ಮಾತ್ರಾಗಣದ ಛಂದೋರೂಪಗಳು
ಮಾತ್ರಾಗಣದ ಛಂದೋರೂಪಗಳು
ಕಂದ ಪದ್ಯ
ಇದು ಚತುರ್ಮಾತ್ರಾ ಗಣ ಪ್ರಕಾರವಾಗಿದೆ. ಇದರ ಮೊದಲ ಮತ್ತು ಮೂರನೇ ಸಾಲಿನಲ್ಲಿ ಸಾಲಿನಲ್ಲಿ ಮೂರು ಗಣಗಳೂ ಎರಡನೇ ಮತ್ತು ನಾಲ್ಕನೇ ಸಾಲಿನಲ್ಲಿ ಐದು ಗಣಗಳೂ ಇರುತ್ತವೆ.
ಸಂಸ್ಕೃತದಲ್ಲಿ ಕಂಡುಬರುವ ಆರ್ಯ ಗೀತಿ, ಉಪಗೀತಿ, ಉದ್ಗೀತಿಗಳು ಮತ್ತು ಪ್ರಾಕೃತದಲ್ಲಿನ ಸ್ಕಂದಕ ಎಂಬುವು ಕಂದದ ಇತರ ಪ್ರಕಾರಗಳು
8ನೇ ಶತಮಾನದ ನರಸಿಂಹರಾಜಪುರದ ಸಿಂಗಣಗದ್ದೆ ಶಾಸನದಲ್ಲಿ ಮೊದಲ ಬಾರಿಗೆ ಕಂದ ಪ್ರಯೋಗವಾಗಿರುವುದು ಕಂಡುಬಂದಿದೆ.
ಕನ್ನಡ ಸಾಹಿತ್ಯದಲ್ಲಿ ಮೊದಲ ಬಾರಿಗೆ 1ನೇ ನಾಗವರ್ಮನ ಛಂದೋಂಬುದಿಯಲ್ಲಿ ಕಂದದ ಲಕ್ಷಣವನ್ನು ಕಾಣುತ್ತೇವೆ.
ಕಂದದ ಕುರಿತು ನಾಗವರ್ಮನ ಸೂತ್ರ
ಪುರಬಾಣವಹ್ನಿ ಶರಗಣ
ಮಿರೆ ನಾಲ್ಕುಂ ಪದದೊಳೋಜೆಯುಗ್ಮಗಳೋಳ್ ಪ
ನ್ನೆರಡಿರ್ಪತ್ತೋಳಿಯೆ ಪ
ನ್ನೆರಡಡಿರ್ಪತ್ತಾಗೆ ಮಾತ್ರೆಗಳ್ ಮೃಗನಯನೆ
ಕಂದದ ಚಂದವನ್ನು ಮೆಚ್ಚಿ ಹರಿಹರ ಅದನ್ನು ಕಂದಂಗಳ್ ಅಮೃತಲತಿಕಾ ಕಂದಂಗಳ್ ಎಂದಿದ್ದಾನೆ. ಸುರಂಗ ಕವಿಯು ತನ್ನ ತ್ರಿಷಷ್ಠಿ ಪುರಾತನರ ಚರಿತೆಯಲ್ಲಿ ಕಂದಂಗಳ್ ವಾಗ್ವನಿತೆಯ ಕಂದಂಗಳ್ ಎಂದು ಹೊಗಳಿದ್ದಾನೆ. ತಿರುಮಲಾರ್ಯನು ತನ್ನ ಚಿಕ್ಕದೇವರಾಜ ಕೃತಿಯಲ್ಲಿ ಕಂದಂ ಕವಿಕೋಕಿಲ ಮಾಕಂದಂ ಎಂತಲೂ ಕಂದಂಗಳ್ ಮರುಕದ ಕಿರು ಗಂಧಂಗಳ್ ಎಂತಲೂ ಕೊಂಡಾಡಿದ್ದಾನೆ.
ಕಂದದ ನಿಯಮಗಳು
ಇದರಲ್ಲಿ ವಿಷಮ ಸ್ಥಾನಗಳಲ್ಲಿ ಅಂದರೆ 1,3,5,7 ಹಾಗೇ 9,11,13,15 ನೇ ಗಣಗಳಲ್ಲಿ ಜಗಣ ಅಂದರೆ ಮಧ್ಯಗುರು ಇರುವ U_U ವಿನ್ಯಾಸ ಬರಬಾರದು.
ಎರಡನೇ ಹಾಗೂ ನಾಲ್ಕನೇ ಸಾಲಿನ ಕೊನೆಯ ಗಣದ ಕೊನೆಯ ಅಕ್ಷರ ಗುರುವಾಗಿರಬೇಕು. 6ನೇ ಹಾಗೂ 14ನೇ ಗಣಗಳು ಮಾತ್ರ ಮಧ್ಯ ಗುರು ಇರುವ ಜಗಣ ವಿನ್ಯಾಸ (U_U) ಅಥವಾ ಕೇವಲ ಲಘುಗಳಿರುವ ನಲಗಣ (UUUU) ಇರಬೇಕು. 7ನೇ ಗಣ ಸರ್ವಲಘುಗಳಿದ್ದಲ್ಲಿ ಮೊದಲ ಅಕ್ಷರದ ನಂತರ ಯತಿ ಬರಲೇಬೇಕು.
