೆ ಭಾಷಾಂತರವಾಗಿದೆ. ತನ್ನ ಕೃತಿಯನ್ನು ಕುರಿತು ‘ಕಾಳಗದ ಕೃತಿಯಲ್ಲ, ಸತ್ತವರ
ಕೃತಿಯಲ್ಲ’ ಎಂದು ಹೇಳಿದ್ದಾನೆ.
“ಅಲ್ಪಸುಖಕ್ಕೆ ಸೋಲದೆ,
ಕಬ್ಬಿನೊಳು ರಸವ ನೆರೆಸವಿವ ಗಜದಂತೆ ಭಕ್ತಿಯ ತೆರನ ತಿಳಿದಾಚರಿಸ ಬೇಕೆಂದರಿದವರು ಲಾಲಿಸುವುದೀ
ಪ್ರಭುಲಿಂಗ ಲೀಲೆಯನು” ಎಂದಿದ್ದಾನೆ
ರತ್ನಾಕರವರ್ಣಿ (ಕಾಲ ಸು. ೧೪೫೭)
ಕಾರ್ಕಳದ ಭೈರವರಾಜನ ಆಸ್ಥಾನ
ಕವಿಯಾಗಿದ್ದನು. ಮೂಡಬಿದಿರೆ ಇವನ ಜನ್ಮಸ್ಥಳ. ಚಾರುಕೀರ್ತಿ ಆಚಾರ್ಯ ಮತ್ತು ಹಂಸನಾಥ ಎಂಬುವವರು
ಈತನ ಗುರುಗಳಾಗಿದ್ದರು.
ಶೃಂಗಾರ ಕವಿ ಎಂದು
ಬಿರುದಾಂಕಿತನಾದ ಈತನು ಭರತೇಶ ವೈಭವ ಎಂಬ ಸಾಂಗತ್ಯ ಕೃತಿಯನ್ನು ಬರೆದಿರುವನು.
ಅಲ್ಲದೇ ತ್ರಿಲೋಕ ಶತಕ,
ರತ್ನಾಕರಾಧೀಶ್ವರ, ಅಪರಾಜಿತೇಶ್ವರ ಶತಕ ಎಂಬ ಶತಕ ಕೃತಿಗಳನ್ನು ಬರೆದಿದ್ದಾನೆ.
ಅಣ್ಣನ ಪದಗಳು ಎಂಬುದು ಈತನ
ನೀತಿಬೋಧಕ ಹಾಡುಗಳ ಸಂಕಲನವಾಗಿದೆ.
ಕಾವ್ಯ ಹೇಗಿರಬೇಕು ಎಂಬುದರ
ಕುರಿತು "ಸಕಲ ಲಕ್ಷಣವು ವಸ್ತುಕಕೆ ವರ್ಣಕಕಿಷ್ಟು ವಿಕಲವಾದರೂ ದೋಷವಿಲ್ಲ"
ಎಂದಿದ್ದಾನೆ.
"ಕಶಕುಶ ಶಿಥಿಲ ಸಮಾಸ
ಮುಂತಾದವರೊಳಗಿಲ್ಲ ಕೆಲವುಳ್ಳರುಂಟು ಕೆಲ ಎಲ್ಲಾದರೂ ಎಲ್ಲಬೇಕೆಂದವರ ಕೋಟಲೆಯೇಕೆ ಹಾಡುಗಬ್ಬದೊಳು.
ಎಂದು ಹಾಡುಗಬ್ಬ ಹೇಗಿರಬೇಕೆಂದು ಹೇಳುತ್ತಾನೆ.
"ತನುವಿಲ್ಲದಲ್ಲಿ
ಪ್ರಾಣ ಪ್ರಾಣಪ್ರತಿಷ್ಠೆಯಮ್ ಮಾಡಿ ಕವೀಶ್ವರರ ಘನತೆಯಂ ಬಣ್ಣಿಸುವರಾರ್ ಆನೆ ಹೋದುದೇ ಬೀದಿಯಲ್ಲವೇ
ಜಗದೊಳು" ಎಂಬ ಸಾಲು ಈತನ ನಂದಿಮಹಾತ್ಮ್ಯ ಕೃತಿಯಲ್ಲಿದೆ.
ತನ್ನ ಭರತೇಶ ವೈಭವ
ಕೃತಿಯನ್ನು ಕುರಿತು "ಅಯ್ಯಯ್ಯಾ ಚೆನ್ನಾದುದೆನೆ ಕನ್ನಡಿಗರು ರಯ್ಯ ಮಂಚಿದಿಯೆನೆ ತೆಲುಗಾ
ಅಯ್ಯಯ್ಯ ಎಂಚಪೊರ್ಲಾಂಡೆಂದು ತುಳುವರು ಮೈಯುಬ್ಬಿ ಕೇಳಬೇಕಣ್ಣ" ಎಂದಿದ್ದಾನೆ.
"ಗಣನೆಯಿಲ್ಲದ
ರಾಜ್ಯಸುಖದೊಳು ಓಲಾಡಿ ಧಾರಿಣಿ ಮೆಚ್ಚಿ ಜಿನಯೋಗಿಯಾಗಿ ಕ್ಷಣಕೆ ಕರ್ಮವ ಸುಟ್ಟು ಜಿನನಾದ"
ಎಂದು ತನ್ನ ಕಾವ್ಯ ನಾಯಕ ಭರತನನ್ನು ತನ್ನ ಭರತೇಶ ವೈಭವ ಕೃತಿಯಲ್ಲಿ ವೈಭವೀಕರಿಸಿದ್ದಾನೆ.
