ಅಂಶಗಣದ ಛಂದೋರೂಪಗಳು
ಅಂಶಗಣದ ಛಂದೋರೂಪಗಳು
ಸಾಂಗತ್ಯ
ಕುಮುದೇಂದುವಿನ ಸಿರಿಭೂವಲಯ ಕೃತಿಯಲ್ಲಿ ಸಾಂಗತ್ಯದ ಕುರಿತಾದ ಪದ್ಯಗಳು ಮೊದಲ ಬಾರಿಗೆ ಕಂಡುಬರುತ್ತವೆ.
1410 ರಲ್ಲಿದ್ದ ದೇಪರಾಜನ ಸೊಬಗಿನ ಸೋನೆ ಕೃತಿಯು ಸಾಂಗತ್ಯದಲ್ಲಿ ರಚಿತವಾಗಿದ್ದು, ಮೊದಲ ಉಪಲಬ್ದ ಸಾಂಗತ್ಯ ಕೃತಿ ಎನಿಸಿದೆ.
ಪದ್ಯದಲ್ಲಿ ನಾಲ್ಕು ಸಾಲುಗಳಿರುತ್ತವೆ. ಮೊದಲ ಸಾಲು ಹಾಗೂ ಮೂರನೇ ಸಾಲು ಸಮವಾಗಿರುತ್ತವೆ. ಹಾಗೇ ಎರಡನೇ ಸಾಲು ಹಾಗೂ ನಾಲ್ಕನೇ ಸಾಲು ಸಮವಾಗಿರುತ್ತವೆ.
ಮೊದಲ ಸಾಲು ನಾಲ್ಕು ವಿಷ್ಣು ಗಣಗಳಿರುತ್ತವೆ. ಎರಡನೇ ಸಾಲಿನಲ್ಲಿ ಎರಡು ವಿಷ್ಣು ಹಾಗೂ ಒಂದು ಬ್ರಹ್ಮಗಣವಿರುತ್ತದೆ. ಇದೊಂದು ಅರ್ಧ ಸಮವೃತ್ತ ಎನಿಸಿದೆ.
ಕೆಲವೊಮ್ಮೆ ವಿಷ್ಣುಗಣಗಳ ಸ್ಥಾನದಲ್ಲಿ ಬ್ರಹ್ಮಗಣಗಳು ಸಹ ಬರಬಹುದು
U U UU|_ UU| _U U| UU _ U
ಅಡಿಗಡಿ|ಗಗ್ರಜ|ರೆಲ್ಲರ|ಬೆಸಗೊಂಡು
U U UU| _ UU| _ U
ಮೃಡರಿಪು|ವಾಪುರ|ದಿಂದ
U U _ U| _ UU| UU UU| _ UU
ಕಡುವೇಗ|ದಿಂದವೆ|ತೆರಳಿದ| ನಾರದ
U UU U| _ UU| _ U
ನೊಡನೆ ವಿ|ಮಾನವ|ನೇರಿ
ಪ್ರಮುಖ ಸಾಂಗತ್ಯಕೃತಿಗಳು
ಸೊಬಗಿನ ಸೋನೆ (1410 ದೇಪರಾಜ)
ತ್ರಿಪುರದಹನಾ ಸಾಂಗತ್ಯ, ಅಂಜನಾ ಚರಿತ್ರೆ (1472 ಶಿಶುಮಾಯಣ)
ಪರಮಾನುಭವ ಭೋದೆ (1500 ನಿಜಗುಣ ಶಿವಯೋಗಿ)
ಕುಮಾರರಾಮನ ಸಾಂಗತ್ಯ (1525 ನಂಜುಂಡ ಕವಿ)
ಮೋಹನ ತರಂಗಿಣಿ (1550 ಕನಕದಾಸ)
ಭರತೇಶ ವೈಭವ (1557 ರತ್ನಾಕರ ವರ್ಣಿ)
ಹದಿಬದೆಯ ಧರ್ಮ (1700 ಸಂಚಿಯ ಹೊನ್ನಮ್ಮ )
ಚಂದ್ರಹಾಸನ ಕಥೆ, ಉದ್ದಾಳಿಕನ ಕಥೆ (1750 ಹೆಳವನಕಟ್ಟೆ ಗಿರಿಯಮ್ಮ)
ತ್ರಿಪದಿ
ಈ ಛಂದಸ್ಸನ್ನು ಕವಿರಾಜಮಾರ್ಗಕಾರ ತ್ರಿಪದಿ ಎಂತಲೂ, ನಾಗವರ್ಮ ತನ್ನ ಛಂದೋಂಬುದಿಯಲ್ಲಿ ತಿವದಿ, ತ್ರಿವಳಿ ಮತ್ತು ತ್ರಿಪದಿ ಎಂತಲೂ ಉಲ್ಲೇಖಿಸಿದ್ದಾನೆ. ಮತ್ತೆ ಜಯಕೀರ್ತಿ ತನ್ನ ಛಂದೋನುಶಾಸನದಲ್ಲಿ ತ್ರಿಪದಿಕಾ ಎಂದು ಕರೆದಿದ್ದರೆ ನೇಮಿಚಂದ್ರನು ತನ್ನ ಲೀಲಾವತಿ ಗ್ರಂಥದಲ್ಲಿ ತಿವುಡೆ ಎಂದ್ದಿದ್ದಾನೆ. ಸುರಂಗ ಸೋಮರಾಜ ಕವಿಗಳು ಒನಕೆವಾಡು ಎಂದು ಪ್ರಸ್ತಾಪಿಸಿದ್ದಾರೆ.
