ಪ್ರಾಸ, ಯತಿ, ಲಯ, ವಡಿ
ಪ್ರಾಸ
ಒಂದು ನಿರ್ದಿಷ್ಟ ವ್ಯಂಜನವು ಪದ್ಯದ ಪ್ರತಿ ಸಾಲಿನ ಮೊದಲಲ್ಲಿ, ಮಧ್ಯದಲ್ಲಿ, ಅಥವಾ ಕೊನೆಯಲ್ಲಿ ನಿಯತವಾಗಿ ಬರುವುದೇ ಪ್ರಾಸ. ಪದ್ಯದ ಪ್ರತಿಸಾಲಿನ ಮೊದಲ ಮತ್ತು ಎರಡನೆಯ ಸ್ವರಗಳ ನಡುವೆ ಬರುವುದು ಆದಿ ಪ್ರಾಸ. ಪ್ರತಿಸಾಲಿನ ಮಧ್ಯದಲ್ಲಿ ಬರುವುದು ಮಧ್ಯ ಪ್ರಾಸ. ಪ್ರತಿಸಾಲಿನ ಅಂತ್ಯದಲ್ಲಿ ಬರುವುದು ಅಂತ್ಯ ಪ್ರಾಸ.
ಶ್ರೀ ವಿಜಯನು ಶಬ್ದಾಲಂಕಾರದೊಳ್ ಅತಿಶಯಮೀ ಕನ್ನಡಕ್ಕೆ ಸತತಂ ಪ್ರಾಸಂ ಎಂದು ಹೇಳಿದ್ದಾನಲ್ಲದೆ, ವಿನುತಪ್ರಾಸ, ಶಾಂತೋಪನತಪ್ರಾಸ, ವರ್ಗೋದಿತಪ್ರಾಸ, ಸಮೀಪಗತಪ್ರಾಸ, ಅನುಗತಪ್ರಾಸ, ಅಂತರ್ಗತಪ್ರಾಸ ಎಂಬ ಆರು ಬಗೆಯ ಪ್ರಾಸಗಳಾಗಿ ವಿಂಗಡಿಸಿದ್ದಾನೆ. ಇದೇ ಕವಿರಾಜಮಾರ್ಗದಲ್ಲಿ ಮುಂದುವರೆದದು ಅಲ್ಪಪ್ರಾಣಪ್ರಾಸ, ಮಹಾಪ್ರಾಣಾಪ್ರಾಸ ಮತ್ತು ಮಿತಾಕ್ಷರಪ್ರಾಸ ಎಂಬ ಮೂರು ಬಗೆಯ ಪ್ರಾಸಗಳನ್ನು ಮತ್ತು ಯುಗ್ಮವರ್ಣಪ್ರಾಸ, ತ್ರ್ಯಕ್ಷರಪ್ರಾಸ, ಅನುಪ್ರಾಸ ಮತ್ತು ಅಂತ್ಯಪ್ರಾಸಗಳೆಂಬ ನಾಲ್ಕು ರೀತಿಯ ಪ್ರಾಸಗಳನ್ನು ಸಹ ಹೆಸರಿಸಿದ್ದಾನೆ.
