ಹೊಸಗನ್ನಡ ಛಂದಸ್ಸು

 ಹೊಸಗನ್ನಡ ಛಂದಸ್ಸು

ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದ ಸಂಪರ್ಕದಿಂದ ಕನ್ನಡದಲ್ಲಿ ಹೊಸಗನ್ನಡ ಛಂದಸ್ಸು ಬೆಳೆದು ಬಂದಿತು. 1919 ರಲ್ಲಿ ಬಿ.ಎಂ.ಶ್ರೀ ಅವರು ಇಂಗ್ಲಿಷ್ ಗೀತೆಗಳು ಕವನ ಸಂಕಲನ ಪ್ರಕಟವಾಗಿ ಹೊಸಗನ್ನಡ ಛಂದಸ್ಸಿಗೆ ನಾಂದಿ ಹಾಡಿತು.

ಮುಡಿ

ಷಟ್ಪದಿಗಳ 3 ಮತ್ತು 6 ನೇ ಸಾಲಿನಲ್ಲಿ ಕೊನೆಗೊಂದು ಮಾತ್ರೆ ಉಳಿದಿರುತ್ತದೆ. ಅದು ಲಘು ಅಥವಾ ಗುರು ಏನೇ ಆಗಿದ್ದರೂ ಅದನ್ನು ಗುರುವೆಂದೇ ಎನ್ನುವರು. ಆದರೆ ಹೊಸಗನ್ನಡದಲ್ಲಿ ಷಟ್ಪದಿಗಳನ್ನು ಬಳಸಿಕೊಂಡು ಬರೆದ ಆಧುನಿಕ ಕವಿಗಳು ಸಾಲಿನ ಮಧ್ಯದಲ್ಲಿ ಅಥವಾ ಕೊನೆಯಲ್ಲಿ ಒಂದು ಲಘು ಅಥವಾ ಗುರು ಪ್ರತ್ಯೇಕವಾಗಿ ಬರುವಂತೆ ಮಾಡಿದರು. ಆ ಒಂದೇ ಲಘು/ಗುರುವನ್ನು ಒಂದು ಪ್ರತ್ಯೇಕ ಗಣವನ್ನಾಗಿ ಗುರ್ತಿಸಿದರು. ಹೀಗೆ ಒಂದೇ ಲಘು ಅಥವಾ ಗುರು ಇರುವ ಗಣವೇ ಮುಡಿ ಎನಿಸಿತು.

ಇಲ್ಲಿ 3 ಮಾತ್ರೆಯ ಗಣಗಳು ಇರುವ ಪದ್ಯದ ಸಾಲಿನಲ್ಲಿ ಬಂದ ಮುಡಿಯು 3 ಮಾತ್ರೆಯ ಗಣ ಎನಿಸುವುದು. ಹಾಗೆಯೇ 4 ಮಾತ್ರೆಯ ಗಣಗಳ ಪದ್ಯದ ಸಾಲಿನಲ್ಲಿ ಬರುವ ಮುಡಿಯು 4 ಮಾತ್ರೆಯ ಗಣ ಎನಿಸುವುದು.

ಇದೇ ರೀತಿ 56 ಹೀಗೆ ಎಷ್ಟೇ ಮಾತ್ರೆಯ ಗಣಗಳಿರುವ ಪದ್ಯವಾಗಿದ್ದರೂ ಅದರಲ್ಲಿ ಬಂದ ಮುಡಿಯು ಆ ಸಾಲಿನಲ್ಲಿ ಎಷ್ಟು ಮಾತ್ರೆಯ ಗಣಗಳು ಇವೆಯೋ ಅಷ್ಟು ಮಾತ್ರೆಯ ಗಣವೆಂದು ಪರಿಗಣಿಸಲ್ಪಡುತ್ತದೆ.