ಬಾದಾಮಿಯ ತಟ್ಟುಕೋಟಿ ಶಾಸನದಲ್ಲಿ (ಸಾ ಶ 700) ತ್ರಿಪದಿಯ ಮೊದಲ ಉಲ್ಲೇಖ ಕಂಡುಬರುತ್ತದೆ.
ಮೂಲದಲ್ಲಿ ಅಂಶಗಣಾನ್ವಿತ ಛಂದಸ್ಸಾಗಿದ್ದ ತ್ರಿಪದಿ ಸು 12ನೇ ಶ (1160) ವೇಳೆಗೆ ಮಾತ್ರಾಛಂದಸ್ಸಾಗಿ ಪರಿವರ್ತಿತವಾಗಿದೆ.
ಕವಿರಾಜ ಮಾರ್ಗ ಕೃತಿಯಲ್ಲಿ ಉಲ್ಲೇಖವಾದ ಚೆತ್ತಾಣ ಕಾವ್ಯದ ಬಗ್ಗೆ ಹೇಳುವಾಗ ತ್ರಿವಿಧಿಯ ಪ್ರಸ್ತಾಪ ಬಂದಿದೆ. ಈ ಮೂಲಕ ತ್ರಿಪದಿ ಎಂಬುದು ಕನ್ನಡದಲ್ಲಿ 9 ನೇ ಶತಮಾನಕ್ಕಿಂತಲೂ ಪೂರ್ವದಲ್ಲಿ ಕೃತಿಗಳಲ್ಲಿ ಬಳಕೆಯಾಗಿರಬಹುದೆಂದು ಕಾಣುತ್ತದೆ.
ಜಯದೇವಿ ತಾಯಿ ಲಿಗಾಡೆಯವರ ಶ್ರೀ ಸಿದ್ಧರಾಮೇಶ್ವರ ಪುರಾಣವು ತ್ರಿಪದಿಯಲ್ಲಿ ರಚಿತವಾದ ಅತಿದೊಡ್ಡ ಮಹಾಕಾವ್ಯವಾಗಿದೆ. ಒಟ್ಟು ತ್ರಿಪದಿಗಳ ಸಂಖ್ಯೆ 4100.
ತ್ರಿಪದಿಯಲ್ಲಿ ಚಿತ್ರ ಮತ್ತು ವಿಚಿತ್ರ (ಚಿತ್ರಲತೆ) ಎಂಬ ಎರಡು ಬಗೆಯ ತ್ರಿಪದಿಗಳಿವೆ
ಮೊದಲ ಸಾಲಿನಲ್ಲಿ ನಾಲ್ಕು ವಿಷ್ಣುಗಣಗಳು ಇರುತ್ತವೆ. ಎರಡನೇ ಸಾಲಿನ ನಾಲ್ಕುಗಣಗಳಲ್ಲಿ ಎರಡನೇ ಗಣ ಬ್ರಹ್ಮಗಣ ಹಾಗೂ ಉಳಿದವು ವಿಷ್ಣುಗಣಗಳಾಗಿರುತ್ತವೆ. ಮೂರನೇ ಸಾಲಿನಲ್ಲಿ ಮೂರು ಗಣಗಳಿದ್ದು ಮೊದಲ ಮತ್ತು ಮೂರನೇ ಗಣಗಳು ವಿಷ್ಣುವಾಗಿದ್ದು ಎರಡನೇ ಗಣ ಬ್ರಹ್ಮಗಣವಾಗಿರುತ್ತದೆ. ಒಟ್ಟಾರೆಯಾಗಿ 6 ಮತ್ತು 10 ನೇ ಗಣ ಬ್ರಹ್ಮ ಗಣವಾಗಿದ್ದು ಅವುಗಳನ್ನು ರಸದಶ ಸ್ಥಾನಗಳೆಂದು ಕರೆಯುವರು. 7 ಮತ್ತು 11 ನೇ ಗಣಗಳು 2 ಲಘುವಿನಿಂದ ಪ್ರಾರಂಭವಾಗಬೇಕು.
ಇವುಗಳಲ್ಲಿ ಪ್ರತಿ ಸಾಲಿನ ಎರಡನೇ ಅಕ್ಷರ ಪ್ರಾಸದಿಂದ ಕೂಡಿರುತ್ತದೆ. ಅಲ್ಲದೇ ಎರಡನೇ ಸಾಲಿನ ಮೊದಲ ಮೂರು ಗಣಗಳ ನಂತರ ಯತಿ ಬರುತ್ತದೆ.
ತ್ರಿಪದಿ ಒಂದು ಗೇಯ ಛಂದಸ್ಸಾಗಿರುವುದರಿಂದ ಅನುಕೂಲಕ್ಕನುಸಾರವಾಗಿ ಕೆಲವೊಮ್ಮೆ ಒಂದು ಗಣದ ಸ್ಥಾನದಲ್ಲಿ ಇನ್ನೊಂದು ಗಣ ಬರುವ ಅವಕಾಶವೂ ಇದೆ.