ಉಳಿದ ಗಣಗಳಲ್ಲಿ ಯಾವ ರೀತಿಯ ವಿನ್ಯಾಸ ಬೇಕಾದರೂ ಬರಬಹುದು.
ಕಂದ ಪದ್ಯ ಪ್ರಸ್ತಾರ
UUUU | _ _ | UUUU|
ಒಡೆಯಲ| ಜಾಂಡಂ| ಕುಲಗಿರಿ |
UU _ | UU _| U _ U| UU _ | UU _|
ಕೆಡೆಯಲ್| ಪಿಳಿಯ| ಲ್ಕೆ ಧಾತ್ರಿ|ದಿವಿಜರ್| ನಡುಗ|
U UUU| U_U |_ UU|
ಲ್ಕೊಡರಿಸು|ವಿನಂಜ|ಟಾಸುರ|
U _ U| UU_|U _ U| _ _ |_ _|
ಹಿಡಿಂಬ | ಬಕವೈ|ರಿ ಸಿಂಹ|ನಾದಂ|ಗೆಯ್ದಂ|
ಷಟ್ಪದಿ
ಷಟ್ಪದಿಯು ಮೂಲದಲ್ಲಿ ಅಂಶಗಣ ಆಧಾರಿತ ಛಂದೋರೂಪವಾಗಿತ್ತು. ಕಾಲಾನುಕ್ರಮದಲ್ಲಿ ಅದು ಮಾತ್ರಾಗಣ ಛಂದೋರೂಪವಾಗಿ ಪರಿವರ್ತಿತಗೊಂಡಿದೆ.
ಷಟ್ಪದಿಯ ಮೊದಲ ಉಲ್ಲೇಖ ಕಂಡುಬರುವುದು ನಾಗವರ್ಮನ ಛಂಧೋಂಬುಧಿ ಕಾವ್ಯದಲ್ಲಿ. ಇಲ್ಲಿ ಷಟ್ಪದಿಯು ಅಂಶಗಣಾನ್ವಿತವಾಗಿ ಕಂಡುಬಂದಿದೆ.
ಜಯಕೀರ್ತಿಯ ಛಂದೋನುಶಾಸನದಲ್ಲಿ ಷಟ್ಪದಿಯನ್ನು ಷಟ್ಪದಿಕಾ ಎಂದು ಕರೆಯಲಾಗಿದೆ.
ರಾಘವಾಂಕನ ಕಾಲದಲ್ಲಿ ಅಂಶ ಷಟ್ಪದಿ ಪೂರ್ಣವಾಗಿ ಮಾತ್ರಾಷಟ್ಪದಿಯಾಗಿ ಬದಲಾಯಿತು. ಬಸವ ಕವಿಯ ಬಸವಪುರಾಣ ಕೃತಿಯ ನಂತರ ಮಾತ್ರಾ ಷಟ್ಪದಿಗಳ ಪರಂಪರೆ ಪ್ರಾರಂಭವಾಯಿತು.
ಷಟ್ಪದಿ ವಿಧಗಳು .
ಶರ ಷಟ್ಪದಿ
ಷಟ್ಪದಿಗಳಲ್ಲಿ ಅತ್ಯಂತ ಚಿಕ್ಕದು.
ಶರ ಷಟ್ಪದಿಯಲ್ಲಿ ಆರು ಪಾದಗಳಿರುತ್ತವೆ. 1,2,4,5ನೆಯ ಸಾಲುಗಳು ಸಮನಾಗಿದ್ದು, 4 ಮಾತ್ರೆಯ ಎರಡು ಗಣಗಳಿರುತ್ತವೆ. 3 ಮತ್ತು 6ನೆಯ ಪಾದಗಳಲ್ಲಿ 4 ಮಾತ್ರೆಯ 3 ಗಣಗಳಿದ್ದು, ಕೊನೆಯಲ್ಲಿ ಒಂದು ಗುರು ಬರುತ್ತದೆ. (ಲಘು ಬಂದರೂ ಗುರು ಎಂದುಕೊಳ್ಳಬೇಕು). (U_U) ಜಗಣ ಶರ ಷಟ್ಪದಿಯ ಯಾವ ಗಣದಲ್ಲಿಯೂ ಬರಕೂಡದು.