ಕವಿರಾಜಮಾರ್ಗ - ಎರಡನೆಯ ಪರಿಚ್ಛೇದ
ಪಾದದೊಳ್ ಎರಡನೆಯ ಅಕ್ಕರಮ್ ಆದರದಿಂದ ಆದುದಾವುದು ಅದನರಿದನಿತುಂ
ಪಾದದೊಳ್ ಇಡುವುದು ಅದಕ್ಕುಂ ಭೇದೋಕ್ತಿಕ್ರಮ ವಿಚಾರಿತೋರುಪ್ರಾಸಂ
ಪ್ರಾಸ ಪ್ರಕಾರಗಳು
ಈಶ್ವರ ಕವಿಯು ತನ್ನ ಕವಿಜಿಹ್ವಾಬಂಧನ ಕೃತಿಯಲ್ಲಿ 13 ಬಗೆಯ ಪ್ರಾಸಗಳನ್ನು ಕುರಿಯು ಹೇಳಿದ್ದಾನೆ, ಪ್ರಾಸದ ಕುರಿತು ಅವನು ಹೇಳಿರುವ ಸೂತ್ರ
ಮೊದಲಕ್ಕರದಿಂ ಮುಂತಣದದು ನೋಡಲ್ ಪ್ರಾಸದಕ್ಕರಂ ತತ್ಪ್ರಾಸಂ
ವಿದಿತಂ ನಾಲ್ಕುಂ ಪಾದಕ್ಕುದಯಿಸುಗುಂ ವರ್ಣವೊಂದೆ ಪದಪದ್ಯಕ್ಕಂ
ಗುಣಚಂದ್ರನು ತನ್ನ ಛಂದಸ್ಸಾರದಲ್ಲಿ ಸುಕರಪ್ರಾಸ, ಅನುಪ್ರಾಸ, ದುಷ್ಕರಪ್ರಾಸ, ಅಂತ್ಯಪ್ರಾಸ ಮತ್ತು ದ್ವಿಪ್ರಾಸಗಳೆಂಬ ಐದು ಪ್ರಕಾರಗಳನ್ನು ಹೇಳಿದ್ದಾನೆ.
ನಂದಿ ಛಂದೋರ್ಣವದ ಕೃತಿಕಾರ ವೀರಭದ್ರನು ಸುಕರ, ದ್ವಂದ್ವ, ಮಿತ್ರ ಮತ್ತು ಅಂತ್ಯ ಎಂಬ ನಾಲ್ಕು ಬಗೆಯ ಪ್ರಾಸಗಳ ಕುರಿತು ಹೇಳಿದ್ದಾನೆ.
ಮೂರನೇ ಸೋಮೇಶ್ವರನು ತನ್ನ ಮಾನಸೋಲ್ಲಾಸ ಕೃತಿಯಲ್ಲಿ ತ್ರಿಪದಿ ಮತ್ತು ಷಟ್ಪದಿಯ ಲಕ್ಷಣಗಳನ್ನು ಕುರಿತು ಹೇಳುವಾಗ ಪ್ರಾಸಾಕ್ಷರಗಳನ್ನು ಪ್ರಾಣಾಕ್ಷರಗಳು ಎಂದಿದ್ದಾನೆ.
ಸಿಂಹ ಪ್ರಾಸ : ಒಂದು ಎರಡನೆಯ ಸ್ವರಗಳ ನಡುವೆ ಒಂದೇ ವಿಧದ ಒಂದು ವ್ಯಂಜನವು ಬಂದು ಹಿಂದಿನ ಸ್ವರ ಹ್ರಸ್ವವಾಗಿದ್ದರೆ ಸಿಂಹಪ್ರಾಸ.
ಗಜ ಪ್ರಾಸ : ಒಂದು ಎರಡನೆಯ ಸ್ವರಗಳ ನಡುವೆ ಒಂದೇ ವಿಧದ ಒಂದು ವ್ಯಂಜನವು ಬಂದು ಹಿಂದಿನ ಸ್ವರವು ದೀರ್ಘವಾಗಿದ್ದರೆ ಗಜಪ್ರಾಸ.
ವೃಷಭ ಪ್ರಾಸ : ಪ್ರಾಸಾಕ್ಷರದ ಹಿಂದೆ ಅನುಸ್ವಾರವಿದ್ದರೆ (0) ವೃಷಭಪ್ರಾಸ.
ಅಜ ಪ್ರಾಸ : ಪ್ರಾಸಾಕ್ಷರದ ಹಿಂದೆ ವಿಸರ್ಗವಿದ್ದರೆ (ಃ) ಅಜಪ್ರಾಸ.
ಹಯ ಪ್ರಾಸ : ಒಂದೇ ಜಾತಿಯ ಎರಡು ವ್ಯಂಜನಗಳು ಪ್ರಾಸಾಕ್ಷರಗಳಾಗಿದ್ದರೆ ಹಯಪ್ರಾಸ.