"ಭೋಗವಿಚಾರವು ಬೇಕು
ನೃಪತಿಗಾತ್ಮಯೋಗ ವಿಚಾರವು ಬೇಕು, ರಾಗರಸಿಕನಾಗಬೇಕು" ಎನ್ನುವ ಮೂಲಕ ತನ್ನ ಭರತ
ಚಕ್ರವರ್ತಿಯ ಸಮನ್ವಯ ಬುದ್ಧಿಯನ್ನು, ಉಂಡುಪವಾಸಿ ಬಳಸಿ ಬ್ರಹ್ಮಚಾರಿ ಭೂಮಂಡಲವಿದ್ದು
ನಿಸ್ಸಂಗ" ಎನ್ನುವ ಮೂಲಕ ಭರತೇಶ ವೈಭವ ಕೃತಿಯಲ್ಲಿ ಭರತನ ವ್ಯಕ್ತಿತ್ವದ ಪರಿಚಯವನ್ನು
ನೀಡುತ್ತಾನೆ.
"ಮನಸಿಜ ಕೇಳಣ್ಣ ನಿನಗೆ
ಎನಗೆ ಇಂದು ದುರ್ಮನದಿಂದ ಜಗಳವಪ್ಪುದೇಕೆ" ಎಂಬ ಭರತನ ಮಾತಿಗೆ "ಗರುಡ ಮಂತ್ರಕೆ
ವಿಷವಿಳಿವಂತೆ ಭರತ ಭೂವರನ ವಾಕ್ಯವ ಕೇಳಲಾಗಿ ಅಂಗಜಗೆ ಎತ್ತಿದ ಕೋಪ ಪೈಸರಿಸಿತು" ಬಾಹುಬಲಿಯ
ಕೋಪವಳಿದು ಯುದ್ಧ ನಿಂತಿತು ಎಂಬಂತೆ ಮಾಡಿ ಕವಿ ಭರತನನ್ನು ಶ್ರೇಷ್ಠನನ್ನಾಗಿಸಿದ್ದಾನೆ.
ನಿಜಗುಣ ಶಿವಯೋಗಿ (ಕಾಲ ಸು. ೧೫೦೦)
ಈತನು ಕೊಳ್ಳೇಗಾಲದ
ಚಿಲಕವಾಡಿಯವನು. ಶಂಭುಲಿಂಗ ಈತನ ಅಂಕಿತನಾಮ
ಷಟ್ ಶಾಸ್ತ್ರಗಳೆಂದು ಹೆಸರಾದ
ಅನುಭವಸಾರ, ಪರಮಾರ್ಥಗೀತೆ, ಪರಮಾನುಭವಬೋಧೆ, ಪರಮಾರ್ಥ ಪ್ರಕಾಶಿಕೆ, ಕೈವಲ್ಯ ಪದ್ದತಿ, ವಿವೇಕ
ಚಿಂತಾಮಣಿ ಎಂಬ ಗ್ರಂಥಗಳನ್ನು ಬರೆದಿದ್ದಾನೆ. ಇದಲ್ಲದೆ ಅರವತ್ತು ಮೂವರ ತ್ರಿಪದಿ ಎಂಬ
ಗ್ರಂಥವನ್ನು ಸಹ ಬರೆದಿದ್ದಾನೆ.
ವಿವೇಕ ಚಿಂತಾಮಣಿ ಗದ್ಯ
ಗ್ರಂಥವಾಗಿದ್ದು, ಕನ್ನಡದ ಮೊದಲ ವಿಶ್ವಕೋಶ ಎಂದು ಖ್ಯಾತವಾಗಿದೆ. ಈ ಕೃತಿಯು ಮರಾಠಿ ಹಾಗೂ
ಸಂಸ್ಕೃತ ಭಾಷೆಗಳಿಗೆ ಅನುವಾದವಾಗಿದೆ.
ಗದ್ಯಗ್ರಂಥ ಪರಮಾರ್ಥ
ಪ್ರಕಾಶಿಕೆ. ಈ ಪರಮಾರ್ಥ ಪ್ರಕಾಶಿಕೆಗೆ ಆಕರ ಚೆನ್ನಸದಾಶಿವ ಯೋಗಿಯ ಶಿವಯೋಗ ಪ್ರದೀಪಿಕೆ.
ಶಿವಯೋಗಸಾರಮು ಎಂಬ ಹೆಸರಿನಲ್ಲಿ ತೆಲುಗಿಗೆ ಅನುವಾದವಾಗಿದೆ.
ಪರಮಾನುಭವಬೋಧೆ ಸಾಂಗತ್ಯ
ಕೃತಿಯಾಗಿದ್ದು ಯಾಜ್ಞವಲ್ಕ್ಯ ಮೈತ್ರೇಯಿ ಇವರ ಸಂವಾದ ರೂಪದಲ್ಲಿರುವ ವೇದಾಂತ ಗ್ರಂಥ.
ಪರಮಾರ್ಥಗೀತೆ ಗುರು ಶಿಷ್ಯರ
ಸಂವಾದ ರೂಪದಲ್ಲಿದ್ದು ಮಂದಾನಿಲ ರಗಳೆಯಲ್ಲಿ ರಚನೆಯಾದ ಕೃತಿ. ಸಂಸ್ಕೃತ ಯೋಗವಾಸಿಷ್ಠ ಕೃತಿಯ
ಕನ್ನಡಾನುವಾದ.