_UU| UUUU
ಈಶನ |ಕರುಣೆಯ
_ UU| UUUU
ನಾಶಿಸು | ವಿನಯದಿ
_ UU| _ U U | _ UU|_
ದಾಸನ | ಹಾಗೆಯೆ | ನೀ ಮನ|ವೇ
_ UU| UUUU
ಕ್ಲೇಶದ | ವಿಧವಿಧ
_ UU| UUU U
ಪಾಶದ | ಹರಿದು ವಿ
_ UU| _UU |UU UU| _
ಲಾಸದಿ | ಸತ್ಯವ |ತಿಳಿ ಮನ|ವೇ
ಕುಸುಮ ಷಟ್ಪದಿ
ಕುಸುಮ ಷಟ್ಪದಿಯಲ್ಲಿ ಆರು ಪಾದಗಳಿರುತ್ತವೆ. 1,2,4,5ನೆಯ ಸಾಲುಗಳು ಸಮನಾಗಿದ್ದು, 5 ಮಾತ್ರೆಯ ಎರಡು ಗಣಗಳಿರುತ್ತವೆ. 3 ಮತ್ತು 6ನೆಯ ಪಾದಗಳಲ್ಲಿ 5 ಮಾತ್ರೆಯ 3 ಗಣಗಳಿದ್ದು, ಕೊನೆಯಲ್ಲಿ ಒಂದು ಗುರು ಬರುತ್ತದೆ (ಲಘು ಬಂದರೂ ಗುರು ಎಂದುಕೊಳ್ಳಬೇಕು). ಗುರುಬಸವನ (1430) ಮನೋವಿಜಯ ಕಾವ್ಯ ಕುಸುಮ ಷಟ್ಪದಿಯಲ್ಲಿದೆ
_ U UU| UUUUU
ನಾಡುಮನ| ಸಿಜನೊಲವಿ
_ U UU| _ U _
ನಾಡು ವೆಡೆ| ಸಂತತಂ
_ U UU|UUUUU|UU _U| _
ಬೀಡು ರತಿ| ಪತಿಗೆ ಸತ| ತ ನಿಧಾನ|ವು
_ UUU|UUUUU
ನೋಡಿದ ನಿ|ಮಿಷ ಪತಿಗೆ
_ U U U| UUUUU
ಮಾಡುವುದು |ವಿನಯವನು|
_ _ U|U UU _|U UU _ |_
ನಾಡಾದಿ|ಯವರ್ಗೆ ಬ|ಣ್ಣಿಸಲು ಮೊ|ಗ್ಗೇ
ಭೋಗ ಷಟ್ಪದಿ
ಭೋಗ ಷಟ್ಪದಿಯಲ್ಲಿ ಆರು ಪಾದಗಳಿರುತ್ತವೆ. 1,2,4,5ನೆಯ ಸಾಲುಗಳು ಸಮನಾಗಿದ್ದು, 3 ಮಾತ್ರೆಯ 4 ಗಣಗಳಿರುತ್ತವೆ. 3 ಮತ್ತು 6ನೆಯ ಪಾದಗಳಲ್ಲಿ 3 ಮಾತ್ರೆಯ 6 ಗಣಗಳಿದ್ದು, ಕೊನೆಯಲ್ಲಿ ಒಂದು ಗುರು ಬರುತ್ತದೆ (ಲಘು ಬಂದರೂ ಗುರು ಎಂದುಕೊಳ್ಳಬೇಕು). ಗುರುಬಸವನ ವೃಷಭಗೀತೆ ಕಾವ್ಯ ಭೋಗ ಷಟ್ಪದಿಯಲ್ಲಿದೆ
UUU|_ U |_ U| _ U
ತಿರುಕ|ನೋರ್ವ|ನೂರ| ಮುಂದೆ
U UU| _ U| _ U| _ U
ಮುರುಕು| ಧರ್ಮ|ಶಾಲೆ|ಯಲ್ಲಿ
UUU| _U| _ U|UUU|_ U|_ U|_
ವೊರಗಿ|ರುತ್ತ|ಲೊಂದು| ಕನಸ|ಕಂಡ|ನೆಂತ| ನೆ
UUU| _U|_U|UUU
ಪುರದ |ರಾಜ|ಸತ್ತ|ನವಗೆ|
UUU| _ U|_U| UUU
ವರ ಕು|ಮಾರ|ರಿಲ್ಲ|ದಿರಲು
UUU| _U| UUU| _ U|_ U| UUU |_
ಕರಿಯ| ಕೈಗೆ| ಕುಸುಮ| ಮಾಲೆ|ಯಿತ್ತು| ಪುರದೊ|ಳು
ಭಾಮಿನಿ ಷಟ್ಪದಿ
ಭಾಮಿನೀ ಷಟ್ಪದಿಯಲ್ಲಿ ಆರು ಸಾಲುಗಳಿರುತ್ತವೆ. ಮೂರನೆಯ, ಆರನೆಯ ಸಾಲುಗಳಲ್ಲಿ 7 ಮಾತ್ರೆಗಳ ಮೂರು ಗಣಗಳೂ ಹಾಗು ಒಂದು ಗುರು ಇರುತ್ತವೆ. ಮಿಕ್ಕ ಸಾಲುಗಳಲ್ಲಿ 7 ಮಾತ್ರೆಗಳ ಎರಡು ಗಣಗಳಿರುತ್ತವೆ.
ಮತ್ತೊಂದು ಪ್ರಮುಖ ನಿಯಮವೆಂದರೆ, 7 ಮಾತ್ರೆಗಳ ಗಣಗಳು ಕಡ್ಡಾಯವಾಗಿ 3+4 ಮಾದರಿಯಲ್ಲಿರಬೇಕು. ಅಂದರೆ 3 ಮಾತ್ರೆಯ ಗಣದ ನಂತರ 4 ಮಾತ್ರೆಯ ಗಣವು ಬಂದು, ಒಟ್ಟು 7 ಮಾತ್ರೆಗಳ ಗಣವಾಗಬೇಕು. ಪದ್ಯವು ಆದಿಪ್ರಾಸದಿಂದ ಕೂಡಿರುತ್ತದೆ.