ನಾಗವರ್ಮನ ಲಕ್ಷಣ ಪದ್ಯಗಳು
ಚಿತ್ರ ತ್ರಿಪದಿ - ಕೊನೆಯ ಗಣ ವಿಷ್ಣು
U U U _ |U U_ _ | UUU U| _ U _
ಬಿಸುರು ಹೋ|ದ್ಭವಗಣಂ| ರಸದಶ| ಸ್ಥಾನದೊಳ್
U U U U| _ U| UU U U| U U UU
ಬಿಸುರುಹ| ನೇತ್ರ| ಗಣಮೆ ಬ|ರ್ಕುಳಿದವು
U U U U| _ U | UU UU
ಬಿಸುರುಹ| ನೇತ್ರೇ| ತ್ರಿಪದಿಗೆ|
ವಿಚಿತ್ರ ತ್ರಿಪದಿ - ಕೊನೆಯ ಗಣ ರುದ್ರ
U U U _ |UU UU| U U U U| U U _ _
ತುದಿಯೊಳೀ|ಶ್ವರ ಗಣ| ಮೊದವಿರೆ| ಪದಮೆಲ್ಲಂ
U U UU| U U _| UU UU| _ U _
ಮದಗಜ| ಗಮನೇ| ಪೆರಗಣ| ಚಿತ್ರದಂ
U U _ U | U U U| _U _ _
ದದಿನಿರ್ದೊ|ಡದು ವಿ|ಚಿತ್ರಮಕ್ಕುಂ
ಬಾದಾಮಿಯಲ್ಲಿರುವ ಕಪ್ಪೆಅರಭಟ್ಟನ ಶಾಸನದಲ್ಲಿ ಮೊದಲ ಬಾರಿಗೆ ತ್ರಿಪದಿಯಲ್ಲಿ ರಚನೆಯಾದ ಪದ್ಯಗಳು ಸಿಗುತ್ತವೆ.
ಸಾಧುಗೆ| ಸಾಧು ಮಾ|ಧುರ್ಯನ್ಗೆ| ಮಾಧುರ್ಯಂ|
ಬಾಧಿಪ್ಪ| ಕಲಿಗೆ | ಕಲಿಯುಗ| ವಿಪರೀತನ್|
ಮಾಧವ|ನೀತನ್| ಪೆಱನಲ್ಲ||
ಅಂಶ ಷಟ್ಟದಿ
ಷಟ್ಪದಿಯ ಮೊದಲ ಉಲ್ಲೇಖ ದೊರೆಯುವುದು ನಾಗವರ್ಮನ ಛಂದೋಂಬುಧಿ ಕಾವ್ಯದಲ್ಲಿ. ಇಲ್ಲಿ ಷಟ್ಪದಿಯನ್ನು ಅಂಶಗಣಾತ್ಮಕ ಛಂದಸ್ಸು ಎಂಬುದಾಗಿ ವಿವರಿಸಲಾಗಿದೆ.
ಅಮ್ಮಿನಭಾವಿ ಶಾಸನವನ್ನು ಅಧ್ಯಯನ ಮಾಡಿದ ತೀ.ನಂ.ಶ್ರೀ ಸಹ ಪ್ರಾರಂಭದಲ್ಲಿ ಇದ್ದುದೊಂದೆ ಷಟ್ಪದಿ ಅದು ಅಂಶಗಣಾಧಾರಿತವಾದುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಆರು ಪಾದಗಳನ್ನು ಒಳಗೊಂಡ 2 ಭಾಗಗಳು, ಪೂರ್ವಾರ್ಧ ಮತ್ತು ಉತ್ತರಾರ್ಧ ಎರಡರಲ್ಲೂ ಒಂದೇ ರೀತಿಯ ಗಣ ವಿಂಗಡಣೆಯಿರುತ್ತದೆ. 1, 2, 4, 5 ನೇ ಸಾಲಿನಲ್ಲಿ 2 ವಿಷ್ಣುಗಣ ಬರುತ್ತವೆ. 3 ಮತ್ತು 6ನೆಯ ಪಾದದಲ್ಲಿ 2ವಿಷ್ಣುಗಣ + 1ರುದ್ರ ಗಣ ಬಂದು ಒಟ್ಟು 7 ಗಣಗಳು ಬರುತ್ತವೆ.
U U UU| _ U U
ಅದು ಪರ | ಮಾಸ್ಪದ
U U U U | _ U U
ಮದು ಪುಣ್ಯ | ಸಂಪದ
U U U _ | U U U U | _ _ _ |_
ಮದು ಮಹಾ | ಭ್ಯುದಯ ವಿ|ಲಾಸಾವಾ|ಸಂ
ವಿಷ್ಣು ಮತ್ತು ರುದ್ರಗಣಗಳ ಸ್ಥಾನಗಳಲ್ಲಿ ವಿರಳವಾಗಿ ಪರ್ಯಾಯ ಗಣಗಳು ಬರುವುದುಂಟು.