ಅನುಭವಸಾರ ಕೃತಿಯು ಗುರು
ಶಿಷ್ಯರ ಸಂವಾದ ರೂಪದಲ್ಲಿರುವ ವೇದಾಂತ ಗ್ರಂಥ. ತ್ರಿಪದಿಯಲ್ಲಿ ರಚಿತವಾಗಿದೆ.
ಕೈವಲ್ಯ ಪದ್ಧತಿ ಕೃತಿಯು
ಅನುಭಾವ ಗೀತೆಗಳ ಸಂಕಲನವಾಗಿದೆ.
ಅರವತ್ತು ಮೂವರ ತ್ರಿಪದಿ
ಕೃತಿಯೇ ಹೇಳುವಂತೆ ೬೩ ಶಿವಶರಣರ ಕುರಿತಾದುದು.
ಕುಮಾರ ವಾಲ್ಮೀಕಿ (ಕಾಲ ಸು. ೧೫೦೦)
ಈತನ ನಿಜನಾಮ ತೊರವೆಯ ನರಹರಿ
ಭಾಮಿನಿ ಷಟ್ಪದಿಯಲ್ಲಿ ತೊರವೆ
ರಾಮಾಯಣ ಮತ್ತು ಐರಾವಣ ಕಾಳಗ ಎಂಬ ಕೃತಿಗಳನ್ನು ಬರೆದಿದ್ದಾನೆ.
ಕವಿರಾಜ ಹಂಸ ಎಂಬುದು ಈತನ
ಬಿರುದಾಗಿತ್ತು.
"ಕಂಡೆನಿದೊಂದು ಕನಸನ್ನು
ಕಾನನದೊಳು ಅರವಿಂದಮುಖಿಸಹಿತ ಎಮಗೆ ಸಂಭವಿಸಿತು ಪರಿಭ್ರಮಣ" ಇವು ರಾಮ ಪಟ್ಟಾಭಿಷೇಕ
ಸಮಯದಲ್ಲಿ ವಸಿಷ್ಠನ ಮಾತುಗಳು
"ನಮ್ಮಯ್ಯ ಜನಕ
ಬಂದವೊಲಾಯಿತು ಎಂದಳು ಮುಗಿದು ಕರಯುಗವ" ಈ ಸಾಲು ರಾವಣ ಮಾರುವೇಶದಲ್ಲಿ ಬಂದಾಗ ಸೀತೆಯಾಡಿದ
ನುಡಿಗಳು.
"ಮಾರಿಚನೆಂಬಗ್ಗಳದ
ಮಾಯಾಮೃಗದಲಿ ಅಳಿದನು ರಾಮನೆಂಬ ನೃಪ" ಇದು ಸೀತೆಗಾಡುವ ರಾವಣನ ಅನೃತದ ನುಡಿಗಳು.
"ಮಾಣದಾದೆನು ಮಾವನಾಡಿದ
ವಾಣಿಯಲಿ ಕಾಮವಿಕಾರದಿ ಕಾಣದಾದೆನು ಕಲಿವಿಭೀಷಣನ ಉಚಿತಭಾವನವ" ಎಂಬ ರಾವಣನ ಪಶ್ಚಾತ್ತಾಪದ
ಮಾತುಗಳು ಈ ಕೃತಿಯಲ್ಲಿ ಅದರ ಶೋಭೆ ಹೆಚ್ಚಿಸಿವೆ.
ಪರರ ಬಗೆ ಪರರುಕ್ತಿ… ತಿರುಗಿ
ನೋಡದ ಬಿರುದು ಬೇರೆ ಕುಮಾರ ವಾಲ್ಮೀಕಿಯ ವಚೋಲಹರಿ” ಎಂದು ಹೇಳಿಕೊಂಡಿದ್ದಾನೆ.
ಮೂರನೆಯ ಮಂಗರಸ (ಕಾಲ ಸು. ೧೫೦೮)
ಇವನ ಕೃತಿಗಳು ಜಯನೃಪ ಕಾವ್ಯ
(ಪರಿವರ್ಧಿನಿ ಷಟ್ಪದಿ), ಸಂಯುಕ್ತ ಕೌಮುದಿ (ಉದ್ದಂಡ ಷಟ್ಪದಿ), ಸೂಪಶಾಸ್ತ್ರ (ವಾರ್ಧಕ ಷಟ್ಪದಿ)
ನೇಮಿಜಿನೇಶ ಸಂಗತಿ, ಶ್ರೀಪಾಲ
ಚರಿತೆ, ಪ್ರಭಂಜನ ಚರಿತೆ ಇವು ಸಾಂಗತ್ಯ ಕೃತಿಗಳು
ಪ್ರಭುರಾಜ, ಪ್ರಭುಕುಲ
ರತ್ನದೀಪ ಎಂಬುವು ಇವನ ಬಿರುದುಗಳು
ಸಾಂಗತ್ಯದಲ್ಲಿ
ಹಾಡುಗಬ್ಬವಾಗಿ ಬರೆದ ಮೊದಲ ಜೈನಕೃತಿ ನೇಮಿಜಿನೇಶ ಸಂಗತಿ.