ಪ್ರಮುಖ ಕೃತಿಗಳು : ಪ್ರಭುಲಿಂಗಲೀಲೆ (ಚಾಮರಸ), ರಾಮಧಾನ್ಯ ಚರಿತೆ (ಕನಕದಾಸ), ಕರ್ನಾಟಕ ಭಾರತ ಕಥಾಮಂಜರಿ/ಗದುಗಿನ ಭಾರತ (ಕುಮಾರವ್ಯಾಸ)
_ U |UUUU | UUU|UUUU
ವೇದ| ಪುರುಷನ | ಸುತನ| ಸುತನ ಸ
_ U|UU_|U UU| UUUU
ಹೋದ|ರನ ಹೆ|ಮ್ಮಗನ| ಮಗನ ತ
_ U|UU _ |UUU| _ UU|UUU|UUUU|_
ಳೋದ|ರಿಯ ಮಾ|ತುಳನ| ಮಾವನ| ನತುಳ|ಭುಜಬಲ|ದಿ
_ U|UUUU|_U| _U U
ಕಾದು| ಗೆಲಿದನ|ನಣ್ಣ|ನವ್ವೆಯ
_ U|UUUU| UUU| UUUU
ನಾದಿ|ನಿಯ ಜಠ|ರದಲಿ| ಜನಿಸಿದ
_ U|_ UU| UU U| UUUU|_ U|_ UU|_
ನಾದಿ|ಮೂರುತಿ | ಸಲಹೊ| ಗದುಗಿನ | ವೀರ|ನಾರಯ|ಣ
ವಾರ್ಧಕ ಷಟ್ಪದಿ
ವಾರ್ಧಕ ಷಟ್ಪದಿಯಲ್ಲಿ ಆರು ಪಾದಗಳಿರುತ್ತವೆ. 1,2,4,5ನೆಯ ಸಾಲುಗಳು ಸಮನಾಗಿದ್ದು, 5 ಮಾತ್ರೆಯ ನಾಲ್ಕು ಗಣಗಳಿರುತ್ತವೆ. 3 ಮತ್ತು 6ನೆಯ ಪಾದಗಳಲ್ಲಿ 5 ಮಾತ್ರೆಯ ಆರು ಗಣಗಳಗಳಿದ್ದು, ಕೊನೆಯಲ್ಲಿ ಒಂದು ಗುರು ಇರುತ್ತದೆ. ಪದ್ಯವು ಆದಿಪ್ರಾಸದಿಂದ ಕೂಡಿರುತ್ತದೆ. ಇದರಲ್ಲಿ ಪ್ರತಿ ಪಾದದಲ್ಲಿಯೂ ಆರಂಭದ ಒಂದೆರಡನೆಯ ಸ್ವರಗಳ ನಡುವೆ ಒಂದೇ ವಿಧವಾದ ವ್ಯಂಜನವಿರುವುದು. ಇದು ಆದಿ ಪ್ರಾಸ.
ಪ್ರಮುಖ ಕೃತಿಗಳು : ಜೈಮಿನಿ ಭಾರತ (ಲಕ್ಷ್ಮೀಶ)
_ _ U |U U_ U |UUUUU |_ U UU
ಬಲ್ಗಯ್ಯ | ನೃಪರಂಜಿ | ತಡೆಯದೆರ | ಘೂದ್ವಹನ
_ _ U | UUUUU| _ UUU||_U UU
ಸೊಲ್ಗೇಳಿ | ನಮಿಸಲಿಳೆ | ಯೊಳ್ ಚರಿಸು | ತಧ್ವರದ
_ U UU| _ U _ |_ UUU | _ U UU|UU_ U|U UUUU |_
ನಲ್ಗುದುರೆ | ಬಂದು ವಾ|ಲ್ಮೀಕಿಯನಿ |ಜಾಶ್ರಮದ|ವಿನಿಯೋಗ|ದು ಪವನದೊ| ಳು
_ U UU|_ U UU| _ U _ | _ U _
ಪುಲ್ಗಳಪ |ಸುರ್ಗೆಳಸಿ |ಪೊಕ್ಕಡಾ | ತೋಟಗಾ
U_ _| U U _ U|UU_U|_ UUU
ವಲ್ಗೆತ|ನ್ನೊಡನಾಡಿ|ಗಳಕೂಡಿ|ಲೀಲೆಮಿಗೆ
_ _ U | UU_U| _ _ U|_U UU |_ U _ |_UUU| _
ಬಿಲ್ಗೊಂಡು | ನಡೆತಂದ|ವಂಕಂಡ|ನರ್ಚಿತಸು|ವಾಜಿಯಂ|ವೀರಲವ|ನು