ಪ್ರಮುಖ ಕೃತಿಗಳು
ಹರಿಚಾರಿತ್ರ್ಯ - ಪೋಲಾಳ್ವ ದಂಡನಾಥ (1224)
ರಾಮಾಯಣ – ಕುಮುದೇಂದು (1275)
ಅಕ್ಕರ
ಇದರಲ್ಲಿ ಪಿರಿಯಕ್ಕರ, ದೊರೆಯಕ್ಕರ, ನಡುವಣಕ್ಕರು, ಎಡೆಯಕ್ಕರ ಮತ್ತು ಕಿರಿಯಕ್ಕರ ಎಂದು ಐದು ಪ್ರಭೇದಗಳಿವೆ. ಸಂಸ್ಕೃತದಲ್ಲಿ ಇವಕ್ಕೆ ಕ್ರಮವಾಗಿ ಮಹಾಕ್ಷರ, ಸಮಾನಾಕ್ಷರ, ಮಧ್ಯಾಕ್ಷರ, ಅಂತರಾಕ್ಷರ ಮತ್ತು ಅಲ್ಪಾಕ್ಷರ ಎನ್ನುವರು. ಹಾಗೆಯೇ ತೆಲುಗಿನಲ್ಲಿ ಕ್ರಮವಾಗಿ ಮಹಾಕ್ಕರ, ಮಧ್ಯಾಕ್ಕರ, ಮಧುರಾಕ್ಕರ, ಅಂತರಾಕ್ಕರ, ಅಲ್ಪಾಕ್ಕರ ಎಂಬ ಹೆಸರುಗಳನ್ನು ಹೇಳಲಾಗಿದೆ.
ಅಕ್ಕರಗಳಲ್ಲಿ ಕೆಲವೊಮ್ಮೆ ವಿಷ್ಣು ಮತ್ತು ರುದ್ರಗಣಗಳಿಗೆ ಪರ್ಯಾಯವಾಗಿ ಬೇರೆ ಗಣಗಳು ಸಹ ಬರುವುದುಂಟು
ಪಿರಿಯಕ್ಕರ
4 ಪಾದಗಳನ್ನು ಹೊಂದಿರುತ್ತದೆ, ಪ್ರತಿಪಾದದಲ್ಲಿ ಬ್ರ, ವಿ, ವಿ, ವಿ,ವಿ, ವಿ, ರು ಎಂದು 7 ಗಣಗಳು ಬರುತ್ತವೆ.
_ U| U U U U|_ U U| _ UU| _ U _| _ _ U| _ U U _
ಬೀರ|ದಳವಿಯ|ನನ್ನಿಯ|ಚಾಗದ |ಶಾಸನಂ| ಚಂದ್ರಾರ್ಕ| ತಾರಂಬರಂ
ದೊರೆಯಕ್ಕರ
4 ಪಾದಗಳು ಇರುತ್ತವೆ. ಪ್ರತಿಪಾದದಲ್ಲಿ ವಿ, ವಿ, ಬ್ರ, ವಿ, ವಿ, ಬ್ರ ಒಟ್ಟು 6 ಗಣಗಳು ಬಂದಿರುತ್ತವೆ,
ನಾಗವರ್ಮ ಛಂದೋಂಬುದಿಯಲ್ಲಿ ಇದರ ಲಕ್ಷಣ ಪದ್ಯವನ್ನು ಹೇಳಿದ್ದಾನೆ.
U UU _ | UU UU|U U U| UU _ U |U U_ U | _ U
ಸರಸಿಜೋ|ದರ ಗಣ|ಮೆರಡ|ಜನುಮಲ್ಲಿ| ನರೆದಿರ್ಕೆ| ಮತ್ತಂ
ನಡುವಕ್ಕರ
4 ಪಾದಗಳು ಇದ್ದು ಪ್ರತಿಪಾದದಲ್ಲಿ ಬ್ರ, ವಿ, ವಿ, ವಿ, ರು ಎಂದು 5 ಗಣಗಳು ಬರುತ್ತವೆ.
ಚಂದ್ರರಾಜನ ಮದನತಿಲಕದ ಪದ್ಯ
U UU| _ UU| UU _ U| _ UU| U UU _ _
ನುಡಿಗು|ಮೋಪನ|ಪಡೆಮಾತ|ನಾತನಿ|ರ್ದೆಡೆಗೆ ವಕ್ಕುಂ|
ಎಡೆಯಕ್ಕರ
4 ಪಾದಗಳು ಇರುತ್ತವೆ. ಪ್ರತಿಪಾದದಲ್ಲಿ ಬ್ರ, ವಿ, ವಿ, ರು ಎಂಬ ನಾಲ್ಕು ಗಣಗಳು ಬರುತ್ತವೆ.
ಚಂದ್ರರಾಜನ ಮದನತಿಲಕದ ಸಾಲು
UU U|U UU _ |_ U _ | _ _ U _
ಕರಜ|ಮೆರಡರಿಂ| ಬೆಕ್ಕು ಪಾ| (ಯ್ವಾ)ಪಾಂಗಿನಿಂ|
ಕಿರಿಯಕ್ಕರ
4 ಪಾದಗಳು ಪ್ರತಿಪಾದದಲ್ಲಿ ವಿ, ವಿ, ರು ಒಟ್ಟು 3 ಗಣಗಳು ಇರುತ್ತವೆ.