ಗುಬ್ಬಿಯ ಮಲ್ಲಣಾರ್ಯ (ಕಾಲ ಸು. ೧೫೧೩)
ವೀರಶೈವಾಮೃತ ಪುರಾಣ ಎಂಬ
ಕೃತಿಯನ್ನು ವಾರ್ಧಕ ಷಟ್ಪಧಿಯಲ್ಲಿ ಮತ್ತು ಭಾವಚಿಂತಾರತ್ನ, ಪುರಾತನರ ರಗಳೆ, ಗಣಭಾಷ್ಯ
ರತ್ನಮಾಲೆ, ವಾತೂಲ ತಂತ್ರ ಟೀಕೆ ಎಂಬ
ಕೃತಿಗಳನ್ನು ಬರೆದಿದ್ದಾನೆ.
ಸತ್ಯೇಂದ್ರ ಚೋಳನ ಕಥೆಯಲ್ಲಿ
ಬರುವ ತಿರುಕೊಳವಿನಾಚಿಯ ಪ್ರಸಂಗದಲ್ಲಿನ "ಮುತ್ತಿರ್ದೆಜನವ ಬಾಗಿಲದೊಳನೊಕ್ಕು ಪರಿವುತಿಹ
ನೆತ್ತರಂ ರುಂಡಮಂ ಮುಂಡಮಂ ಕಂಡು ಹಾ" ಎಂಬ ಸಾಲು ಮನಕಲುಕುತ್ತದೆ. ಇದೇ ಕತೆ ಮುಂದೆ
ಷಡಕ್ಷರಿಯ ರಾಜಶೇಖರ ವಿಳಾಸ ಕೃತಿಯ ರಚನೆಗೆ ಪ್ರೇರಣೆಯಾಯಿತು.
ನಂಜುಂಡ ಕವಿ (ಕಾಲ ಸು. ೧೫೨೫)
ರಾಮನಾಥ ಚರಿತೆ ಅಥವಾ ಕುಮಾರ ರಾಮನ ಸಾಂಗತ್ಯ ಎಂಬುದು ಈತನ
ಕೃತಿ. ಇದು ಕನ್ನಡದಲ್ಲಿ ರಚಿತವಾದ ಮೊದಲ ಚಾರಿತ್ರಿಕ ಸಾಂಗತ್ಯ ಕೃತಿ. ಅಲ್ಲದೆ ಮೊದಲ ಚಾರಿತ್ರಿಕ
ಕಾವ್ಯವೂ ಹೌದು.
ಈ ಚಾರಿತ್ರಿಕ ಕಾವ್ಯವನ್ನು
ಆಧರಿಸಿ ಜಿ ವರದರಾಯರು ಗುಮ್ಮಟ ಕೇಸರಿ ಎಂಬ ನಾಟಕವನ್ನು, ಹುಲ್ಲೂರು ಶ್ರೀನಿವಾಸ ಜೋಯಿಸರು ಮತ್ತು
ಸು ರುದ್ರಮೂರ್ತಿಯವರು ಕುಮಾರರಾಮ ಎಂಬ ಕಾದಂಬರಿಯನ್ನು ಬರೆದಿರುವರು.
ಚಾಟುವಿಠಲನಾಥ (ಕಾಲ ಸು. ೧೫೩೦)
ಇವನ ಮೂಲನಾಮ ಸದಾನಂದ ಮುನಿ.
ಕಾವ್ಯನಾಮ ನಿತ್ಯಾತ್ಮ ಶುಕಯೋಗಿ.
ಅಚ್ಯುತಾರಣ್ಯ ಯತಿಗಳು ಇವನ
ಗುರುಗಳಾಗಿದ್ದರು.
ಸಂಸ್ಕೃತದಲ್ಲಿ ಶುಕಮುನಿ
ಬರೆದ ಸಮಸ್ತ ಭಾಗವತವನ್ನು ಭಾಮಿನಿ ಷಟ್ಪದಿಯಲ್ಲಿ ಕನ್ನಡಕ್ಕೆ ಅನುವಾದಿಸಿ ಬರೆದನು.
ಲಕ್ಷ್ಮೀಶ (ಕಾಲ ಸು.೧೫೫೦)
ಚಿಕ್ಕಮಗಳೂರು ಜಿಲ್ಲೆಯ
ಕಡೂರು ತಾಲುಕಿನ ದೇವನೂರು ಇವನ ಜನ್ಮಸ್ಥಳ. ಇಷ್ಟದೈವ ಲಕ್ಷ್ಮೀರಮಣಸ್ವಾಮಿ. ಇವನ ತಂದೆ ಅಣ್ಣಮಾಂಕ
ಕರ್ನಾಟಕ ಕವಿಚೈತ್ರವನ ಚೂತ
ಎಂಬುದು ಇವನಿಗಿದ್ದ ಬಿರುದು. ಕುವೆಂಪು ಇವನನ್ನು ಉಪಮಾಲೋಲ ಎಂದು ಕರೆದಿದ್ದಾರೆ.
ಕುರುಕ್ಷೇತ್ರ ಯುದ್ಧದ
ತರುವಾಯದ ಕತೆಯಾದ ಜೈಮಿನಿ ಭಾರತವನ್ನು ವಾರ್ಧಕ ಷಟ್ಪದಿಯಲ್ಲಿ ಬರೆದನು. ಇದನ್ನು ಉತ್ತರೋತ್ತರ
ಭಾರತವೆಂತಲೂ ಕರೆಯುವರು. ತನ್ನ ಕೃತಿಯನ್ನು ಕುರಿತು ಪುಣ್ಯಮಿದು ಕೃಷ್ಣಚರಿತಾಮೃತಂ ಎಮದು
ಹೇಳಿಕೊಂಡಿದ್ದಾನೆ.