ಶರಭ ಪ್ರಾಸ : ಬೇರೆ ಬೇರೆ ಜಾತಿಯ ಎರಡು ಮೂರು ವ್ಯಂಜನಗಳು ಪ್ರಾಸಾಕ್ಷರಗಳಾಗಿದ್ದರೆ ಶರಭಪ್ರಾಸ.
ಪ್ರಾಸವನ್ನು ಕುರಿತು ನಾಗವರ್ಮನ ಸೂತ್ರ
ನಿಜದಿಂ ಬಂದೊಡೆ ಸಿಂಹಂ
ಗಜದೀರ್ಘಂ ಬಿಂದು ವೃಷಭ ವ್ಯಂಜನ ಶರಭಂ
ಅಜನು ವಿಸರ್ಗಂ ಹಯನಂ
ಬುಜಮುಖಿದಡ್ಡಕ್ಕರಂಗಳಿವು ಷಟ್ ಪ್ರಾಸಂ
ವಿನುತಪ್ರಾಸ, ಶಾಂತಪ್ರಾಸ, ವರ್ಗಪ್ರಾಸ, ಸಮೀಪಪ್ರಾಸ (ಸಮೀಪಗತ ಪ್ರಾಸ), ಅನುಪ್ರಾಸ (ಅನುಗತ ಪ್ರಾಸ), ಅಂತಪ್ರಾಸ (ಅಂತಗತ ಪ್ರಾಸ), ದ್ವಿಪ್ರಾಸ (ದ್ವಿವರ್ಣ ಪ್ರಾಸ), ತ್ರಿಪ್ರಾಸ (ತ್ರಿವರ್ಣ ಪ್ರಾಸ), ದ್ವಂದ್ವಪ್ರಾಸ, ಅಂತ್ಯಾದಿಪ್ರಾಸ (ಆದ್ಯಂತ ಪ್ರಾಸ) ಇವು ಇತರ ಪ್ರಮುಖ ಪ್ರಾಸಗಳು.
ಯತಿ
ಯತಿ ಎಂದರೆ ಕಾವ್ಯವನ್ನು ಓದುವಾಗ ಅರ್ಥಕ್ಕೆ ಅಡ್ಡಿಯಾಗದಂತೆ ಉಸಿರು ತೆಗೆದುಕೊಳ್ಳಲು ನಿಲ್ಲಿಸುವ ತಾಣ.
ಯತಿಯನ್ನು ಕುರಿತು ಶ್ರೀವಿಜಯ
- ದೋಸಮನೆ ಗುಣದವೋಲುದ್ಭಾಸಿಸಿ ಕನ್ನಡದೊಳೊಲ್ದು ಪೂರ್ವಾಚಾರ್ಯರ್
- ದೇಸಿಯನೆ ನಿರಿಸಿ ಖಂಡಪ್ರಾಸಮನತಿಶಯಮಿದೆಂದು ಯತಿಯಂ ಮಿಕ್ಕರ್
- ಯತಿಯೆಂಬುದುಸಿರ್ವ ತಾಣಂ
ನಾಗವರ್ಮನು ಯತಿಯನ್ನು ಕುರಿತು ತನ್ನ ಛಂದೊಂಬುದಿಯಲ್ಲಿ ಯತಿಯೆಂಬುದು ಗಣನಿಯಮ ಪ್ರತತಿಗುಸಿರ್ದಾಣಮಪ್ಪುದು ಎಂತಲೂ, ಕಾವ್ಯಾವಲೋಕನದಲ್ಲಿ ನಿಯತಸ್ಥಾನಂ ಪದವಿಸ್ಮೃತಿಯೊಳಾದ ವಿರಾಮರಿಗೆ ಯತಿಯಕ್ಕುಂ ಎಂತಲೂ ಹೇಳಿದ್ದಾನೆ.
ಯತಿವಿಲಂಘನದಿಂದರಿದಲ್ತೆ ಕನ್ನಡಂ ಎಂಬ ನುಡಿಯಲ್ಲಿ ಕೇಶಿರಾಜನು ಯತಿಯು ಸಂಸ್ಕೃತದಲ್ಲಿಯಂತೆ ಕನ್ನಡಕ್ಕೂ ಕಡ್ಢಾಯವಲ್ಲ ಎಂದಿದ್ದಾನೆ.