ಸೇವೆಯಿಂ|ದುದ್ವೇಗ|ದಿಂ ಚೀರಿ|ದಳ್” ಈ ಸಾಲನ್ನು ಗಮನಿಸಿದಾಗ 5 ಮಾತ್ರೆಯ 3 ಗಣಗಳಿದ್ದು ಕೊನೆಗೆ ಒಂದು ಗುರು ಉಳಿದಿದೆ. ಕೊನೆಯಲ್ಲಿ ಬಂದ ಗುರುವನ್ನು ಸಹ 5 ಮಾತ್ರೆಯ ಒಂದು ಗಣ ಎಂದು ಭಾವಿಸಬೇಕು.

ಪದ್ಮಗಣ

ಹೊಸಗನ್ನಡ ಸಾಹಿತ್ಯದಲ್ಲಿ ಮಾತ್ರಾಗಣಗಳ ನಡುವೆ ಅಥವಾ ಕೊನೆಯಲ್ಲಿ 2 ಅಂಶದ ಬ್ರಹ್ಮಗಣದ ರಿತಿಯ ಗಣವನ್ನು ಸೇರಿಸಿ ಬಳಸಲಾಯಿತು. ಇದನ್ನೇ ತೀ.ನಂ.ಶ್ರೀ ಪದ್ಮಗಣ ಎಂದು ಕರೆದರು

ಈ ಪದ್ಮಗಣವು 456 ಮಾತ್ರೆಯ ಗಣಗಳ ಸಾಲಿನಲ್ಲಿ ಮಾತ್ರ ಬರುತ್ತದೆ.

ಕಿರಿಯ ಕೇಳ್ನೀನಿನ್ನುಮರಿಯೆ” ಈ ಸಾಲಿನಲ್ಲಿ ಮೊದಲೆರಡು ಗಣಗಳು 5 ಮಾತ್ರೆಯ ಗಣಗಳು ಇದ್ದು ಕೊನೆಯಲ್ಲಿ 2 ಅಂಶದ ಬ್ರಹ್ಮಗಣ ಇದೆ. ಇದನ್ನೇ ಪದ್ಮಗಣ ಎನ್ನುವರು.

ಅನಾಗತ

ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಇಲ್ಲದ ಈ ಅಂಶವನ್ನು ಆಧುನಿಕ ಕನ್ನಡ ಕವಿಗಳು ಹೊಸಗನ್ನಡದಲ್ಲಿ ವಿಶೇಷವಾಗಿ ಬಳಕೆಗೆ ತಂದರು.

ಪದ್ಯದ ಸಾಲಿನ ಪ್ರಾರಂಭದಲ್ಲಿ ಮೊದಲು ಲಘು ಬಂದು ನಂತರ ಗುರು ಬಂದಿರುತ್ತದೆ. ಪ್ರಾರಂಭದಲ್ಲಿಯೇ ಲಘು ಬಂದು ನಂತರ ಗುರು ಬಂದಿರುವುದರಿಂದ ಕಾವ್ಯ ಓದುವಾಗ ಲಯ ತಪ್ಪಿದಂತೆ ಕಾಣುತ್ತದೆ. ಲಘು ತನ್ನ ಹಿಂದೆಯೇ ಬರುವ ಗುರುವಿನ ಒತ್ತನ್ನು ಕೆಲವೊಮ್ಮೆ ತಡೆದುಕೊಳ್ಳುವುದಿಲ್ಲ. ಲಘು ಅಕ್ಷರದ ನಂತರ ಬರುವ ಗುರುವಿನಿಂದ ಸಾಲು ಒಂದು ಲಯದಲ್ಲಿ ಸಾಗಲು ಆರಂಭವಾಗುತ್ತದೆ. ಇದನ್ನೇ ಅನಾಗತವಿಷಮ ಗಣ ಅಥವಾ ಹುಸಿಗಣ ಎನ್ನುವರು

ಅಬ್ಬರಿಸಿ ಚಿಮ್ಮುವ ಅಲೆಗಳನು

ಹುಬ್ಬೇರಿಸಿ ನೋಡ ನೀನು

ಇಲ್ಲಿ ಸಾಲುಗಳ ಮೊದಲಲ್ಲಿ ಲಘು ಬಂದು ನಂತರ ಹಿಂದೆಯೇ ಗುರು ಬಂದಿರುವುದರಿಂದ ಲಘುವಿನ ಮೇಲೆ ಒತ್ತಡ ಬಿದ್ದು ಉಚ್ಚರಿಸುವುದು ಕಷ್ಟವಾಗುತ್ತದೆ.