U U U U|UU _ _ |U U U _ U
ಪೊಡೆಯಲ|ರವರಿರ್ವರ್|ಮೊದಲೊಳಿರ್ಕೆ|
ಅಕ್ಕರಿಕೆ
ನಾಗವರ್ಮನು ಛಂದೋಂಬುಧಿಯಲ್ಲಿ ಮುರರಿಪು ಬೊಮ್ಮಂ, ಮುರರಿಪು ಬೊಮ್ಮಂ, ಮುರರಿಪು ಶೂಲಧರಂ ಎಂದು ಅಕ್ಕರಕೆಯ ಪ್ರತಿ ಸಾಲಿನಲ್ಲಿ ಬರುವ ಅಂಶಗಳ ಬಗ್ಗೆ ವಿವರಿಸಿದ್ದಾನೆ.
ಜಯಕೀರ್ತಿಯ ಪ್ರಕಾರ ವಿ, ಬ್ರ, ವಿ, ಬ್ರ, ವಿ, ವಿ, ಗುರು ಗಣವಿನ್ಯಾಸ ಬರುತ್ತದೆ. ಅಕ್ಕರಿಕೆಯ ಕುರಿತು ಜಯಕೀರ್ತಿ ಹೇಳುವ ಲಕ್ಷಣ ಪದ್ಯವನ್ನು ಮಾತ್ರಾ ರೂಪಕ್ಕೆ ಪರಿವರ್ತಿಸಿ ನೋಡಿದಾಗ ಪ್ರತಿ ಸಾಲಿನಲ್ಲಿ ಪ್ರತಿ 8 ಮಾತ್ರೆಗಳಿಗೊಮ್ಮೆ ಅಥವಾ ಪ್ರತಿ 6 ಅಕ್ಷರಗಳಿಗೊಮ್ಮೆ ಯತಿ ಬರುತ್ತದೆ.
17ನೇ ಶತಮಾನದ ನಂತರವೇ ಅಕ್ಕರಿಕೆಯು ಕೃತಿಗಳಲ್ಲಿ ಕಂಡುಬಂದಿದ್ದು ಮೊದಲಬಾರಿಗೆ ಷಡಕ್ಷರ ಕವಿಯ ವೃಷಭೇಂದ್ರ ವಿಜಯ ಮತ್ತು ನಂತರದಲ್ಲಿ ಇಮ್ಮಡಿ ಗುರುಸಿದ್ಧನ ಹಾಲಾಸ್ಯ ಪುರಾಣದಲ್ಲಿ ಬಳಕೆಯಾಗಿದೆ.
4 ಪಾದಗಳು ಇದ್ದು ಪ್ರತಿಪಾದದಲ್ಲಿ ವಿ, ಬ್ರ, ವಿ, ಬ್ರ, ವಿ,ರು 6 ಗಣಗಳು ಇರುತ್ತವೆ. 6ನೆಯ ಅಕ್ಷರಕ್ಕೆ 2 ಸಾರಿ ಯತಿ ಬರುತ್ತದೆ,
ಷಡಕ್ಷರಿಯ ರಾಜಶೇಖರವಿಳಾಸ
U UU U| UU _| UU UU| U U_| UU U U| _ U U_
ಸುರನುತ | ಚರಣೇ| ವರಗುಣ|ಭರಣೇ|ಖರರುಚಿ | ಬಿಂಬಗತೇ|
ಏಳೆ
ಏಳೆಯು ತಮಿಳಿನ ಛಂದೋಪ್ರಕಾರಗಳಾದ ಕರುಳ್ ಮತ್ತು ವೆಣ್ಬಾಗಳನ್ನು ಹೋಲುತ್ತದೆಂದು ನಾಗವರ್ಮ ತನ್ನ ಛಂದೋಂಬುಧಿಯಲ್ಲಿ ಹೇಳಿದ್ದಾನೆ.
ಎರಡು ಪಾದಗಳನ್ನು ಹೊಂದಿದ್ದು ಮೊದಲ ಸಾಲಿನಲ್ಲಿ 4 ವಿಷ್ಣು ಗಣಗಳು ಮತ್ತು ಎರಡನೆಯ ಸಾಲಿನಲ್ಲಿ ವಿ, ಬ್ರ, ವಿ ಎಂದು 3 ಗಣಗಳು ಬರುತ್ತವೆ.
ಮೊದಲನೆಯ ಪಾದದಲ್ಲಿ 2ನೆಯ ಗಣದ ನಂತರ ಯತಿ ಬರುತ್ತದೆ. 3ನೆಯ ಗಣದಲ್ಲಿ ದ್ವಿತೀಯಾಕ್ಷರ ಪ್ರಾಸವು ಅನುಕ್ರಮವಾಗಿ ಬರುತ್ತದೆ.
ಕೆಲವೊಮ್ಮೆ 6ನೆಯ ಗಣವಾದ ಬ್ರಹ್ಮಗಣದ ಸ್ಥಾನದಲ್ಲಿ ವಿಷ್ಣುಗಣ ಅಥವಾ ರುದ್ರಗಣ ಬರಬಹುದು
U U U _ |U U _ U | UU U _ | UU _U
ಹಡೆದ ತಾ|ಯಿಗೆ ಬನ್ನಿ| ಹಡೆದ ತಂ|ದೆಗೆ ಬನ್ನಿ|
U U U _| U UU| UU _ U
ಪಡೆದ ಗಂ|ಡನಿಗೆ| ನಮ ಬನ್ನಿ ||
ಚೌಪದ
1025 ರಲ್ಲಿ ಇದ್ದ ಚಂದ್ರರಾಜನ ಮದನತಿಲಕ ಕೃತಿಯಲ್ಲಿ ಚೌಪದ ಛಂದಸ್ಸಿನ ಮೊದಲ ಬಳಕೆ ಕಂಡುಬರುತ್ತದೆ.