ಪರಿವರ್ಧಿನೀ ಷಟ್ಪದಿ
ಪರಿವರ್ಧಿನೀ ಷಟ್ಪದಿಯು ಷಟ್ಪದಿಗಳಲ್ಲಿನ ಪ್ರಮುಖ ಪ್ರಕಾರಗಳಲ್ಲೊಂದು. ಪರಿವರ್ಧಿನೀ ಷಟ್ಪದಿಯಲ್ಲಿ ಆರು ಪಾದಗಳಿರುತ್ತವೆ. 1,2,4,5 ನೆಯ ಸಾಲುಗಳು ಸಮನಾಗಿದ್ದು, 4 ಮಾತ್ರೆಯ 4 ಗಣಗಳಿರುತ್ತವೆ. 3 ಮತ್ತು 6 ನೆಯ ಪಾದಗಳಲ್ಲಿ 4 ಮಾತ್ರೆಯ 6 ಗಣಗಳಿದ್ದು, ಕೊನೆಯಲ್ಲಿ ಒಂದು ಗುರು ಬರುತ್ತದೆ
U U _|U U _ |UU_ | _ UU
ಸ್ಮರವಾ|ಜ್ಯದ ಮೈ|ಸಿರಿ ಶೃಂ|ಗಾರದ|
UUUU|UU_ | UU _|_ UU
ಶರನಿಧಿ |ರತಿ ನಾ|ಟ್ಯದರಂ|ಗಸ್ಥಳ|
UUUU|UU_ |_ UU|_ _ |UUU U|UU_ |_
ವಿರಹದ| ನೆಲೆವೀ|ಡೋಪರ|ಕೂರಾ|ಟದ ಕೊಸ|ರಿನ ಗೊ|ತ್ತು
UUUU|_ UU| UU UU| _ U U
ಸರಸರ | ಸಂತವ|ಣೆಯ ಮನೆ |ಸುಗ್ಗಿಯ
UU _ |UU _ | _ UU| _ _
ಪೊರವಾ|ಗರ ಭಾ|ವಾಲಯ|ವಪ್ಪಂ
UU _|UUUU|UUUU|_ UU| _UU| _U U|_
ತಿರೆಪೇ|ರೆದನ ಮ|ರುಕವನು| ದೇಪಮ|ಹೀಪತಿ| ಕನ್ನಡಿ|ಸಿ
ಆರೂ ಷಟ್ಪದಿಗಳನ್ನು ಗಮನಿಸಿದಾಗ ಒಂದು ಅನುಕ್ರಮಣಿಕೆ ಕಂಡುಬರುತ್ತದೆ. ಶರ 60 ಮಾತ್ರೆಗಳು, ಕುಸುಮ 74, ಭೋಗ 88, ಭಾಮಿನಿ 102, ಪರಿವರ್ಧಿನಿ 116 ಕೊನೆಯಲ್ಲಿ ವಾರ್ಧಕ 144. ಹೀಗೆ ಶರ ಷಟ್ಪದಿಯಿಂದ ಪರಿವರ್ಧಿನಿಯವರೆಗೂ ಏರಿಕೆ ಕ್ರಮದಲ್ಲಿ ಪ್ರತಿಬಾರಿಯೂ 14 ಮಾತ್ರೆಗಳು ಹೆಚ್ಚಾಗುತ್ತಾ ಹೋಗುತ್ತವೆ. ಆದರೆ ಕೊನೆಯಲ್ಲಿ ಮಾತ್ರ ಪರಿವರ್ಧಿನಿಯಿಂದ ವಾರ್ಧಕಕ್ಕೆ 28 ಮಾತ್ರೆಗಳು ಹೆಚ್ಚಾಗುತ್ತವೆ.
ರಗಳೆ
ಕನ್ನಡದಲ್ಲಿ ಬಳಕೆಯಾದ ರಗಳೆಯ ಮೂಲ ಪ್ರಾಕೃತ ಭಾಷೆಯ ಪಜ್ಝಟಿಕ ಎಂಬ ಛಂದಸ್ಸಾಗಿದೆ. ಇಂಥ ಪಜ್ಝಟಿಕೆಯ 4 ಭಾಗಗಳು ಸೇರಿ 1 ಕಡವಕವಾಗುತ್ತದೆ.
ರಗಳೆಯನ್ನು ತನ್ನ ಆದಿಪುರಾಣ ಕೃತಿಯಲ್ಲಿ ಮೊದಲಿಗೆ ಬಳಸಿದವನು ಪಂಪ. ಅವನು ತಾನು ಬಳಸಿದ ರಗಳೆಯನ್ನು ಮಟ್ಟ ರಗಳೆ ಎಂದಿದ್ದಾನೆ. ಪೊನ್ನ ಕವಿಯು ತನ್ನ ಶಾಂತಿನಾಥ ಪುರಾಣದಲ್ಲಿ ಬಳಸಿದ ರಗಳೆಯನ್ನು ತ್ವರಿತ ರಗಳೆ ಎಂದಿದ್ದಾನೆ.