ಜೈಮಿನಿ ಭಾರತವನ್ನಾಧರಿಸಿ
ಸೋಲೂರು ಹುಚ್ಚಕವಿ ಎಂಬಾತ ಯಾಗಚರಿತೆ ಎಂಬ
ಯಕ್ಷಗಾನ ಪ್ರಸಂಗವನ್ನು ಬರೆದಿದ್ದಾನೆ
ಸೋದರರನ್ನು ಕೊಂದ
ಪಾಪದಲ್ಲಿದ್ದ ಯುಧಿಷ್ಠಿರನ ಭಾವವನ್ನು "ಅರಸನು ಅನುತಾಪದಿಂ ತಲೆವಾಗಿ ಮಾತಾಡದಿರುತಿರ್ದನು
ಅನಿಲಸಂಚಾರಮೊಂದು ಇನಿತಿಲ್ಲದೆ ಉರಿವ ಕಡುವೇಸಗೆಯ ಬಿಸಿಲಿನಿಂದ ಬಸವಳಿವ ಕೋಮಲರಸಾಲದಂತೆ"
"ಜೀಯ ಸಂತಾಪದಿಂ ಬೆಂಡಾದುದು ಎನ್ನೊಡಲ್ ಸೈರಿಸಲರಿಯೇನು" ಎಂದು ಮನೋಹರವಾಗಿ
ಕಟ್ಟಿಕೊಟ್ಟಿದ್ದಾನೆ.
"ಕೊರಳನ್ನು
ಕೊಯ್ಯಲೊಲ್ಲದೆ ತನ್ನನ್ನು ಬಿಡಲು ತಾ ಮಾಡಿದ ಅಪರಾಧವೇನು?" ಎಂಬ ರಾಮನ ಸೀತಾಪರೀತ್ಯಾಗದ
ನಂತರದ ಸೀತೆಯ ಮಾತುಗಳು ಮನ ಮಿಡಿಯುವಂತಿವೆ.
ಸಾಳ್ವ ಕವಿ (ಕಾಲ ಸು. ೧೫೬೦)
ರಸರತ್ನಾಕರ, ಶಾರದಾ ವಿಲಾಸ,
ಸಾಳ್ವ ಭಾರತ (ನೇಮಿಶ್ವರ ಚರಿತೆ) ಮತ್ತು ವೈದ್ಯಸಾಂಗತ್ಯ ಎಂಬುವು ಇವನ ಕೃತಿಗಳು.
ಶಾರದಾ ವಿಲಾಸವು ಧ್ವನಿಯನ್ನು
ಪ್ರತಿಪಾದಿಸಿದ ಮೊದಲ ಗ್ರಂಥವೆಂಬ ಖ್ಯಾತಿ ಪಡೆದಿದೆ.
ಭಾಮಿನಿ ಷಟ್ಪದಿಯಲ್ಲಿರುವ ಸಾಳ್ವಭಾರತ
ಕೃತಿಯು ಸಮಗ್ರ ಜೈನಭಾರತಕತೆಯನ್ನು ನಿರೂಪಿಸುತ್ತದೆ.
ರಸರತ್ನಾಕರ ಅಲಂಕಾರ ಗ್ರಂಥವಾಗಿದೆ.
ವೈದ್ಯ ಸಾಂಗತ್ಯ ಹೆಸರೇ ಹೇಳುವಂತೆ
ವೈದ್ಯಶಾಸ್ತ್ರ ಕುರಿತಾದ ಗ್ರಂಥ.
ಮುಪ್ಪಿನ ಷಡಕ್ಷರಿ (ಕಾಲ ಸು. ೧೬೫೫)
ಕನ್ನಡದಲ್ಲಿ ರಾಜಶೇಖರ
ವಿಳಾಸ, ಶಬರ ಶಂಕರ ವಿಳಾಸ, ಬಸವರಾಜ ವಿಜಯ ಎಂಬ ಚಂಪೂ
ಕೃತಿಗಳನ್ನು ಬರೆದಿದ್ದಾನಲ್ಲದೇ ಸಂಸ್ಕೃತದಲ್ಲಿ ಕವಿಕರ್ಣ ರಸಾಯನ ಎಂಬ ಕೃತಿಯನ್ನು
ಬರೆದಿದ್ದಾನೆ.
ದನಗೂರು ಮಠದ
ಸನ್ಯಾಸಿಯಾಗಿದ್ದ ಈತನ ಗುರು ಚಿಕ್ಕವೀರದೇಶಿಕ
ರಾಜಶೇಖರ ವಿಳಾಸ ಕೃತಿಗೆ ಆಕರ
ಗ್ರಂಥ ಗುಬ್ಬಿಯ ಮಲ್ಲಣಾರ್ಯನ ಭಾವಚಿಂತಾರತ್ನ. ಈ ಕಾವ್ಯದ ಪ್ರಮುಖ ರಸಘಟ್ಟ ತಿರುಕೊಳವಿನಾಚಿಯ
ಪ್ರಸಂಗ.