4 ಪಾದಗಳು ಇರುತ್ತವೆ. ಪ್ರತಿಪಾದದಲ್ಲಿ 1 ವಿಷ್ಣುಗಣ ಮತ್ತು 1 ರುದ್ರ ಗಣ ಇರುತ್ತದೆ.
U UU U | _ U U _
ಮದನನ | ತಂದೆಯ ಮುಂ
U U U U| _ UU _
ದುದಯಿಸೆ| ಶಂಕರನೋ
U UU U| _ U U U
ಳ್ಪೊದವಿರೆ| ಸಂದುದು ನೋ
U U UU| _ U UU
ಡಿದು ಸತಿ| ಚೌಪದಿಗೆ
ಛಂದೋವಸಂತ
ನಾಗವರ್ಮನ ಛಂದೋಂಬುಧಿಯಲ್ಲಿ ಹೇಳಿರುವಂತೆ ಈ ಛಂದಸ್ಸಿಗೆ 4 ಪಾದಗಳು ಇದ್ದು ಪ್ರತಿಪಾದದಲ್ಲಿ ವಿ, ವಿ, ವಿ, ಬ್ರ ಒಟ್ಟು 4 ಗಣಗಳು ಬರುತ್ತವೆ.
ಜಯಕೀರ್ತಿಯ ಛಂದೋನುಶಾಸನದಲ್ಲಿ ಹೇಳಿರುವಂತೆ ಛಂದೋವಸಂತವು 4 ಪಾದಗಳನ್ನು ಹೊಂದಿದ್ದು ಪ್ರತಿಪಾದದಲ್ಲಿ ವಿ, ಬ್ರ, ಬ್ರ, ಬ್ರ, ಬ್ರ ಎಂದು ಒಟ್ಟು 5 ಗಣಗಳು ಬರುತ್ತವೆ.
ನಾಗವರ್ಮನ ಲಕ್ಷಣ ಪದ್ಯದ ಸಾಲು
_ UU| UU UU| U U UU| U U _
ಮಂದರ| ಧರಗಣ| ಮೆಸೆದಿರೆ| ಮೊದಲೊಳ್|
ಮದನವತಿ
ನಾಗವರ್ಮನು ಹೇಳಿರುವ 10 ಕರ್ನಾಟಕ ವಿಷಯ ಜಾತಿಗಳಲ್ಲಿ ಮದನವತಿಯೇ ಮೊದಲನೆಯದು.
ಮದನವತಿಯ ಕುರಿತಂತೆ ನಾಗವರ್ಮನು 3 ರೀತಿಯ ಗಣವಿಂಗಡಣೆಯನ್ನು ಹೇಳಿದ್ದಾನೆ
4 ಪಾದಗಳು ಇರುತ್ತವೆ. ಪ್ರತಿಪಾದದಲ್ಲಿ ವಿ, ವಿ, ವಿ, ವಿ, ವಿ, ಗುರು ಅಥವಾ ವಿ, ವಿ, ವಿ, ವಿ, ರು ಅಥವಾ ರು, ರು, ರು, ವಿ ಈ ಪ್ರಕಾರವಾಗಿ ಗಣವಿನ್ಯಾಸವಿರುತ್ತದೆ.
ನಾಗವರ್ಮನ ಮದನವತಿಯ ಲಕ್ಷಣ ಪದ್ಯದ ಸಾಲು
U UU U| _ U U | UU U U| UU U U | UU UU| _
ಮದನನ| ತಂದೆಯ| ಗಣಮವು| ವಿಷಯದೊ|ಳಿರೆ ಗುರು|ಮುಂ
ಜಯಕೀರ್ತಿ ತನ್ನ ಛಂದೋನುಶಾಸನದಲ್ಲಿ ಹೇಳಿರುವಂತೆ ಮೊದಲ ಸಾಲಿನಲ್ಲಿ 20 ಲಘು ಮತ್ತು ಕೊನೆಯಲ್ಲಿ ಗುರು ಬರುತ್ತದೆ. ಉಳಿದ 3 ಸಾಲುಗಳಲ್ಲಿ ವಿ, ವಿ, ವಿ, ವಿ, ಬ್ರ ಗಣಗಳು ಬರುತ್ತವೆ. ಒಟ್ಟಿನಲ್ಲಿ ಪ್ರತಿ ಸಾಲಿನಲ್ಲೂ 22 ಮಾತ್ರೆಗಳಿರಬೇಕೆಂದು ಹೇಳುತ್ತಾನೆ.
ಮೊದಲಿಗೆ ಅಂಶಗಣಾತ್ಮಕವಾಗಿದ್ದ ಕೆಲವು ಛಂದಸ್ಸುಗಳು ಮಾತ್ರಾ ಛಂದಸ್ಸುಗಳಾಗಿ ಪರಿವರ್ತನೆಯಾಗುತ್ತಿದ್ದ ಸಮಯದಲ್ಲಿ ಮದನವತಿಯೂ ಸಹ ಬದಲಾಗಿರಬೇಕು ಹಾಗಾಗಿ ಜಯಕೀರ್ತಿಯು ಈ ಸೂತ್ರವನ್ನು ರಚಿಸಿರಬಹುದು.