ಕಂದಪದ್ಯದ ಮೂಲಕ ರಗಳೆಯ ಲಕ್ಷಣವನ್ನು ವಿವರಿಸುತ್ತಾ ರಗಳೆ ಮತ್ತು ರಘಟಾ ಎಂಬ ಪದಗಳನ್ನು ಮೊದಲಿಗೆ ಬಳಸಿದವನು 1ನೇ ನಾಗವರ್ಮ (ಛಂದೋಂಬುದಿ). ಜಯಕೀರ್ತಿ ಸಹ ತನ್ನ ಛಂದೋಸನುಶಾಸನದಲ್ಲಿ ರಗಳೆಯನ್ನು ರಘಟಾ ಎಂದಿದ್ದಾನೆ. ಆದರೆ ರಗಳೆಯನ್ನು ಜನಪ್ರಿಯಗೊಳಿಸಿದವನು ಹರಿಹರ.
ಮೊದಲ ಬಾರಿಗೆ ಗುಣಚಂದ್ರ ಕವಿ ತನ್ನ ಛಂದಸ್ಸಾರ ಕೃತಿಯಲ್ಲಿ ರಗಳೆಯ ಮೂರು ಪ್ರಭೇದಗಳನ್ನು ಉಲ್ಲೇಖಿಸಿದಾನೆ.
ರಗಳೆಯ ಲಕ್ಷಣಗಳು
ಪ್ರತಿಪಾದದಲ್ಲೂ ಮಾತ್ರೆಗಳು ಸಮನಾಗಿರಬೇಕು.
ಸಾಲುಗಳು ಇಂತಿಷ್ಟೇ ಇರಬೇಕೆಂಬ ನಿಯಮವಿಲ್ಲ.
ಗಣಗಳ ಯೋಜನೆಯಲ್ಲಿ ಲಯಕ್ಕೆ ಹೊಂದುವ ವೈವಿಧ್ಯ ಇರಬೇಕು.
ಎರಡೆರಡು ಸಾಲುಗಳು ಅಂತ್ಯದಲ್ಲಿ ಒಂದೇ ರೀತಿಯ ಪ್ರಾಸ ಹೊಂದಿರುತ್ತವೆ.
ಉತ್ಸಾಹ ರಗಳೆ
ಪ್ರತಿ ಸಾಲಿನಲ್ಲೂ 3 ಮಾತ್ರೆಯ ಗಣಗಳಿರುತ್ತವೆ.
ಸಾಮಾನ್ಯ ನಿಯಮದಂತೆ ಯಾವ ಗಣವೂ ಮೊದಲಲ್ಲಿ ಲಘು ಹಾಗೂ ಅನಂತರ ಗುರು ಇರುವ (U _) ವಿನ್ಯಾಸ ಹೊಂದಿರುವುದಿಲ್ಲ.
ರನ್ನನ ಅಜಿತ ತೀರ್ಥಂಕರ ಪುರಾಣದಲ್ಲಿ ಅಲ್ಲಲ್ಲಿ ಉತ್ಸಾಹ ರಗಳೆ ಬಳಕೆಯಾಗಿದೆ.
ಇದರಲ್ಲಿ 2 ಪ್ರಕಾರಗಳಿವೆ.
3+3+3+3 ಮಾತ್ರೆಗಳ ಗಣವಿಂಗಡನೆ
_ U |_ U| _ U| _ U
ತುಂಬಿ|ವಿಂಡಿ|ಯಂತೆ| ಪಾಡಿ
_U |_U| _ U| _ U
ಜಕ್ಕ|ವಕ್ಕಿ|ಯಂತೆ| ಕೂಡಿ
3+3+3+_ (ಗುರು) ಮಾತ್ರೆಗಳ ಗಣ ವಿಂಗಡನೆ
_ U|UUU |_ U|_
ಮಾವಿ|ನಡಿಯೊ|ಳಾಡು|ತಂ
_ U|_U | _ U|_
ಪಾಡ|ನೆಯ್ದ| ಕೇಳು|ತಂ
ಮಂದಾನಿಲ ರಗಳೆ
ಇದರಲ್ಲಿ 2 ಪ್ರಕಾರಗಳಿವೆ. ಈ 2 ವಿಧಗಳಲ್ಲಿಯೂ ಕೂಡ ಮೊದಲು ಲಘು, ಅನಂತರ ಗುರು ಇರುವ ಗಣವಿನ್ಯಾಸ ಬರಬಾರದು. ಈ ಎರಡೂ ಪ್ರಕಾರಗಳೂ ಹಿಂದಿನ ಕವಿಗಳಿಂದ ಪ್ರಯೋಗಿಸಲ್ಪಟ್ಟಿದೆ.
ಇದರಲ್ಲಿ 2 ಪ್ರಕಾರಗಳಿವೆ.