ಇವನ ರಾಜಶೇಖರ ವಿಳಾಸ
ಕೃತಿಯಲ್ಲಿ "ತನುಭವನೆಲ್ಲಿದನ್ ಇನಿವಾತಿನ ನೀರನೆಲ್ಲಿದಂ ಮೆಲ್ನಗೆ ಇಂಪಿನ ಸೊಬಗನೆಲ್ಲಿದಂ
ಚೆಲ್ವಿನ ಕಣಿಯೆಲ್ಲಿದನೋ ಮನ್ಮನೋಂಬುಜ ಹಂಸ" ಎಂದು ಸತ್ತ ಮಗನನ್ನು ಕಂಡು ಹಲುಬುವ ತಿರುಕೊಳವಿನಾಚಿಯ
ಪ್ರಲಾಪದ ಸಂದರ್ಭ ಉತ್ಕಟ ರಮ್ಯವೆನಿಸಿದೆ.
ಬಸವರಾಜ ವಿಜಯವು ಬಸವಣ್ಣನ
ಜೀವನ ಚರಿತ್ರೆಯಾಗಿದೆ. ಇದಕ್ಕೆ ವೃಷಭೇಂದ್ರ ವಿಜಯ ಎಂಬ ಮತ್ತೊಂದು ಹೆಸರಿದೆ.
೫ ಆಶ್ವಾಸಗಳುಳ್ಳ ಶಬರ ಶಂಕರ
ವಿಳಾಸವು ಕಿರಾತ ಮತ್ತು ಅರ್ಜುನರ ನಡುವಿನ ಯುದ್ಧ ಪ್ರಸಂಗ ಆಧಾರಿತ ಕಿರಾತ ಲೀಲೆಯ ಕತೆ.
ಕವಿಕರ್ಣ ರಸಾಯನ ಕೃತಿಯಲ್ಲಿ
ತಮಿಳುನಾಡಿನ ಸೌಂದರಚೋಳನ ಕತೆಯಿದೆ.
ಸರ್ವಜ್ಞ (೧೬- ನೇ ಶ)
ಈತ ಜನಿಸಿದ್ದು ಧಾರವಾಡ
ಜಿಲ್ಲೆಯ ಅಂಬಲೂರಿನಲ್ಲಿ. ಸರ್ವಜ್ಞನ ಸಾಹಿತ್ಯ ರಚನೆಯನ್ನು ವಚನಗಳೆಂದು ಕರೆದರೂ ವಾಸ್ತವದಲ್ಲಿ
ಅವುಗಳು ತ್ರಿಪದಿಗಳು.
ಇವನ ಅಂಕಿತನಾಮ ಪರಮಾರ್ಥ
ಚಿಕ್ಕುಪಾಧ್ಯಾಯ (ಕಾಲ ಸು. ೧೬೪೦)
ಮೂಲ ಹೆಸರು ಲಕ್ಷ್ಮೀಪತಿ.
ಚಿಕ್ಕದೇವರಾಯನ ಆಸ್ಥಾನದಲ್ಲಿ ಮಂತ್ರಿಯೂ ಕವಿಯೂ ಆಗಿದ್ದವನು.
ಕಮಲಾಚಲ ಮಹಾತ್ಮ್ಯ, ಹಸ್ತಗಿರಿಯ
ಮಹಾತ್ಮ್ಯ, ರುಕ್ಮಾಂಗದ ಚರಿತೆ, ವಿಷ್ಣುಪುರಾಣ, ದಿವ್ಯಸೂರಿ ಚರಿತೆ, ಸಾತ್ವಿಕಬ್ರಹ್ಮ
ವಿದ್ಯಾವಿಲಾಸ, ಅರ್ಥಪಂಚಕ ಎಂಬ ಚಂಪೂ ಗ್ರಂಥಗಳನ್ನು ಬರೆದಿದ್ದಾನೆ.
ಇವನ ಗದ್ಯ ಗ್ರಂಥಗಳು
ವೆಂಕಟಗಿರಿ ಮಹಾತ್ಮ್ಯ, ಶ್ರೀರಂಗ ಮಹಾತ್ಮ್ಯ, ಯದುಗಿರಿ ಮಹಾತ್ಮ್ಯ
ಪಶ್ಚಿಮ ರಂಗ ಮಹಾತ್ಮ್ಯ,
ಶೃಂಗಾರ ಶತಕ, ರಂಗಧಾಮ ಸ್ತುತಿ, ರಂಗಧಾಮನೀತಿ ಶತಕದ ಸಾಂಗತ್ಯ, ರಂಗಧಾಮ ಪುರುಷವಿರಹ ಸಾಂಗತ್ಯ,
ರಂಗನಾಯಕ ರಂಗನಾಯಕಿ ಸ್ತುತಿ ಸಾಂಗತ್ಯ, ಚಿತ್ರಶತಕದ ಸಾಂಗತ್ಯ, ಅಕ್ಷರಮಾಲಿಕಾ ಸಾಂಗತ್ಯ ಎಂಬ
ಸಾಂಗತ್ಯ ಕೃತಿಗಳನ್ನು ಸಹ ಬರೆದಿದ್ದಾನೆ.
ತಿರುಮಲಾರ್ಯ (ಕಾಲ ಸು. ೧೬೪೫ - ೧೭೦೬)
ಈತನು ಸಹ ಚಿಕ್ಕದೇವರಾಯ
ಒಡೆಯರ ಆಸ್ಥಾನ ಕವಿಯಾಗಿದ್ದನು.
ದೇವಚಂದ್ರ ಕವಿಯು ತನ್ನ
ರಾಜಾವಳಿ ಕತೆಯಲ್ಲಿ ತಿರುಮಲಾರ್ಯನನ್ನು ವಿದ್ಯಾವಿಶಾರದ ಎಂದಿದ್ದಾನೆ.