ಗೀತಿಕೆ
ನಾಗವರ್ಮನ ಛಂದೋಂಬುಧಿ ಮತ್ತು ಜಯಕೀರ್ತಿಯ ಛಂದೋನುಶಾಸನ ಇಬ್ಬರು ಕವಿಗಳೂ ಗೀತಿಕೆಯ ಲಕ್ಷಣವನ್ನು ಕುರಿತು ಒಂದೇ ರೀತಿಯಾಗಿ ಹೇಳಿದ್ದಾರೆ.
ಪ್ರಥಮಾರ್ಧದಲ್ಲಿ 1ನೇ ಸಾಲು 3 ಗಣ, 2ನೇ ಸಾಲು 4 ಗಣಗಳನ್ನೊಳಗೊಂಡಿರುತ್ತದೆ. ಹಾಗೆಯೇ ದ್ವಿತಿಯಾರ್ಧದಲ್ಲಿ 1ನೇ ಸಾಲು 3 ಗಣ, 2ನೇ ಸಾಲು 4 ಗಣಗಳನ್ನು ಹೊಂದಿರುತ್ತದೆ. ಈ ಎರಡೂ ಅರ್ಧಗಳನ್ನು ಸೇರಿ 4 ಸಾಲಿನ ಪದ್ಯವಾಗುವುದು.
ಈ ಛಂದಸ್ಸು ವಿಷಮ ಪಾದಗಳನ್ನು ಹೊಂದಿದ್ದು ಪ್ರಥಮಾರ್ಧ ಮತ್ತು ದ್ವಿತಿಯಾರ್ಧ ಎಂಬ ಭಾಗಗಳನ್ನು ಹೊಂದಿದೆ. ಪ್ರಥಮಾರ್ಧದಲ್ಲಿ 7 ಗಣಗಳು ಮತ್ತು ದ್ವಿತಿಯಾರ್ಧದಲ್ಲಿ 7 ಗಣಗಳು ಬರುತ್ತವೆ.
ನಾಗವರ್ಮನ ಲಕ್ಷಣ ಪದ್ಯದ ಪ್ರಥಮಾರ್ಧದ ಸಾಲುಗಳು
U UU U _ |_ U| _ U _
ಎರಡರೊಳಾ|ರೆಂಬ| ಸಂಖ್ಯೆಯೊಳ್
UU _U | U U U U|U U _| U U UU _
ಬರೆ ಪದ್ಮ | ಭವನುರೆ|ದುವು ಮ|ಚ್ಚುವ ತೆರದಿಂ|
ಸಾಧಾರಣವಾಗಿ 1ನೇ ಮತ್ತು 3ನೇ ಸಾಲಿನಲ್ಲಿ 2 ಗಣವು ಬ್ರಹ್ಮಗಣವಾಗಿರುತ್ತದೆ. ಹಾಗೆಯೇ 2 ಮತ್ತು 4ನೇ ಸಾಲಿನಲ್ಲಿ 3 ನೇ ಗಣವು ಬ್ರಹ್ಮ ಗಣವಾಗಿರುತ್ತದೆ. ಉಳಿದ ಗಣಗಳೆಲ್ಲವೂ ವಿಷ್ಣು ಅಥವಾ ರುದ್ರಗಣಗಳಾಗಿರುತ್ತವೆ. ಆದರೆ ಇದು ಕಡ್ಡಾಯವೆಂದಲ್ಲ ಕೆಲವೊಮ್ಮೆ ಮೇಲೆ ಹೇಳಿದ ಸ್ಥಾನಗಳಲ್ಲಿ ಬ್ರಹ್ಮಗಣಗಳಿಗೆ ಬದಲಾಗಿ ವಿಷ್ಣು ಅಥವಾ ರುದ್ರಗಣಗಳು ಸಹ ಬರಬಹುದು.
ಉತ್ಸಾಹ
ಜಯಕೀರ್ತಿ ಇದನ್ನು ಉತ್ಸವ ಎಂದು ಸಹ ಕರೆದಿದ್ದಾನೆ.
ಅಗ್ಗಳನ ಚಂದ್ರಪ್ರಭಪುರಾಣದಲ್ಲಿ (ಕ್ರಿ.ಶ. 1189) ಇದರ ಉಲ್ಲೇಖ ಬಂದಿದೆ. ಆದರೆ ಮೊಟ್ಟ ಮೊದಲನೆಯದಾಗಿ ಉತ್ಸಾಹದ ಉಲ್ಲೇಖ ಕಾಣಸಿಗುವುದು ಜಯಸಿಂಹನ ತಲಂಗೆರೆ ಶಾಸನದಲ್ಲಿ (ಸು. 10ನೆ ಶ)
4 ಪಾದಗಳನ್ನು ಹೊಂದಿದ್ದು, ಪ್ರತಿ ಪಾದದಲ್ಲಿ ಬ್ರ, ಬ್ರ, ಬ್ರ, ಬ್ರ, ಬ್ರ, ಬ್ರ, ಬ್ರ, ಗುರು.