4+4+4+4 ಗಣವಿನ್ಯಾಸ
_ UU| _ _ |U U UU| _ _
ಆಡುವ| ಗುಂಡ|ಯ್ಯನ ಹೊಸ| ನೃತ್ಯಂ
_ UU| UU _| _ U U| _ _
ನೋಡುವ| ಶಿವನಂ| ಮುಟ್ಟಿತು| ಸತ್ಯಂ
3+5+3+5 ಗಣವಿನ್ಯಾಸ
UUU| _U _ | UUU|UUUUU
ಬನದೊ|ಳೆತ್ತಲುಂ| ಸುಳೆವ|ರ ಗಿಳಿಗಳೆ
UUU| _U _ | _ U|UUUUU
ಜಿನುಗಿ| ರಾಗದಿಂ|ದಂ ಮೊ|ಳೆವಳೆಗಳೆ
ಲಲಿತರಗಳೆ
ಇದರಲ್ಲಿಯೂ ಬೇರೆ ಬೇರೆ ವಿಧಗಳಿದ್ದರೂ ಮುಖ್ಯವಾಗಿ ನಾಲ್ಕು ಪಂಚಮಾತ್ರಾಗಣಗಳಿಂದ ಕೂಡಿರುತ್ತದೆ.
ಯಾವ ಗಣದಲ್ಲಿಯೂ ಮೊದಲು ಲಘು ಅನಂತರ ಗುರು ಇರುವಂತಹ (U_UU ಅಥವಾ U__) ವಿನ್ಯಾಸವಿರಬಾರದು
ಇದೆ ಲಲಿತ ರಗಳೆ ಮುಂದೆ ಆದಿಪ್ರಾಸ ಮತ್ತು ಅಂತ್ಯಪ್ರಾಸಗಳನ್ನು ಕಳೆದುಕೊಂಡು ಆಧುನಿಕ ಯುಗದಲ್ಲಿ ಸರಳ ರಗಳೆಯಾಗಿ ಮಾರ್ಪಾಡಾಯಿತು.
ಪ್ರಮುಖ ಕೃತಿಗಳು : ಹರಿಹರನ ಬಸವದೇವರಾಜ ರಗಳೆ ,ನಂಬಿಯಣ್ಣನ ರಗಳೆ.
_ _ U |_ U U U|UUUUU|U U _ U
ಏನವ್ವ| ಸಂಪಗೆಯೆ| ಶಿವನ ಸಿರಿ| ಮುಡಿಗಿಂದು
_ _ U| U U _ U|_ _ U| _ _ U
ನೀನೀವ| ಪೊಸ ಪೂಗ|ಳಂ ನೀಡು| ನೀಡೆಂದು|
ದ್ವಿಪದಿ
ದ್ವಿಪದಿ ಎಂದರೆ ಎರಡು ಸಾಲಿನ ಪದ್ಯ. ಇದು ಮೂಲತಃ ತೆಲುಗು ಸಾಹಿತ್ಯದ್ದು. ನಡುಗನ್ನಡ ಸಾಹಿತ್ಯ ಸಂಸರ್ಭದಲ್ಲಿ ಇದು ಕನ್ನಡಕ್ಕೆ ಪ್ರವೇಶಿಸಿತು ಎನ್ನಬಹುದು.
ಪ್ರತಿಪಾದದಲ್ಲಿ ಐದು ಮಾತ್ರೆಯ ಮೂರು ಗಣಗಳು ಬಂದು ಕೊನೆಗೆ ಮೂರು ಮಾತ್ರೆಯ ಒಂದು ಗಣ ಬರುತ್ತದೆ.
_ UU U|_ _U| UUUUU| _ U
ಶ್ರೀ ಗುರು ವ|ರಾ ಭಕ್ತ| ಸರಸ ಗುಣ| ಯುಕ್ತ
_ U _ |_ U UU| UU_ U| _ U
ಭೋಗ ಮೋ|ಕ್ಷಾರ್ಥಗಳ| ಬಗೆಗೊಂಬ|ಯುಕ್ತ
ಮಾತ್ರಾ ಚೌಪದಿ
4 ಪಾದಗಳನ್ನು ಹೊಂದಿದ್ದು 5 ಮಾತ್ರೆಯ 3 ಗಣಗಳು, 3 ಮಾತ್ರೆಯ 1 ಗಣ. ಒಟ್ಟು 4 ಗಣಗಳು ಇರುತ್ತವೆ.
1ನೇ ನಾಗವರ್ಮನ ಛಂದೋಂಬುಧಿಯಲ್ಲಿ ಚೌಪದದ ಕುರಿತಾದ ಲಕ್ಷಣ ಪದ್ಯ
UUU _|UUUUU|_ U _ |UUU
ಎಸೆವ ಚೌ|ಪದಿಗೆ ಪದಿ|ನೆಂಟು ಮಾ|ತ್ರೆಗಳು
UUUUU|U U _ U|U U UUU|UUU
ಯಸಿನೆ ಸಸಿ|ಯತಿಯೆಂಟ|ರೊಳು ಪಸರಿ|ಸುತಲಿ
UU_U| _ U UU| UU _U|UUU
ಹಸನಾಗಿ| ನಾಲ್ಕುಪದ| ಸಮನಾಗಿ| ಬರಲು
U U _ U| _ U UU|U UU UU |U U U
ಬಿಸಜಾಕ್ಷಿ| ಪ್ರಾಸು ತಳಿ| ಮೊದಲು ಕಡೆ|ಯಿರಲು
ಧವಳ/ಧವಲ
ಧವಲವು ಪ್ರಾಕೃತ ಮೂಲದಿಂದ ಕನ್ನಡಕ್ಕೆ ಬಂದುದ್ದಾಗಿದೆ. ಇದರಲ್ಲಿ 4 ಸಾಲಿನ ಪದ್ಯ, 6 ಸಾಲಿನ ಪದ್ಯ ಮತ್ತು 8 ಸಾಲಿನ ಪದ್ಯ ಎಂಬ ಮೂರು ವಿಧಗಳಿವೆ.