ಇವನ ಪ್ರಮುಖ ಕೃತಿಗಳು
ಅಪ್ರತಿಮ ವೀರ ಚರಿತೆ, ಚಿಕ್ಕದೇವರಾಜ ವಂಶಾವಳಿ, ಚಿಕ್ಕದೇವರಾಜ ವಿಜಯ, ಚಿಕ್ಕದೇವರಾಜ ಶತಕ.
ಚಿಕ್ಕದೇವರಾಜ ವಂಶಾವಳಿ
ಗದ್ಯಕೃತಿಯಾಗಿದ್ದು ರಾಜ ಒಡೆಯರಿಂದ ಚಿಕ್ಕದೇವರಾಜ ಒಡೆಯರವರೆಗಿನ ಮೈಸೂರು ಇತಿಹಾಸ ಇದರಲ್ಲಿ
ರಚಿತವಾಗಿದೆ.
ಅಪ್ರತಿಮ ವೀರ ಚರಿತೆ ಒಂದು
ಅಲಂಕಾರ ಗ್ರಂಥ. ಈ ಅಲಂಕಾರ ಗ್ರಂಥಕ್ಕೆ ಸಂಸ್ಕೃತದ ಜಯದೇವನ ಚಂದ್ರಾಲೋಕ, ಮಮ್ಮಟನ ಕಾವ್ಯಪ್ರಕಾಶ,
ಅಪ್ಪಯ್ಯ ದೀಕ್ಷಿತನ ಕುವಲಯಾನಂದ ಪ್ರಮುಖ ಆಕರ ಗ್ರಂಥಗಳಾಗಿವೆ.
ಚಿಕ್ಕದೇವರಾಜ ವಿಜಯವು ಚಂಪೂ
ಕಾವ್ಯವಾಗಿದ್ದು, "ಸಕ್ಕದಗನ್ನಡ ಎರಡರೊಳೆಕ್ಕ ಸರಂಗೊಳ್ವು ದೋಜೆಗಬ್ಬಮ್",
"ಎಡೆಯೆಡೆಯೊಳ್ ತಕ್ಕ ತಕ್ಕ ಬಣ್ಣಿಗೆಬವಣಿಂ" ಎಂದು ತನ್ನ ಕೃತಿಯ ಬಗ್ಗೆ ಹೇಳಿಕೊಂಡಿದ್ದಾನೆ.
ಸಿಂಗಾರಾರ್ಯ (ಕಾಲ ಸು. ೧೭ನೆ ಶ)
ಕನ್ನಡದ ಮೊದಲ ನಾಟಕ ಮಿತ್ರಾವಿಂದ
ಗೋವಿಂದ ಕೃತಿಯನ್ನು ರಚಿಸಿದನು. ಈ ಕೃತಿಗೆ ಆಕರ ಗ್ರಂಥ ಶ್ರೀ ಹರ್ಷನ ಸಂಸ್ಕೃತ ಭಾಷೆಯ ರತ್ನಾವಳಿ ನಾಟಕ. ನಾಟಕದ ಭಾಷೆಯು ಹಳಗನ್ನಡದಲ್ಲಿದೆ.
ರತ್ನಾವಳಿ ನಾಟಕದಲ್ಲಿನ
ವತ್ಸರಾಜ ಪಾತ್ರವು ಮಿತ್ರಾವಿಂದ ಗೋವಿಂದದಲ್ಲಿ ಕೃಷ್ಣನ ಪಾತ್ರವಾಗಿದೆ. ವಾಸವದತ್ತೆ
ರುಕ್ಮಿಣಿಯಾಗಿ, ಸಾಗರಿಕೆಯು ಸರಸ್ವತಿಯಾಗಿ ಮತ್ತು ವಿದೂಷಕನು ಕುಚೇಲರಾಗಿ ಈ ನಾಟಕದಲ್ಲಿ
ಕಾಣಿಸಿಕೊಂಡಿದ್ದಾರೆ.
ಸಂಚಿ ಹೊನ್ನಮ್ಮ (ಕಾಲ ಸು. ೧೬೮೦)
ಚಿಕ್ಕದೇವರಾಜ ಒಡೆಯರ
ಆಸ್ಥಾನದಲ್ಲಿ ಸಂಚಿಯ ಕಾಯಕದಲ್ಲಿದ್ದ ಈಕೆ ಅಳ ಸಿಂಗಾರಾರ್ಯರ ಶಿಷ್ಯೆ ಆಗಿದ್ದಳು. ಮೈಸೂರು
ಜಿಲ್ಲೆಯ ಯಳಂದೂರು ಈಕೆಯ ಜನ್ಮಸ್ಥಳ ಹದಿಬದೆಯ ಧರ್ಮ ಎಂಬ ಸಾಂಗತ್ಯ ಕಾವ್ಯವನ್ನು ಬರೆದಿದ್ದಾಳೆ.