ಯತಿಯು ವಿಶೇಷವಾಗಿ ವೃತ್ತಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತದೆ.
ಲಯ
ಪದ್ಯವನ್ನು ಹಾಡುವಾಗ ಇಂಪಾಗಿ ಕೇಳಲು ಕೆಲವೊಂದು ಏರಿಳಿತಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಈ ಏರಿಳಿತಗಳು ಆ ಹಾಡಿಗೆ ಮಾಧುರ್ಯವನ್ನು, ಕ್ರಮಗತಿಯನ್ನು ತಂದುಕೊಡುತ್ತವೆ ಇದನ್ನೇ ಲಯ ಎನ್ನಬಹುದು. ಇಂಗ್ಲಿಷ್‍ನಲ್ಲಿ ಇದಕ್ಕೆ ರಿದಮ್ ಎನ್ನುವರು.
ವಡಿ
ಪದ್ಯದ ಆಯಾ ಸಾಲಿನಲ್ಲಿ ಬರುವ ಮೊದಲ ಅಕ್ಷರ ಅಥವಾ ಅದರ ಸವರ್ಣಾಕ್ಷರ ಯತಿಯ ನಂತರ ಪುನರಾವರ್ತನೆಯಾದರೆ ಅದನ್ನು ವಡಿ ಎನ್ನುವರು
ವಡಿಯು ಕನ್ನಡದಲ್ಲಿ ಪ್ರಚುರವಾಗಿ ಬಳಕೆಯಲ್ಲಿಲ್ಲ. ಅದರ ಮೂಲ ತೆಲುಗು. ಒಟ್ಟು 20 ಪ್ರಕಾರದ ವಡಿಗಳಿವೆ
ಕನ್ನಡದಲ್ಲಿ ಮೊದಲ ಬಾರಿಗೆ ಇದರ ಪ್ರಸ್ತಾಪ ಮಾಡಿದವನು ಕವಿ ಜಿಹ್ವಾಬಂಧನ ಕೃತಿಕಾರ ಈಶ್ವರ ಕವಿ.
ವಡಿಯ ಕುರಿತು ಈಶ್ವರ ಕವಿಯ ಲಕ್ಷಣ ಪದ್ಯ
ಸ್ವರವಡಿಯೆಂದು ಮತ್ತಂ
ಸರಸದ ವಡಿಯೇಕ. ವರ್ಣ ಸಂಧಿಪ ವಡಿಯು
ನಿರುತಂ ಸಂಯುಕ್ತಾಕ್ಷರ
ಬೆರಸಿದ ವಡಿ ವರ್ಗ ವಡಿಯ ಭೇದಗಳೈದುಂ
ವೀರಭದ್ರ ಎಂಬ ಕವಿಯು (ಕಾಲ ಸು. 1846) ತನ್ನ ನಂದಿ ಛಂದೋರ್ಣವ ಕೃತಿಯಲ್ಲಿ ಮೊದಲ ಬಾರಿಗೆ ವಡಿಯನ್ನು ನಿಯತವಾಗಿ ಪಾಲಿಸಿದ್ದಾನೆ.
ನಂದಿ ಛಂದೋರ್ಣವದಲ್ಲಿನ ಲಕ್ಷಣ ಪದ್ಯ
ಬುಧವರಗಣಯುಗ್ಮಂ ಮುಂತೆ ಭೂವಾರಿಯುಗ್ಮಂ
ವಿಧಿಪದದಿ ಬರಲ್ಕಾ ವಿಶ್ರಮಂ ಮಾಲಿನಿ ಕೇಳ್
ಬುಧಜನನಿವಹಕ್ಕಂ ಭೂರಿಸಂತೋಷಮಕ್ಕುಂ
ವಿಧುಮುಖಿ ನಿನಗೆಂದುಂ ಪೇಳ್ವುದೇಂ ಕೇಳ್ವುದೆಂದುಂ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