ಇನ್ನೂ ಕೆಲವೆಡೆ ಧವಳವು ಅಕ್ಷರ ಛಂದಸ್ಸು ಎಂದು ಉಲ್ಲೇಖವಾಗಿದ್ದು ೪ ಪಾದಗಳ ವೃತ್ತವಾದ ಈ ಛಂದಸ್ಸು ಪ್ರತಿ ಸಾಲಿನಲ್ಲೂ 19 ಅಕ್ಷರಗಳನ್ನು ಹೊಂದಿದ್ದು ಆರು ನಗಣಗಳು ಮತ್ತು ಕೊನೆಗೊಂದು ಗುರು ಬರುವುದೆಂದು ಪಿಂಗಳನು ಹೇಳಿದ್ದಾನೆ.
ರನ್ನನ ಗದಾಯುದ್ಧ ಕೃತಿಯಲ್ಲಿ ಧವಲವು ಮೊದಲ ಬಾರಿಗೆ ಉಲ್ಲೇಖವಾಗಿದೆ.
ಅಷ್ಟ ಧವಲ
ಶಾಞ್ರ್ಗದೇವನು ಇದನ್ನು ವಿಕ್ರಮಧವಲ ಎಂದಿದ್ದಾನೆ
ಪದ್ಯದ 1 ಮತ್ತು 3ನೇ ಸಾಲಿನಲ್ಲಿ 4 ಮಾತ್ರೆಯ 3 ಗಣಗಳು ಬಂದು ಕೊನೆಯಲ್ಲಿ 2 ಮಾತ್ರೆಯ ಅರ್ಧಗಣ ಉಳಿಯುತ್ತದೆ. 2, 4 ಮತ್ತು 6ನೇ ಸಾಲಿನಲ್ಲಿ 4 ಮಾತ್ರೆಯ 3 ಗಣಗಳಿರುತ್ತವೆ. 5 ಮತ್ತು 7ನೇ ಸಾಲಿನಲ್ಲಿ ಒಂದು ಮಾತ್ರೆ ಕಡಿಮೆಯಾಗಿ 4 ಮಾತ್ರೆಯ 3 ಗಣಗಳು ಬರುತ್ತವೆ. 8ನೇ ಸಾಲಿನಲ್ಲಿ 4 ಮಾತ್ರೆಯ 2 ಗಣಗಳಿದ್ದು ಕೊನೆಗೆರಡು ಮಾತ್ರೆ ಉಳಿಯುತ್ತವೆ.
ಷಟ್ ಧವಲ
ಶಾಞ್ರ್ಗದೇವನು ಇದನ್ನು ವಿಜಯಧವಲ ಎಂದಿದ್ದಾನೆ
ಪದ್ಯದ 1 ಮತ್ತು 3ನೇ ಸಾಲಿನಲ್ಲಿ 6 ಮಾತ್ರೆಯ 3 ಗಣಗಳು, 2 ಮತ್ತು 5ನೇ ಸಾಲಿನಲ್ಲಿ 6 ಮಾತ್ರೆಯ 2 ಗಣಗಳು, 4 ಮತ್ತು 6ನೇ ಸಾಲಿನಲ್ಲಿ 6 ಮಾತ್ರೆಯ 2 ಗಣಗಳು ಮತ್ತು 4/5 ಮಾತ್ರೆಯ 1 ಗಣ ಬರುತ್ತವೆ.
ಚತುರ್ ಧವಲ
ಶಾಞ್ರ್ಗದೇವನು ಇದನ್ನು ಕೀರ್ತಿಧವಲ ಎಂದಿದ್ದಾನೆ
1 ಮತ್ತು 3ನೇ ಸಾಲಿನಲ್ಲಿ 6, 4 ಮತ್ತು 3 ಮಾತ್ರೆಯ ತಲಾ ಒಂದೊಂದು ಗಣಗಳು ಬರುತ್ತವೆ. 2 ಮತ್ತು 4ನೇ ಸಾಲಿನಲ್ಲಿ 6, 4 ತಲಾ ಒಂದೊಂದು ಗಣಗಳು ಬರುತ್ತವೆ.
ಹೇಮಚಂದ್ರನು ಶ್ರೀಧವಲ (8 ಪಾದಗಳು), ಯಶೋಧವಲ (8 ಪಾದಗಳು), ಕೀರ್ತಿಧವಲ (6 ಪಾದಗಳು), ಗುಣಧವಲ (4 ಪಾದಗಳು), ಭ್ರಮರಧವಲ (4 ಪಾದಗಳು), ಅಮರಧವಲ (4 ಪಾದಗಳು), ಮಂಗಲಧವಲ (4 ಪಾದಗಳು) ಎಂಬ 8 ರೀತಿಯ ಧವಲಗಳನ್ನು ಹೇಳಿದ್ದಾನೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