ಗಣ ಪರಿವೃತ್ತಿ

ಪದ್ಯದ ಲಯ ವಿಶಿಷ್ಟವಾಗಿ ಮೂಡಿಬರಲು ಬೇರೆ ಬೇರೆ ಗಣಗಳನ್ನು ಸೇರಿಸಿ ಪದ್ಯ ರಚನೆ ಮಾಡುವುದನ್ನು ಗಣ ಪರಿವೃತ್ತಿ ಎನ್ನುವರು. ಇಲ್ಲಿ 3456 ಹೀಗೆ ಲಯಕ್ಕನುಗುಣವಾಗಿ ಬೇರೆ ಬೇರೆ ಮಾತ್ರೆಯ ಗಣಗಳನ್ನು ಸೇರಿಸಿಕೊಂಡು ಪದ್ಯ ರಚನೆಯಾಗಿರುತ್ತವೆ.

ಅರುಣ ರಾಗದಿಂದ ಕೊಳದಲೆಗಳು ಕುಣಿಯುತಿಹವು

ಈ ಮೇಲಿನ ಪದ್ಯದಲ್ಲಿ 3666 ಮಾತ್ರೆಯ ಗಣಗಳು ಕಂಡುಬಂದಿವೆ.

ಕಂಪಿತ

ಪದ್ಯದ ಸಾಲಿನಲ್ಲಿ 1 ಮಾತ್ರೆಗೆ ಲಘು ಎಂತಲೂ2 ಮಾತ್ರೆಗೆ ಗುರು ಎಂತಲೂ ಕರೆಯುವರು. ಕೆಲವೊಮ್ಮೆ ಲಯವನ್ನು ಕಾಯ್ದುಕೊಳ್ಳಲು 3 ಮಾತ್ರೆಗೂ ಮೀರಿ ಉಚ್ಚಾರಣೆಯನ್ನು ಮಾಡುತ್ತಾರೆ. ಇದನ್ನೇ ತೀ.ನಂ.ಶ್ರೀ ಅವರು ಕಂಪಿತ ಎಂದು ಕರೆದಿರುವರು.

ರಾಮ ದರ್ಶನ ಪಡೆದ ಶಬರಿ ಹಾ,,,, ರಾಮಾ ಎಂದು ಉದ್ಗರಿಸಿದಳು

ಇಲ್ಲಿ ಹಾ,,, ಎಂಬ ಅಕ್ಷರ 3 ಮಾತ್ರಾ ಕಾಲಕ್ಕೂ ಮೀರಿ ಉಚ್ಛಾರವಾಗಿದೆ. ಇದೇ ಕಂಪಿತ.

ಮೌನ

ಪದ್ಯವನ್ನು ಹಾಡುವಾಗ ಲಯ ಸರಿ ಹೊಂದದಿದ್ದರೆ ಅಲ್ಲಿ ಬೇರೊಂದು ಅಕ್ಷರವನ್ನು ಹಾಕಿ ಲಯವನ್ನು ಸರಿಪಡಿಸಿಕೊಳ್ಳಬೇಕಾಗುತ್ತದೆ. ಆದರೆ ಕೆಲವೊಮ್ಮೆ ಆ ಸ್ಥಾನದಲ್ಲಿ ಬೇರೆ ಅಕ್ಷರವನ್ನು ತಂದರೂ ಲಯವು ಸರಿ ಹೊಂದುವದಿಲ್ಲ. ಆಗ ಲಯವನ್ನು ಹೊಂದಿಸಲು ಅಲ್ಲಿ ಸ್ವಲ್ಪ ವಿರಾಮವನ್ನು ತೆಗೆದುಕೊಳ್ಳುವರು. ಅದನ್ನೇ ಮೌನ ಎನ್ನುವರು. ಮೌನವನ್ನು ^ ಸಂಖೇತದಿಂದ ಸೂಚಿಸುವರು