_ U| U U U| U UU | U U U| UU U| _ U| _ U| _
ಊರ| ಕಡೆಯ| ತೊರೆಯ| ತಡಿಯ| ಕರೆಯ| ಕಲ್ಲ| ಮೋಙ| ದಿಮ್
ಸೀಸ
ಸೀಸವು ತ್ರಿಪದಿಯಂತೆ ಮಾತ್ರಾಗಣ ಹಾಗೂ ಅಂಶಗಣಗಳೆರಡಕ್ಕೂ ಸರಿಹೊಂದುವ ಲಯವನ್ನು ಹೊಂದಿದೆ.
ಇದು ನಾಲ್ಕು ಸಾಲಿನ ಪದ್ಯವಾಗಿದ್ದು ಪ್ರತಿಪಾದದಲ್ಲೂ ಆದಿಪ್ರಾಸ ಕಡ್ಡಾಯವಾಗಿ ಬರುತ್ತದೆ.
ಸೀಸ ಪದ್ಯ ಮೂಲತಃ ಶೀರ್ಷಕ ಎಂಬ ಪದದಿಂದ ಹುಟ್ಟಿಕೊಂಡಿದೆ. ಶೀರ್ಷಕ ಹೆಸರಿನ ಪ್ರಾಕೃತ ಭಾಷೆಯ ಮಾತ್ರಾವೃತ್ತವೊಂದು ಸೀಸದ ಮೂಲವಾಗಿರಬಹುದು
ಪ್ರಾಕೃತ ಮೂಲದ ಶೀರ್ಷಕ ತೆಲುಗಿಗೆ ಬರುವಾಗ ಅಂಶರಚನೆಯಾಗಿ ಬಳಕೆಯಾಯಿತು. ಶೀರ್ಷಕ ಎಂಬ ಪದ ತದ್ಭವ ರೂಪ ಹೊಂದಿ ಸೀಸವಾಯಿತು.
ಸುಮಾರು 16-17ನೇ ಶತಮಾನದಲ್ಲಿ ಕನ್ನಡಕ್ಕೆ ತೆಲುಗು ಸಾಹಿತ್ಯ ಪ್ರಭಾವದಿಂದ ಸೀಸಪದ್ಯಗಳು ಬಂದವು.
ಸುಮಾರು 9-10ನೇ ಶತಮಾನದಲ್ಲಿ ಧರ್ಮವರಂನ ಶಾಸನದಲ್ಲಿ ಸೀಸಪದ್ಯಪ್ರಯೋಗ ಕಾಣುತ್ತದೆ.
ಕನ್ನಡದಲ್ಲಿ ಚನ್ನಪ್ಪಕವಿ ಕೃತ ಶರಣಲೀಲಾಮೃತವೆಂಬ ಯಕ್ಷಗಾನ ಕೃತಿಯಲ್ಲಿ ಮೊದಲ ಸೀಸಪದ್ಯ ಪ್ರಯೋಗವಾಗಿದೆ (ಸು 1750) ಎಂದು ಕಿಟ್ಟೆಲ್ ರವರು ಗುರುತಿಸಿದ್ದಾರೆ.
ಪ್ರತಿಪಾದಕ್ಕೆ 6 ವಿಷ್ಣು ಗಣಗಳು ಮತ್ತು 2 ಬ್ರಹ್ಮ ಗಣಗಳು ಬರುವಂತೆ 4 ಪಾದಗಳು ಇರುತ್ತವೆ.
ಛಂದೋಂಬುಧಿ ಕೃತಿಯಲ್ಲಿ ಕಂದಪದ್ಯದ ಮೂಲಕ ಹೇಳಲಾಗಿರುವ ಸೀಸದ ಲಕ್ಷಣ ಪದ್ಯ
U U _ U|UU U _। _ UU। UU UU।UU UU। UU _ U। U U _
ಪುರುಹೂತ|ಗಣಗಳಾ।ರುಂಸರ।ಸಿಜಸಖ।ಗಣಗಳೆ।ರಡು ಸಂಧಿ।ಸಿ ಬರ್ಕುಂ |
ಚರಣಕ್ಕೆ ಸೀಸ ದಂತದೊ|ಳೊರೆ ಗೀತೆಯ ಸರಳಮಪ್ಪೊಲೋದುವ ತೆರದಿಂ ||
ಕವಿಜಿಹ್ವಾಬಂಧನದಲ್ಲಿನ ಉದಾಹರಣೆ
ತಿಂಗಳ ತಲೆಗಿಟ್ಟಂ ಕಂಗಳ ಮೂರಾಂತಂ ಭೃಂಗಿನಾಟ್ಯಪ್ರಿಯ ಭೀತಿನಾಶ
ಮಂಗಳೆಯರ ಮೆಯ್ಯ ಮದನ ವಿಧ್ವಂಸನ ಲಿಂಗ ನಿರ್ಮಲ ರೂಪ ಲೀ(ಲಾ) ವಿಭವ|
ಸಂಗೀತರಸಲೋಲ ಸಾಹಿತ್ಯದಾನಂದ ಪೊಂಗುವರ್ಕನಂತೆ ಪುದಿದ ಕಿರಣ
ತುಂಗಲೋಲ ವಿಭವ ತೋರುವ ಜಗದ್ರೂಪ ಭೃಂಗ ವಿಭ್ರಮ ಕಂಠ ಭೋ(ಗಾ)ಭರಣ||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