"ಪದಿನೆಂಟು
ಬಣ್ಣನೆಯೊಂದು ಬವಣೆಗೊಂಡು ಪದಗೆಟ್ಟು ಬಯಲು ಬಣ್ಣಿಸದೆ", "ಬಲ್ಲರಿಂದಾನು ಕೇಳಿದುದಕೆ
ಪೆರ್ಚುಕುಂದಿಲ್ಲದಂತೆ ಎಚ್ಛರಗೂಡಿ ಎಲ್ಲರುಂ ಅರಿವಂತೆ ಎಳವಾತುಗಳಿಂದ ಸೊಲ್ಲಿಸುವೆನು
ಸೊಗಸುವೊಲು" ಎಂದು ತನ್ನ ಕೃತಿಯ ಸಾರ ಮತ್ತು ಉದ್ದೇಶವನ್ನು ಹೇಳಿದ್ದಾಳೆ.
ಸಿಂಗಾರಾರ್ಯ ಈಕೆಯನ್ನು
"ಈ ಹೊನ್ನಿ ಸರಸ ಸಾಹಿತ್ಯದ ವರದೇವತೆ, ಕಾವ್ಯಾಲಂಕಾರ ಬಲ್ಲವಳು" ಎಂದಿರುವನು.
ಚಿದಾನಂದವದೂತ (ಕಾಲ ಸು. ೧೭೦೦)
ಈತನು ಪಂಚಿಕರಣ ಎಂಬ ವಚನ
ಗ್ರಂಥವನ್ನು, ತತ್ವಚಿಂತಾಮಣಿ ಎಂಬ ಗದ್ಯಗ್ರಂಥವನ್ನು, ನವಚಕ್ರರೇಖಾಲಕ್ಷಣ ಎಂಬ
ಟೀಕಾಗ್ರಂಥವನ್ನು, ಚಿದಾನಂದರ ವಚನ ಎಂಬ ಕವನ ಸಂಕಲನವನ್ನು, ಭಾಮಿನಿ ಷಟ್ಪದಿಯಲ್ಲಿ ಜ್ಞಾನಸಿಂಧು,
ದೇವಿಮಹಾತ್ಮ್ಯ ಎಂಬ ಕೃತಿಗಳನ್ನು ಬರೆದಿದ್ದಾನೆ.
ಹೆಳವನಕಟ್ಟೆ ಗಿರಿಯಮ್ಮ (ಕಾಲ ೧೮ ನೆ ಶ)
ಚಂದ್ರಹಾಸನ ಕತೆ,
ಸೀತಾಕಲ್ಯಾಣ, ಬ್ರಹ್ಮ ಕೊರವಂಜಿ, ಉದ್ದಾಲಕನ ಕತೆ, ಭಕ್ತಿಯ ಹಾಡುಗಳು, ಈಕೆಯ ಪ್ರಮುಖ ರಚನೆಗಳು
ಚಂದ್ರಹಾಸನ ಕತೆ ಎಂಬುದು
ಸಾಂಗತ್ಯ ಕೃತಿಯಾಗಿದ್ದು, ಇದನ್ನು ಲಕ್ಷ್ಮೀಶನ ಜೈಮಿನಿ ಭಾರತದಿಂದ ಆಯ್ದುಕೊಂಡಿರುವುದಾಗಿ
ಕವಯಿತ್ರಿ ಹೇಳಿಕೊಂಡಿದ್ದಾಳೆ.
ಬಸವಪ್ಪಶಾಸ್ತ್ರಿ (ಕಾಲ ಸು. ೧೯ನೇ ಶ)
ಅಭಿನವ ಕಾಳಿದಾಸ ಎಂಬುದು
ಈತನಿಗಿದ್ದ ಬಿರುದು.
ಚಂಡಕೌಶಿಕ, ಶಾಕುಂತಲ,
ಉತ್ತರರಾಮಚರಿತ ಎಂಬ ನಾಟಕಗಳನ್ನು ಸಂಸ್ಕೃತದಿಂದಲೂ, ಶೂರಸೇನ ಚರಿತ್ರೆ ಎಂಬ ನಾಟಕವನ್ನು
ಶೇಕ್ಸ್ಪಿಯರ್ ನ ಒಥೆಲೋ ನಾಟಕದಿಂದಲೂ ಅನುವಾದಿಸಿದ್ದಾನೆ.
ಅಲ್ಲದೇ ದಮಯಂತಿ ಸ್ವಯಂವರ
ಎಂಬ ಚಂಪೂಕೃತಿಯನ್ನು, ಸಾವಿತ್ರಿ ಚರಿತ್ರೆ ಎಂಬ ಷಟ್ಪದಿ ಕಾವ್ಯವನ್ನು, ಭರ್ತೃಹರಿ ಶತಕ ಎಂಬ ಶತಕ
ಕೃತಿಯನ್ನು, ನೀತಿಸಾರ ಸಂಗ್ರಹ ಎಂಬ ಕಂದ ವೃತ್ತಗಳಿಂದ ಕೂಡಿದ ಪದ್ಯಗಳನ್ನು ಬರೆದಿದ್ದಾನೆ.
ಕೆಂಪು ನಾರಾಯಣ (ಕಾಲ ಸು. ೧೯ನೇ ಶ)
ಇವನ ಕೃತಿ ಮುದ್ರಾಮಂಜೂಷ. ಈ
ಕೃತಿಯ ಆಕರ ವಿಶಾಖದತ್ತನ ಮುದ್ರಾರಾಕ್ಷಸ.
ಮುದ್ರಾಮಂಜೂಷವು ಗದ್ಯ ಕೃತಿಯಾಗಿದ್ದು,“ಐತಿಹಾಸಿಕ ಲಕ್ಷಣ ಒಳಗೊಂಡ ಕನ್ನಡದ ಮೊದಲ ಕಾದಂಬರಿಯಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