ಹೊಸಗನ್ನಡ ಛಂದೋರೂಪಗಳು

ಸರಳ ರಗಳೆ

ರಗಳೆಯ ಅತ್ಯಂತ ಪ್ರಮುಖ ಲಕ್ಷಣವೆಂದರೆ ಪ್ರಾಸದಿಂದ ಕೂಡಿರುವುದು. ಹೊಸಗನ್ನಡ ಸಾಹಿತ್ಯದಲ್ಲಿ ರಗಳೆಯನ್ನು ಪ್ರಾಸರಹಿತವಾಗಿ ಬಳಸಿಕೊಂಡು ಅದಕ್ಕೆ ಸರಳ ರಗಳೆ ಎಂದು ಹೆಸರಿಟ್ಟರು. ಇದನ್ನು ಇಂಗ್ಲಿಷ್ ನಲ್ಲಿ ಬ್ಲಾಂಕ್ ವರ್ಸ್ ಎನ್ನುವರು.

ಪ್ರಮುಖ ಕೃತಿಗಳು

ಹಾಳೂರು - ಶ್ರೀನಿವಾಸರು (ಮಾಸ್ತಿ)

ಕುವೆಂಪು - ನಾಟಕಗಳು : ಯಮನ ಸೋಲು, ಬಿರುಗಾಳಿ, ರಕ್ತಾಕ್ಷಿ.

ಕಾವ್ಯಗಳು : ಚಿತ್ರಾಂಗದಾ. ಜೋಗಸಂಸ್ಕೃತ ಮಾತೆ

ಅಶ್ವತ್ಥಾಮನ್ - ಬಿ.ಎಂ.ಶ್ರೀ

ಗೋಲ್ಗೊಥಾ ಗೋವಿಂದ ಪೈ

ನಾಗರಿಕ  ಎಂ.ಆರ್ ಶ್ರೀನಿವಾಸಮೂರ್ತಿ

ಮಹಾಛಂದಸ್ಸು

ಮೊದಲಬಾರಿಗೆ ಕುವೆಂಪು ಅವರು ತಮ್ಮ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಮಹಾಛಂದಸ್ಸನ್ನು ಬಳಸಿದರು.

ಮಹಾ ಛಂದಸ್ಸಿನಲ್ಲಿ ಪದ್ಮಗಣ ಮತ್ತು ಮುಡಿಗಳನ್ನು ಬಳಸಲಾಗಿರುತ್ತದೆ.

ಅಷ್ಟ ಷಟ್ಪದಿ/ಸುನೀತ

ಇಟಲಿಯ ಕವಿ ಡಾಂಟೆ ಈ ಪ್ರಕಾರವನ್ನು ಮೊದಲ ಬಾರಿಗೆ ಬಳಸಿದನು. ಈ ಛಂದೋಪ್ರಕಾರವನ್ನು ಪ್ರಸಿದ್ಧಗೊಳಿಸಿದವನು ಪೆಟ್ರಾರ್ಕ್ ಕವಿ. ಇಂಗ್ಲಿಷ್ ನಲ್ಲಿ ಶೇಕ್ಸ್ಪಿಯರ್ ಸಾನೆಟ್ ಅನ್ನು ಯಥೇಚ್ಛವಾಗಿ ಬಳಸಿ ಜನಪ್ರಿಯಗೊಳಿಸಿದನು.

ಕನ್ನಡ ಸಾಹಿತ್ಯದಲ್ಲಿ ಅಷ್ಡ ಷಟ್ಪದಿಗೆ ಸುನೀತಚತುರ್ದಶಪದಿ ಎಂಬ ಹೆಸರುಗಳು ಸಹ ಇವೆ. ಸುನೀತದ ಮೊದಲ ಭಾಗಕ್ಕೆ ಅಷ್ಟಪದ (ಆಕ್ಟೇವ್) ಮತ್ತು ದ್ವಿತೀಯ ಭಾಗಕ್ಕೆ ಷಟ್ಪದ (ಸೆಸ್ಟರ್) ಎನ್ನುವರು.

ಮಾಸ್ತಿಯವರು ಅಷ್ಟ ಷಟ್ಪದಿಯನ್ನು ಕುರಿತು ‘ಭಾವ, ಊಹೆಗಳ ರಸ ರಾಗಗಳ ಮೇಳ’ ಎಂದಿದ್ದಾರೆ.

ಮುಕ್ತ/ಸ್ವಚ್ಛಂದ ಛಂದಸ್ಸು

ಟಿ.ಎಸ್ ಇಲಿಯಟ್ ತನ್ನ ವೇಸ್ಟ್ ಲ್ಯಾಂಡ್ ಕೃತಿಯಲ್ಲಿ ಫ್ರೀ ವರ್ಸ್ ಛಂದಸ್ಸನ್ನು ಮೊದಲಬಾರಿಗೆ ಬಳಸಿದನು.

ಕಾವ್ಯದ ಲಯಕ್ಕೆ ತಕ್ಕ ಹಾಗೆ ಪಾದಗಳ ಗಾತ್ರ ಹಿಗ್ಗುತ್ತಾ ಕುಗ್ಗುತ್ತಾ ಹೋಗುತ್ತದೆ. ಯಾವುದೇ ನಿಬಂಧನೆಗಳಿಲ್ಲದೇ ರಚಿಸಲ್ಪಡುವ ಛಂದಸ್ಸಿದು. ಇಂತಿಷ್ಟೇ ಸಾಲುಗಳು ಇರಬೇಕೆಂಬ ನಿಯಮವೂ ಇರವುದಿಲ್ಲ. ಇದನ್ನು ನವ್ಯ ಛಂದಸ್ಸು ಎಂತಲೂ ಕರೆಯುವರು.

1940 ರಲ್ಲಿ ರಚನೆಯಾದ ಸಮುದ್ರ ಗೀತೆಗಳು ಎಂಬ ಕವನ ಸಂಕಲದಲ್ಲಿನ ಪ್ರತಿಜ್ಞೆ ಎಂಬ ಕವನದ ಮೂಲಕ ಕನ್ನಡದಲ್ಲಿ ಮುಕ್ತ ಛಂದಸ್ಸನ್ನು ಮೊದಲು ಬಳಕೆಗೆ ತಂದವರು ವಿ.ಕೃ ಗೋಕಾಕರು.

ಅಡಿಗರ ಭೂಮಿಗೀತ ಕವನ ಸಂಕಲನದ ಪದ್ಯ

ಮಲೆಘಟ್ಟ ಸೋಪಾನ ಕೆಳಪಟ್ಟಿಯಲಿ

ಉರುಳು ಮೂರೇ ಉರುಳು ಕಡಲ ಕುದಿತದ

ಎಣ್ಣೆ ಕೊಪ್ಪರಿಗೆಗೆ

ಪ್ರಗಾಥ

ಇಂಗ್ಲಿಷ್ ಸಾಹಿತ್ಯದಲ್ಲಿ ಬರುವ ಓಡ್ ಎಂಬ ಕಥನ ಕಾವ್ಯದಿಂದ ಪ್ರೇರಣೆಯಾಗಿ ಕನ್ನಡದಲ್ಲಿ ಬಳಕೆಗೆ ಬಂದ ಸಾಹಿತ್ಯವೇ ಪ್ರಗಾಥ.

ಡಿ.ವಿ.ಜಿ ಅವರ ಬೇಲೂರಿನ ಶಿಲಾಬಾಲಿಕೆಯರು ಕನ್ನಡದ ಮೊದಲ ಪ್ರಗಾಥವಾಗಿದೆ. 1920 ರಲ್ಲಿ ರಚನೆಯಾದ ಬಿ.ಎಂ.ಶ್ರೀ ಅವರ ಮೈಸೂರು ಮಕ್ಕಳು ಮತ್ತೊಂದು ಪ್ರಮುಖ ಪ್ರಗಾಥ.

ಕಾಮೆಂಟ್‌ಗಳು